ಡಿಸೆಂಬರ್ 30- ನಟ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಅಭಿಮಾನಿಗಳನ್ನು ಅಗಲಿದ ದಿನ. 2009 ಡಿಸೆಂಬರ್ 30ರ ಮುಂಜಾನೆ ಬಂದ ಸುದ್ದಿ ಇಡೀ ಕನ್ನಡ ಚಿತ್ರರಂಗಕ್ಕೆ ಅರಗಿಸಿಕೊಳ್ಳಲಾಗ ದಂತಹ ನೋವನ್ನು ನೀಡಿತು. 2024 ಡಿಸೆಂಬರ್ 30ಕ್ಕೆ ವಿಷ್ಣು ಇಲ್ಲದೇ 15 ವರ್ಷ. ಈ ಹದಿನೈದು ವರ್ಷಗಳಲ್ಲಿ ಅಭಿಮಾನಿಗಳು ಅವರನ್ನು ಎಂದಿಗೂ ಮರೆತಿಲ್ಲ. ಅವರ ಸಿನಿಮಾಹಾಡು, ಸಮಾಜಮುಖೀ ಕಾರ್ಯಗಳ ಮೂಲಕ ಸದಾ ಜೀವಂತವಾಗಿರಿಸಿದ್ದಾರೆ.
ಪ್ರೀತಿ, ಒಂಚೂರು ಸಿಟ್ಟು, ಅಪಾರ ವಿನಯ, ಕಿಂಚಿತ್ ಸಂಕೋಚ, ಮುಚ್ಚುಮರೆಯಿಲ್ಲದ ಮಾತು, ಮನಗೆಲ್ಲುವ ಮಂದಹಾಸ- ಇವೆಲ್ಲದರ ಮೊತ್ತವಾಗಿದ್ದವರು ವಿಷ್ಣುವರ್ಧನ್.
ಸಂಪತ್ ಕುಮಾರ್ ಆಗಿ ಚಿತ್ರರಂಗಕ್ಕೆ ಬಂದು “ವಂಶವೃಕ್ಷ’ದಲ್ಲಿ ಪುಟ್ಟ ಪಾತ್ರ ಮಾಡಿ, ರಾಮಾಚಾರಿಯಾಗಿ ಎದ್ದು ನಿಂತ ವಿಷ್ಣುವರ್ಧನ್ ಮತ್ತೆ ತಿರುಗಿ ನೋಡಲಿಲ್ಲ. ಇನ್ನೂರು ಚಿತ್ರಗಳ ಗಡಿ ದಾಟಿದ ವಿಷ್ಣುವರ್ಧನ್ ಚಾರಿತ್ರಿಕ, ಪೌರಾಣಿಕ, ಸಾಮಾಜಿಕ ಪಾತ್ರಗಳಲ್ಲಿ ನಟಿಸಿ ಗೆದ್ದವರು. ಅಭಿಮಾನಿಗಳ
ಪಾಲಿಗೆ “ಸಾಹಸ ಸಿಂಹ’, ಹೆಣ್ಮಕ್ಕಳ ಪಾಲಿಗೆ “ಬಂಧನ’ದ ಭಗ್ನಪ್ರೇಮಿ, “ಬಿಳಿಗಿರಿಯ ಬನ’ದ ಬಂಡಾಯಗಾರ, “ಹೊಂಬಿಸಿಲು’ ಚಿತ್ರದ ನಿಷ್ಪಾಪಿ, “ಸಿಡಿದೆದ್ದ ಸಹೋದರ’, “ಬಂಗಾರದ ಜಿಂಕೆ’ಯ ಬೆನ್ನಟ್ಟಿದ ಪ್ರೇಮಿ, “ಇಂದಿನ ರಾಮಾಯಣ’ದ ನ್ಯಾಯ ವಂತ, ದೆವ್ವಕ್ಕೆ ಸಡ್ಡು ಹೊಡೆದ “ಆಪ್ತಮಿತ್ರ’- ಹೀಗೆ ವಿಷ್ಣು ಎಲ್ಲ ಪಾತ್ರಗ ಳಲ್ಲೂ ನಟಿಸಿ ಗೆದ್ದವರು.
ಅಪಾರ ಹಾಸ್ಯಪ್ರಜ್ಞೆ, ತುಂಬು ಮಾನವೀಯತೆ, ಸರಳ ಸಜ್ಜನಿಕೆಯ ರೂಪವೇ ವಿಷ್ಣುವರ್ಧನ್. ಬಲಗೈಲಿ ಕೊಟ್ಟದ್ದು ಎಡಗೈಗೆ ತಿಳಿಯಬಾರದು ಎಂಬಂತಿದ್ದವರು ವಿಷ್ಣು … ಯಾವತ್ತೂ ಅವರು ತಾವು ಮಾಡಿದ ಸಹಾಯದ ಕುರಿತು ಹೇಳಿಕೊಂಡವರೇ ಅಲ್ಲ. ವಿವಾದಗಳು ಅವರನ್ನು ಬೆನ್ನಟ್ಟಿ ಬಂದಾಗಲೂ ವಿಷ್ಣು ಮೌನಿಯಾಗಿದ್ದರು. ಯಾವತ್ತೂ ಚಿತ್ರರಂಗದ ನಾಯಕನೆಂದು ತಮ್ಮನ್ನು ಕರೆದುಕೊಂಡವರೇ ಅಲ್ಲ. ನಾನು ತುಂಬ ಚಿಕ್ಕವನು, ನಾನು ಹಿಂದೆಯೇ ಇರಬೇಕು ಅನ್ನುತ್ತಿದ್ದವರು ಅವರು. ಎಲ್ಲರನ್ನೂ ಮುಂದೆ ಬಿಟ್ಟುಕೊಂಡು, “ಸ್ನೇಹಲೋಕ’ ಎಂಬ ತಂಡ ಕಟ್ಟಿ, ಸಮಾನಮನಸ್ಕರನ್ನು ಒಂದಾಗಿಸಿದ ಖ್ಯಾತಿಯೂ ಅವರದ್ದೇ.