ಕೊಪ್ಪಳ: ಗವಿಮಠದ 17ನೇ ಪೀಠಾಧಿಪತಿ ಲಿಂ. ಶ್ರೀ ಶಿವಶಾಂತವೀರರ 19ನೇ ಪುಣ್ಯಸ್ಮರಣೆಯ ಪಾದಯಾತ್ರೆ ನಗರದ ಮಳೆಮಲ್ಲೇಶ್ವರ ದೇವಸ್ಥಾನದಿಂದ ಗವಿಮಠದವರೆಗೂ ಶ್ರದ್ಧಾಭಕ್ತಿಯಿಂದ ಸಾಗಿತು.
ಪಾದಯಾತ್ರೆಯಲ್ಲಿ ಸಹಸ್ರಾರು ಭಕ್ತರು ಶಿವಶಾಂತವೀರ ಹಾಗೂ ಗವಿಸಿದ್ದೇಶ್ವರ ಸ್ವಾಮೀಜಿಗಳ ನಾಮಸ್ಮರಣೆ ಮಾಡಿದರು. ದಾರಿಯುದ್ದಕ್ಕೂ ಯಾತ್ರಿಗಳಿಗೆ ತಂಪುಪಾನೀಯ ವಿತರಿಸಲಾಯಿತು. ಸಂಪ್ರದಾಯದಂತೆ ಗವಿಮಠವು ಲಿಂಗೈಕ್ಯ ಶಿವಶಾಂತವೀರ ಸ್ವಾಮೀಜಿಗಳ ಪುಣ್ಯಸ್ಮರಣೆ ನಡೆಸಿಕೊಂಡು ಬರುತ್ತಿದೆ. ಆದರೆ ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಪುಣ್ಯಸ್ಮರಣೆ ಕಾರ್ಯಕ್ರಮ ಅತ್ಯಂತ ಸರಳವಾಗಿ ಆಚರಿಸಲಾಗಿತ್ತು.
ಪ್ರಸ್ತುತ ಕೋವಿಡ್ ಸೋಂಕು ಇಳಿಮುಖವಾಗಿದ್ದು, ಶ್ರೀಮಠವು ಪರಂಪರೆಯಂತೆ ಮಳೆ ಮಲ್ಲೇಶ್ವರ ಬೆಟ್ಟದಿಂದ ಗವಿಮಠದವರೆಗೂ ಪಾದಯಾತ್ರೆ ಶ್ರದ್ಧಾಭಕ್ತಿಯಿಂದ ಸಾಗಿತು. ನಗರದಲ್ಲಿ ಬೆಳಗ್ಗೆ 6 ಗಂಟೆಗೆ ಮಳೆಮಲ್ಲೇಶ್ವರ ದೇವಸ್ಥಾನದಿಂದ ಆರಂಭವಾದ ಪಾದಯಾತ್ರೆ ಗದಗ ರಸ್ತೆಯ ಬನ್ನಿಕಟ್ಟಿ, ಅಶೋಕ ಸರ್ಕಲ್, ಜವಾಹರ ರಸ್ತೆ, ಗಡಿಯಾರ ಕಂಬದ ಮಾರ್ಗವಾಗಿ ಶ್ರೀಗವಿಮಠ ತಲುಪಿತು.
ಪಾದಯಾತ್ರೆಯಲ್ಲಿ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು, ಶ್ರೀ ಬಳಾಗಾನೂರಿನ ಶಿವಶಾಂತವೀರ ಶರಣರು, ಹಡಗಲಿಯ ಡಾ| ಹಿರಿಶಾಂತವೀರ ಮಹಾಸ್ವಾಮಿಗಳು, ಮೈನಳ್ಳಿ ಶ್ರೀಗಳು, ಬಿಜಕಲ್ ಶ್ರೀಗಳು, ಅಣದೂರು ಶ್ರೀಗಳು, ಮಹಾಂತ ದೇವರು ಸೇರಿ ಹರಗುರುಚರ ಮೂರ್ತಿಗಳು ಹಾಗೂ ಸಹಸ್ರಾರು ಭಕ್ತರಿದ್ದರು.
ವಿದ್ಯಾರ್ಥಿಗಳು ಭಾಗಿ: ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕೆಂದು ಗ್ರಾಮೀಣ ಪ್ರದೇಶದ ಭಕ್ತರು ಸಹ ಆಗಮಿಸಿ ಶ್ರೀಗಳ ಕೃಪೆಗೆ ಪಾತ್ರರಾದರು. ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಯಾತ್ರೆಯಲ್ಲಿ ಪಾಲ್ಗೊಂಡು ರಸ್ತೆಯಲ್ಲಿ ಲಿಂ. ಶಿವಶಾಂತವೀರ, ಮರಿಶಾಂತವೀರ, ಗವಿಸಿದ್ದೇಶ್ವರ ಮಹಾ ಸ್ವಾಮಿಗಳ ನಾಮಸ್ಮರಣೆ ಮಾಡಿ ಭಕ್ತಿ ತೋರಿದರು.
ತಂಪುಪಾನೀಯ ವ್ಯವಸ್ಥೆ: ಪಾದಯಾತ್ರೆಯಲ್ಲಿ ಪಾಲ್ಗೊಂಡ ಭಕ್ತರಿಗೆ ರಸ್ತೆಯ ಅಕ್ಕ ಪಕ್ಕದ ಅಂಗಡಿಗಳ ಮಾಲೀಕರು, ವರ್ತಕರು, ವ್ಯಾಪಾರಿಗಳು ತಮ್ಮದೂ ಒಂದು ಭಕ್ತಿಯ ಸೇವೆ ಇರಲಿ ಎಂದು ಮಜ್ಜಿಗೆ, ಶರಬತ್ತು, ಪಾನಕ, ಜ್ಯೂಸ್ ಸೇರಿದಂತೆ ಎಳೆನೀರನ್ನು ಕೊಟ್ಟು ಭಕ್ತಿ ಮೆರೆದರು.
ದಾಸೋಹ ವ್ಯವಸ್ಥೆ: ಯಾತ್ರೆಯಲ್ಲಿ ಪಾಲ್ಗೊಂಡ ಭಕ್ತರೆಲ್ಲರೂ ಲಿಂಗೈಕ್ಯ ಶ್ರೀಗಳ ನಾಮಸ್ಮರಣೆ ಮಾಡುತ್ತ ಗವಿಮಠಕ್ಕೆ ಆಗಮಿಸಿ ನೇರ ಕತೃ ಗದ್ದುಗೆಯ ದರ್ಶನ ಪಡೆದರಲ್ಲದೇ, ಮಹಾದಾಸೋಹ ಭವನಕ್ಕೆ ತೆರಳಿ ಸಿರಾ, ರೊಟ್ಟಿ, ಹೆಸರುಕಾಳು ಪಲ್ಲೆ, ಬದನೆಕಾಯಿ ಪಲ್ಲೆ, ಅನ್ನ-ಸಾರು, ಕಡಲೆಪುಡಿ, ಮಜ್ಜಿಗೆ ಸವಿದರು.