Advertisement

ಎಲ್ಲೆಡೆ ಶ್ರೀರಾಮನ ಸ್ಮರಣೆ

01:14 PM Mar 26, 2018 | Team Udayavani |

ಬೆಂಗಳೂರು: ನಗರದ ವಿವಿಧೆಡೆ ಭಾನುವಾರ ಶ್ರೀರಾಮನವಮಿ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇವಾಲಯ, ರಾಗೀಗುಡ್ಡದ ಆಂಜನೇಯಸ್ವಾಮಿ ದೇವಾಲಯ, ಕೋಟೆ ಆಂಜನೇಯ ಸ್ವಾಮಿ ದೇವಾಲಯ, ಮತ್ತಿಕೇರಿಯ ಶ್ರೀ ಕೋದಂಡರಾಮ ದೇವಾಲಯ ಸೇರಿದಂತೆ ನಗರದ ಹಲವು ದೇವಾಲಯಗಳಲ್ಲಿ ಶ್ರೀರಾಮನ ಪೂಜೆ, ಕೈಂಕರ್ಯ ಜೋರಾಗಿತ್ತು. ಶ್ರೀರಾಮ ನವಮಿಯ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ
ಪೂಜೆ ಜರುಗಿದವು. ಭಕ್ತಾದಿಗಳಿಗೆ ಪಾನಕ ಮತ್ತು ಕೋಸಂಬರಿ ವಿತರಿಸಲಾಯಿತು. ಆಂಜನೇಯ ಸ್ವಾಮಿ ದೇವಾಲಯಗಳನ್ನು ವಿಶೇಷ ರೀತಿಯಲ್ಲಿ ಆಲಂಕರಿಸಲಾಗಿತ್ತು. ಹಿರಿಯರು, ಕಿರಿಯರಾದಿಯಾಗಿ ಸರದಿಯ ಸಾಲಿನಲ್ಲಿ ನಿಂತು ಶ್ರೀರಾಮನಿಗೆ ಪೂಜೆ ಸಲ್ಲಿಸಿದರು.

Advertisement

ಯಶವಂತಪುರದ ದಾರಿ ಆಂಜನೇಯ ಸ್ವಾಮಿ ದೇವಾಲಯ, ಎನ್‌.ಆರ್‌.ಕಾಲೋನಿಯ ಶ್ರೀರಾಮ ಮಂದಿರ ಸೇರಿದಂತೆ ಹಲವು ದೇವಾಲಯಗಳಲ್ಲಿ ಶ್ರೀರಾಮನವಮಿ ಪ್ರಯುಕ್ತ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಹಲವು ದೇವಾಲಯಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮಗಳು ಕೂಡ ಜರುಗಿದವು. ಮಲ್ಲೇಶ್ವರದ ಬೀದಿಗಳಲ್ಲಿ ಶ್ರೀರಾಮದೇವರ ವಿಗ್ರಹದ ಮೆರೆವಣಿಗೆ ನಡೆಯಿತು. ನೂರಾರು ಸಂಖ್ಯೆಯಲ್ಲಿ ಶ್ರೀರಾಮನ ಭಕ್ತರು ಈ ಮೆರವಣಿಗೆ ಯಲ್ಲಿ ಭಾಗವಹಿಸಿದ್ದರು. ಕೆಲವು ಕಡೆಗಳಲ್ಲಿ ಶ್ರೀರಾಮ ಮತ್ತು ಹನುಮಂತನ ಪೋಷಾಕುಧಾರಿಗಳ ಆಗಮನ ಮತ್ತಷ್ಟು ಗಮನ ಸೆಳೆಯಿತು. 

ರಾಮೋತ್ಸವದ ಅಂಗವಾಗಿ ಸಂಜೆ ನಗರದ ಹಲವು ದೇವಾಲಯಗಳಲ್ಲಿ ಭಕ್ತಿ ಸಂಗೀತ ಕಾರ್ಯ ಕ್ರಮಗಳು ನಡೆದು, ನೆರೆದ ಭಕ್ತರ ಚಿತ್ತಾಕರ್ಷಿಸಿದವು. ಶಂಕರಪುರಂನ ಗುಡ್ಡದ ಆಂಜನೇಯ ಸ್ವಾಮಿ ದೇವಾಲಯಲ್ಲಿ ಹೆಸರಾಂತ ಗಾಯಕ ಶಶಿಧರ್‌ ಕೋಟೆ ಸಂಗಡಿಗರು ನಡೆಸಿಕೊಟ್ಟ ಸುಗಮ ಸಂಗೀತ ಕಾರ್ಯಕ್ರಮ ಮೆಚ್ಚುಗೆಗೆ ಪಾತ್ರವಾಯಿತು.
 
ನರಸಿಂಹರಾಜ ಕಾಲೋನಿಯ ಶ್ರೀರಾಮಮಂದಿರಂ ಟ್ರಸ್ಟ್‌ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಭಕ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಗಾನ ಕಲಾ ಭೂಷಣ ವಿದ್ವಾನ್‌ ಆರ್‌.ಕೆ.ಪದ್ಮನಾಭ ಶಿಷ್ಯ ವೃಂದ ಪಾಲ್ಗೊಂಡಿತ್ತು. ಯಶವಂತಪುರದ ಶ್ರೀ ದಾರಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಸಂಗೀತ ವಿದ್ವಾನ್‌ ಚಿಂತಲಪಲ್ಲಿ ಶ್ರೀನಿವಾಸ್‌ ತಂಡವರು ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮಕ್ಕೆ ರಾಮ ಭಕ್ತರು ತಲೆದೂಗಿದರು. ಬಸವೇಶ್ವರ ನಗರದ ಶ್ರೀವಾಣಿ ಕಲಾ ಕೇಂದ್ರದಲ್ಲಿ ವಿದ್ವಾನ್‌ ಮೈಸೂರು ಎಂ. ನಾಗರಾಜ್‌ ಮತ್ತು ವಿದ್ವಾನ್‌ ಡಾ.ಮೈಸೂರು ಎಂ. ಮಂಜುನಾಥ್‌ ಅವರ ಯುಗಳ ಪಿಟೀಲು ವಾದನ ಸಂಗೀತ ರಸಿಕರನ್ನು ಆನಂದದ ಕಡಲಲ್ಲಿ ತೇಲಿಸಿತು.

Advertisement

Udayavani is now on Telegram. Click here to join our channel and stay updated with the latest news.

Next