Advertisement
ಗುಂಡ್ಮಿ: ಒಮ್ಮೊಮ್ಮೆ ಬೀದಿಯಲ್ಲಿ ಎಜ್ಡಿ ಬೈಕ್‌ನ ಶಬ್ಧ ಕೇಳಿದಾಗ, ಮನೆಯ ಜಗಲಿಯಲ್ಲಿ ಯಾರೋ ಕುಳಿತು ವೀಳ್ಯ ಮೆಲ್ಲುವಾಗ, ಯಾವುದೋ ಪ್ರಸಂಗವೊಂದರ ಪದ್ಯದ ಆಲಾಪ ಕಿವಿಗೆ ಬಿದ್ದಾಗ ಕಾಳಿಂಗ ನಮ್ಮೆದುರು ಬಂದಂತೆ ಭಾಸವಾಗುತ್ತದೆ.
Related Articles
Advertisement
ಅನಂತರ ತಂದೆಯವರೊಂದಿಗೆ ಹೋವಿನ ಕೋಲು ಪ್ರದರ್ಶನಕ್ಕೆ ನಾನು-ಆತ ಒಟ್ಟಾಗಿ ಹೋಗುತ್ತಿದ್ದೆವು. ಐದನೇ ತರಗತಿ ಸಾಕೆನಿಸಿತ್ತು, ಬರೀ ಜನರಲ್ ನಾಲೆಡ್ಜ್ ನಲ್ಲಿ ಮುಂದೆ ಬಂದವ. ಕಲಿತದ್ದು ಕಡಿಮೆಯಾದರೂ, ಯಕ್ಷಗಾನ ಕುರಿತಾದದ್ದು ಹಾಗೂ ಯಕ್ಷಗಾನದ ಅಧ್ಯಯನಕ್ಕೆ ಸಂಬಂಧಿಸಿದ್ದನ್ನು ಕಲಿಯುವುದರಲ್ಲಿ ಬಹಳ ಆಸಕ್ತಿ ಹಾಗೂ ಚುರುಕು ಸ್ವಭಾದವ.
ಅಕ್ಕಪಕ್ಕದ ಹುಡುಗರನ್ನು ಕೂಡು ಹಾಕಿಕೊಂಡು, ವೇಷ ಕಟ್ಟಿಕೊಂಡು ಯಕ್ಷಗಾನ ಅಭ್ಯಾಸ ಮಾಡುತ್ತಿದ್ದ. ಕ್ರಮೇಣ ಪ್ರಸಂಗ ರಚಿಸುವ ಸಂದರ್ಭದಲ್ಲೂ (ಅಂಬಾತನಯ ಮುದ್ರಾಡಿ, ವಾಸುದೇವ ಸಾಮಗರಂಥ ಹಲವರು ಸಹಕರಿಸಿದ್ದರು) ತಂದೆಯಲ್ಲಿ, ನಮ್ಮಲ್ಲಿ ಕೆಲವು ವಿಷಯಗಳನ್ನು ಕೇಳುತ್ತಿದ್ದ. ಕೂಡಲೇ ಹೇಳಬೇಕಿತ್ತು. ಇಲ್ಲವಾದರೆ, ಏನಯ್ಯಾ ಗ್ರಾಜುಯೇಟ್ ಅನ್ತೀಯಾ, ಇದಕ್ಕೆ ಅರ್ಥ ಹೇಳ್ಳೋಕೆ ಎಷ್ಟು ಹೊತ್ತು ಎಂದು ದಬಾಯಿಸುತ್ತಿದ್ದ ನನಗೆ. ಶೇಕ್ಸ್‌ಪಿಯರ್ ಇತ್ಯಾದಿಯವರನ್ನೂ ಅಭ್ಯಾಸ ಮಾಡುವ ಆಸಕ್ತಿ ಇತ್ತು ಅವನಿಗೆ.
ವಿದ್ಯಾರ್ಥಿಯಾಗಿ ಒಂದು ವರ್ಷಕ್ಕೇ (ತಾಳ ಜ್ಞಾನ ಚೆನ್ನಾಗಿದ್ದ ಕಾರಣ) ಅಮೃತೇಶ್ವರೀ ಮೇಳದಲ್ಲಿ ಸಂಗೀತಗಾರನಾಗಿ ಸೇರ್ಪಡೆಯಾದ. ಅದು ಒಳ್ಳೆಯ ಅನುಭವ ಕೊಟ್ಟಿತು. ಆ ಬಳಿಕ ನಮಗೆ ಹಣಕಾಸಿನ ಅಗತ್ಯವಿತ್ತು. ಹಾಗಾಗಿ ಪೆರ್ಡೂರಿನ ವಿಜಯ ಶ್ರೀ ಮೇಳಕ್ಕೆ ಭಾಗವತನಾದ. ಆ ಬಳಿಕ ಸಾಲಿಗ್ರಾಮ ಮೇಳಕ್ಕೆ ಸೇರಿಕೊಂಡ.
ಸುದೀರ್ಘ ತಿರುಗಾಟ ನಡೆಸಿದ. ಆ ಕಾಲದಲ್ಲಿ ಅವನ ಸ್ವರ ಸಿರಿಗೆ ಮಾರು ಹೋಗದವರಿಲ್ಲ. ಹೊಸ ತಲೆಮಾರು ಇಡೀ ಯಕ್ಷಗಾನದ ಕಡೆ ವಾಲಿತು. ದೂರದ ಮುಂಬಯಿ ಮುಂತಾದ ಕಡೆಗಳ ಕ್ಯಾಂಪ್‌ಪ್ ಗಳಿಗೆ ಆಗಲೇ ವಿಮಾನದ ವೆಚ್ಚ ಭರಿಸಿ ಕರೆಸಿಕೊಳ್ಳುತ್ತಿದ್ದರು.
ರೂಪಶ್ರೀ, ಭಾಗ್ಯಶ್ರೀ, ಕಾಂಚನಶ್ರೀ, ವಿಜಯಶ್ರೀ, ನಾಗಶ್ರೀ, ಅಮೃತಮತಿ ಮುಂತಾದ ಯಶಸ್ವಿ ಪ್ರಸಂಗಗಳನ್ನು ಯಕ್ಷರಂಗಕ್ಕೆ ಕೊಟ್ಟ. ಇಂದಿಗೂ ನಾಗಶ್ರೀ ಯಕ್ಷರಂಗದ ಮಾಣಿಕ್ಯ. ಅದರಲ್ಲಿನ ಶ್ರೇಷ್ಠತೆಯೇ ಇಂದಿಗೂ ಅದನ್ನು ಕಲಾರಸಿಕರ ಹೃದಯದಲ್ಲಿ ಉಳಿಸಿದೆ.
ಹೀಗೆ ಯಕ್ಷರಂಗದಲ್ಲಿ ಕೀರ್ತಿಯ ಉನ್ನತ ಶಿಖರದಲ್ಲಿದ್ದಾಗಲೇ ಆತ ಇದ್ದಕ್ಕಿದ್ದಂತೆ 32ರ ವಯಸ್ಸಿನಲ್ಲಿ ಮಾಯವಾಗಿಬಿಟ್ಟ (1990ರ ಮೇ 27). ಉಡುಪಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಇನ್ನಿಲ್ಲವಾದ. ಆದರೆ ಕಾಳಿಂಗನ ಬದುಕಿನ ಆಸಕ್ತಿ, ಕಲಿಕೆಯ ಮೇಲಿನ ಪ್ರೀತಿ, ನಮ್ಮ ನಡುವಿನ ಗೆಳೆಯನ (ನಮ್ಮಿಬ್ಬರ ಸಂಬಂಧ ಗೆಳೆಯರಂತಿತ್ತು) ರೀತಿಯ ಸಂಬಂಧ-ಎಲ್ಲವೂ ನೆನಪಿಗೆ ಬರುತ್ತವೆ. ಕಣ್ಣಾಲಿಗಳು ತುಂಬಿಕೊಳ್ಳುತ್ತವೆ.
ಅವನೇ ಕಿಂಗ್ !ಯಕ್ಷಗಾನದಲ್ಲಿ ಸ್ಟಾರ್ ಪಟ್ಟ ಪಡೆದ ಭಾಗವತ ಅವನು. ಎಲ್ಲೇ ಹೋದರೂ ಅವನೇ ಕಿಂಗ್. ಸೂಜಿಗಲ್ಲಿನ ವ್ಯಕ್ತಿತ್ವ. ನೂರು ಜನ ಕುಳಿತರೂ ಅವನೇ ಆಕರ್ಷಣೆ. ಕಾಳಿಂಗನೇ ಕೇಂದ್ರಬಿಂದು. ನಾನೇ ನೋಡಿದ್ದೇನೆ ಅದನ್ನು. ಅದಕ್ಕೆ ಅವನ ಸರಳತೆಯೇ ಕಾರಣ. ಇಂದಿಗೂ ಅವನ ಪದ್ಯಗಳಿಗೆ ಹಾತೊರೆಯುವ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಅವನು ಮಸುಕಾಗಿಲ್ಲ; ಇಂದಿಗೂ ಹೊಳೆಯುವ ಮಾಣಿಕ್ಯ. ಎಷ್ಟೇ ದೊಡ್ಡ ಕಲಾವಿದನಾದರೂ ಕಲೆ ಹಾಗೂ ಭಾಗವತನ ಸ್ಥಾನಕ್ಕೆ ಗೌರವ ಕೊಡಬೇಕು ಎನ್ನುವುದಕ್ಕೆ ಬದ್ಧನಾಗಿದ್ದ. ಅದೇ ಅವನ ಶ್ರೇಷ್ಠತೆ.
– ಗಣಪಯ್ಯ ನಾವಡ, ಕಾಳಿಂಗ ನಾವಡರ ಅಣ್ಣ ಗುರುಗಳ ಮೆಚ್ಚಿನ ಶಿಷ್ಯ
ನಾನು ನಾವಡರು ಒಟ್ಟಿಗೆ ಕಲಾ ಕೇಂದ್ರದಲ್ಲಿ ಕಲಿತವರು. ಆಗಲೇ ಅವರಿಗೆ ಯಕ್ಷಗಾನದ ಬಗ್ಗೆ ಸಾಕಷ್ಟು ತಿಳಿವಳಿಕೆ ಇತ್ತು. ಹೀಗಾಗಿ ಹೇಳಿದ ಪಾಠ ಹಾಗೂ ಕೆಲಸವನ್ನು ತತ್‌ಕ್ಷಣ ಮಂಡಿಸಿ ಗುರುಗಳಾದ ಉಪ್ಪೂರರು ಮತ್ತು ಬೆಳಂಜೆ ತಿಮ್ಮಪ್ಪ ನಾಯ್ಕ ಅವರ ಮೆಚ್ಚುಗೆಗೆ ಪಾತ್ರರಾಗಿದ್ದರು. ನಿತ್ಯವೂ ಒಂದೇ ಸೈಕಲ್‌ನಲ್ಲಿ ಕಲಿಕೆಗೆ ಹೋಗುವಾಗ ಯಕ್ಷಗಾನದ ಕುರಿತು ಪ್ರಸ್ತಾವಿಸದ ದಿನವಿಲ್ಲ. ಸದಾ ಕಲಿಕೆಯ ವ್ಯಕ್ತಿ.
– ಸದಾನಂದ ಐತಾಳ ಗುಂಡ್ಮಿ, ನಾವಡರ ಸಹಪಾಠಿ ಯಕ್ಷರಂಗಕ್ಕೆ ನಾವಡರು
ಕನ್ನಡ ಚಿತ್ರರಂಗದಲ್ಲಿ ಡಾ| ರಾಜ್ ಕುಮಾರ್‌ಗೆ ಯಾವ ರೀತಿ ಅಭಿಮಾನಿಗಳು ಇದ್ದರೋ ಹಾಗೆಯೇ ಕಾಳಿಂಗ ನಾವಡರಿಗೆ ಯಕ್ಷರಂಗದಲ್ಲಿ ಅಭಿಮಾನಿಗಳಿದ್ದರು. ಅದಕ್ಕೆ ಅವರ ಸರಳತೆ ಕಾರಣ. ಬೆಂಗಳೂರು, ಮುಂಬಯಿಯಲ್ಲಿ ಪ್ರದರ್ಶನ ಮುಗಿಸಿ ಹೊರಬಂದಾಗ ಸಿನೆಮಾ ನಟರ ರೀತಿ ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದರು. ತನ್ನ ಮೆಚ್ಚಿಕೊಳ್ಳುವವರ ಕಷ್ಟಕ್ಕೆ ಸಹಕಾರ ನೀಡಿದ ಹಲವು ಪ್ರಸಂಗಗಳಿವೆ. ಕನ್ನಡ ಚಿತ್ರರಂಗಕ್ಕೇ ಒಬ್ಬರೇ ರಾಜ್‌ಕುಮಾರ್, ಯಕ್ಷರಂಗಕ್ಕೆ ಒಬ್ಬರೇ ನಾವಡರು.
– ಗಂಪು ಪೈ ಸಾಲಿಗ್ರಾಮ, ಕಾಳಿಂಗ ನಾವಡರ ಅಭಿಮಾನಿ
ನಿರೂಪಣೆ : ರಾಜೇಶ್ ಗಾಣಿಗ, ಅಚ್ಲಾಡಿ