ಎರಡು ದೇಸಿ ಮಟನ್, ಆರು ದೇಸಿ ಕೋಳಿ, 10 ಲೀಟರ್ ಹಾಲು, 1.5 ಪೌಂಡ್ಸ್ ಬಾದಾಮಿ, ಅರ್ಧ ಲೀ. ತುಪ್ಪ, ಆರು ಪೌಂಡ್ ಬೆಣ್ಣೆ, ಮೂರು ಬಕೆಟ್ ಹಣ್ಣುಗಳು.. ಹೀಗೆ ಮುಂದುವರಿಯುತ್ತದೆ ಈ ಕುಸ್ತಿಪಟುವಿನ ದೈನಂದಿನ ಆಹಾರದ ಪಟ್ಟಿ. ಅವರೇ ವಿಶ್ವದ ದಿಗ್ಗಜ ಕುಸ್ತಿಪಟುಗಳಿಗೆ ಸವಾಲೆಸೆದು ಸೋಲಿನ ಪರಿಚಯ ತೋರಿದ್ದ ದ ಗ್ರೇಟ್ ಗಾಮ. ಇನ್ನಷ್ಟು ಕುತೂಹಲಕಾರಿ ವಿಷಯಗಳಿಗೆ ಮುಂದೆ ಓದಿ…ದ ಗ್ರೇಟ್ ಗಾಮ ಯಾನೆ ಘುಲಾಮ್ ಮೊಹಮ್ಮದ್ ಬಕ್ಶ್ ಬಟ್ ಭಾರತ ಕಂಡ ಅತ್ಯುನ್ನತ ಕುಸ್ತಿಪಟು. 20ರ ದಶಕದ ಆರಂಭದಲ್ಲಿ ರುಶ್ತುಮ್ ಎ ಹಿಂದ್ ಪುರಸ್ಕಾರ ಪಡೆದಿದ್ದ ಬಲಾಢ್ಯ ಜಟ್ಟಿ.
1878 ಮೇ 22ರಂದು ಪಂಜಾಬ್ ಪ್ರಾಂತ್ಯದ ಅಮೃತಸರದ ಜಬ್ಬೋವಾಲ್ ನಲ್ಲಿ ಘುಲಾಮ್ ಮೊಹಮ್ಮದ್ ಬಕ್ಶ್ ಜನಿಸಿದ್ದರು. 52 ವರ್ಷದ ವೃತ್ತಿ ಬದುಕಿನಲ್ಲಿ ಇವರು ವಿಶ್ವ ಚಾಂಪಿಯನ್ ಆಗಿ ಮೆರೆದಾಡಿದ್ದರು. ಗಾಮ ಅವರು ಕುಟುಂಬ ಆರಂಭದಲ್ಲಿ ಕಾಶ್ಮೀರಿ ಬ್ರಾಹ್ಮಣರಾಗಿದ್ದು ನಂತರ ಮುಸ್ಲಿಂ ರಾಜರ ಆಡಳಿತದಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿದ್ದರು ಎಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಮೊಹಮ್ಮದ್ ಬಕ್ಶ್ ಗೆ ಆರು ವರ್ಷವಿದ್ದಾಗ ಅವರ ತಂದೆ ಮರಣ ಹೊಂದುತ್ತಾರೆ. ನಂತರ ಅಜ್ಜನ ಪಾಲನೆಯಲ್ಲಿ ಬೆಳೆಯುತ್ತಾರೆ ಮೊಹಮ್ಮದ್ ಬಕ್ಶ್. ಆದರೆ ಅಜ್ಜನೂ ಮರಣ ಹೊಂದಿದ ಬಳಿಕ ತನ್ನ ಮಾವನ ಜೊತೆಗೆ ಬೆಳೆದ ಮೊಹಮ್ಮದ್ ಬಕ್ಶ್ ಅಲ್ಲಿ ಕುಸ್ತಿ ಕಲಿಯಲಾರಂಭಿಸುತ್ತಾರೆ.
ತನ್ನ 10ನೇ ವಯಸ್ಸಿನಲ್ಲೇ ಮೊಹಮ್ಮದ್ ಬಕ್ಶ್ ಜೋಧಪುರದ ‘ಶಕ್ತಿಶಾಲಿ ವ್ಯಕ್ತಿ’ ಎಂಬ ಸ್ಪರ್ಧೆಗೆ ಹೋಗುತ್ತಾರೆ. ಅಲ್ಲಿ ಸುಮಾರು 400 ಕ್ಕೂ ಹೆಚ್ಚು ಸ್ಪರ್ಧಿಗಳಿರುತ್ತಾರೆ. ಆದರೆ ಇವರುಗಳ ನಡುವೆ ಬಾಲಕ ಮೊಹಮ್ಮದ್ ಬಕ್ಶ್ ಅಂತಿಮ 15 ಮಂದಿಯ ಸುತ್ತಿಗೆ ಆಯ್ಕೆಯಾಗುತ್ತಾರೆ. ದೊಡ್ಡ ಪೈಲ್ವಾನರ ನಡುವೆ ಈ ಬಾಲಕನ ಸ್ಪರ್ಧೆಯನ್ನು ಗಮನಿಸಿದ ಅಂದಿನ ಜೋಧಪುರದ ರಾಜ ಈತನ ವಯಸ್ಸನ್ನು ಪರಿಗಣಿಸಿ ಮೊಹಮ್ಮದ್ ಬಕ್ಶ್ ನನ್ನೇ ವಿಜೇತ ಎಂದು ಘೋಷಿಸುತ್ತಾರೆ. ಇದಾದ ಬಳಿಕ ಮೊಹಮ್ಮದ್ ಬಕ್ಶ್ ಮಹಾರಾಜರ ಗರಡಿಯಲ್ಲೇ ತನ್ನ ಕುಸ್ತಿ ಅಭ್ಯಾಸ ಮುಂದುವರಿಸುತ್ತಾನೆ.
1895ರಲ್ಲಿ ಮೊಹಮ್ಮದ್ ಬಕ್ಶ್ ಮೊದಲ ಬಾರಿಗೆ ದೊಡ್ಡ ಮಟ್ಟದ ಹೆಸರು ಪಡೆಯುತ್ತಾರೆ. ಆಗ ಅವರಿಗೆ ಕೇವಲ 17 ವರ್ಷ ವಯಸ್ಸು. ಆಗ ಅವರು ಭಾರತದ ಕುಸ್ತಿ ಚಾಂಪಿಯನ್ ಎಂದು ಹೆಸರು ಪಡೆದಿದ್ದ ರಹೀಂ ಬಕ್ಶ್ ಸುಲ್ತಾನಿವಾಲರನ್ನು ಪಂದ್ಯವೊಂದರಲ್ಲಿ ಎದುರಿಸಿದ್ದರು. ಏಳು ಅಡಿಯ ಮಧ್ಯ ವಯಸ್ಸಿನ ಸುಲ್ತಾನಿವಾಲ ಎದುರು5.7 ಅಡಿಯ ಇನ್ನೂ ಚಿಗುರು ಮೀಸೆಯ ಮೊಹಮ್ಮದ್ ಬಕ್ಶ್ ಸ್ಪರ್ಧೆ! ಸುಲ್ತಾನಿವಾಲ ಸುಲಭವಾಗಿ ಗೆಲ್ಲುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಗಂಟೆಗಳಕಾಲ ನಡೆದ ಪಂದ್ಯದಲ್ಲಿ ಯಾರೂ ಸೋಲಲಿಲ್ಲ. ಪಂದ್ಯ ಡ್ರಾ ಆಯಿತು. ಮತ್ತೊಂದು ಪಂದ್ಯದಲ್ಲಿ ಸುಲ್ತಾನಿವಾಲ ವಿರುದ್ಧ ಎಗರಿ ಎಗರಿ ಬಿದ್ದ ಮೊಹಮ್ಮದ್ ಬಕ್ಶ್ ತನ್ನ ಮೂಗಿನಿಂದ ರಕ್ತ ಸೋರುತ್ತಿದ್ದರೂ ಪಟ್ಟು ಬಿಡದೆ ರಹೀಂ ಸುಲ್ತಾನಿವಾಲರನ್ನು ಸೋಲಿಸಿಯೇ ಬಿಟ್ಟ! ಅಲ್ಲಿಗೆ ಮೊಹಮ್ಮದ್ ಬಕ್ಶ್ ಹೆಸರು ದೊಡ್ಡ ಮಟ್ಟದಲ್ಲಿ ಪ್ರಸಿದ್ದಿ ಪಡೆಯಿತು.
ಭಾರತದ ಪ್ರಮುಖ ಕುಸ್ತಿಪಟುಗಳನ್ನ ಸೋಲಿಸಿದ ಮೊಹಮ್ಮದ್ ಬಕ್ಶ್ಗಮನ ಇದೀಗ ಪಾಶ್ಚಿಮಾತ್ಯ ರಾಷ್ಟ್ರಗಳತ್ತ ಬಿದ್ದಿತ್ತು. ಅಲ್ಲಿ ಹೋಗಿ ಕುಸ್ತಿ ಆಡಬೇಕೆಂದು ಕೊಂಡ ಬಕ್ಶ್ ಲಂಡನ್ ಗೆ ತೆರಳಿದರು. ಆದರೆ ಅಲ್ಲಿ ಪ್ರವೇಶ ಅಷ್ಟು ಸುಲಭ ಇರಲಿಲ್ಲ. ಕಾರಣ ಬಕ್ಶ್ ಎತ್ತರ 5.7 ಮಾತ್ರ ಇತ್ತು. ಅದು ಸಾಕಾಗಿರಲಿಲ್ಲ. ಆದರೆ ಅಲ್ಲಿನ ಹೆವಿವೈಟ್ ಚಾಂಪಿಯನ್ ಆಟಗಾರರಿಗೆ ಸವಾಲು ಹಾಕಿ ಅವರನ್ನು ಎದುರಿಸಿ ಬಕ್ಶ್ ಅರ್ಹತೆ ಪಡೆದರು.
ಲಂಡನ್ ಕೂಟದಲ್ಲಿ ಸೇರಿದ ಬಕ್ಶ್ ಗೆ ಗಾಮಾ ಎಂದು ರಿಂಗ್ ನೇಮ್ ನೀಡಲಾಯಿತು. ಆ ಕಾಲದಲ್ಲಿ ವಿಶ್ವಶ್ರೇಷ್ಠ ಪಟುವಾಗಿದ್ದ ಸ್ಟಾನಿಸ್ಲೇಯಸ್ ಎದುರು 1910ರಲ್ಲಿ ಜಾನ್ ಬುಲ್ ಚಾಂಪಿಯನ್ ಶಿಪ್ ನಲ್ಲಿ ಗಾಮಾ ಸ್ಪರ್ಧೆ ನಡೆಸಿದರು. ಪಂದ್ಯ ಆರಂಭವಾದ ಮೊದಲ ನಿಮಷದಲ್ಲೇ ಗಾಮಾ ಎದುರಾಳಿಲ್ಲಿ ನೆಲಕ್ಕುರುಳಿಸಿದರು. ಎದುರಾಳಿ ಸ್ಟಾನಿಸ್ಲೇಯಸ್ ನಂತರ ಎರಡುವರೆ ಗಂಟೆ ಮೇಲೆಳಲೇ ಇಲ್ಲ. ನಂತರ ರಕ್ಷಣಾತ್ಮಕವಾಗಿ ಆಡಿದ ಸ್ಟಾನಿಸ್ಲೇಯಸ್ ಪಂದ್ಯವನ್ನು ಡ್ರಾ ಮಾಡಿದರು. ಇದಾಗಿ ಒಂದು ವಾರದ ಬಳಿಕ ಮತ್ತೆ ಪಂದ್ಯ ಏರ್ಪಡಿಸಲಾಯಿತು. ಆದರೆ ಸ್ಟಾನಿಸ್ಲೇಯಸ್ ಆಗಮಿಸಲಿಲ್ಲ. ಹೀಗಾಗಿ ಗಾಮಾ ರನ್ನು ಚಾಂಪಿಯನ್ ಶಿಪ್ ನ ವಿಜೇತ ಎಂದು ಘೋಷಿಸಲಾಯಿತು.
ಇಂಗ್ಲೆಂಡ್ ನಿಂದ ಬಂದ ಬಳಿಕ ಗಾಮಾ ಮತ್ತೆ ರಹಮಾನ್ ಬಕ್ಶ್ ಸುಲ್ತಾನಿವಾಲ ಎದುರು ಅಹಮದಾಬಾದ್ ನಲ್ಲಿ ಪಂದ್ಯವಾಡಿದರು. ಸುದೀರ್ಘವಾಗಿ ನಡೆದ ಪಂದ್ಯದಲ್ಲಿ ಕೊನೆಗೂ ಗಾಮಾ ಜಯಿಸಿದರು. ತಾನೆದುರಿಸದ ಕಠಿಣ ಪ್ರತಿಸ್ಪರ್ದಿ ಸುಲ್ತಾನಿವಾಲ ಎಂದು ಗಾಮಾ ಹೇಳುತ್ತಿದ್ದರು. ಗಾಮಾ ತನ್ನ ವೃತ್ತಿ ಜೀವನದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಸ್ಪರ್ಧಿಗಳನ್ನು ಸೋಲಿಸಿದ್ದರು. ಐವರು ಪುತ್ರರನ್ನು ಮತ್ತು ನಾಲ್ವರು ಪುತ್ರಿಯರನ್ನು ಹೊಂದಿದ್ದ ಗಾಮಾ ತನ್ನ ವೈಯಕ್ತಿಕ ಜೀವನದಲ್ಲಿ ಕಷ್ಟ ಅನುಭವಿಸಿದರು. ಪುತ್ರರು ಸಣ್ಣ ವಯಸ್ಸಿನಲ್ಲಿಯೇ ಸಾವನ್ನಪ್ಪಿದ್ದರು. ಭಾರತ- ಪಾಕಿಸ್ಥಾನ ವಿಭಜನೆಯಾದಾಗ ಗಾಮಾ ಪಾಕಿಸ್ಥಾನಕ್ಕೆ ತೆರಳಿದರು. ನಂತರ ಸರ್ಕಾರದ ಪಿಂಚಣಿ ಹಣದಲ್ಲಿ ಜೀವನ ಸಾಗಿಸುತ್ತಿದ್ದರು. 1960ರ ಮೇ 23ರಂದು ಲಾಹೋರ್ ನಲ್ಲಿ ದ ಗ್ರೇಟ್ ಗಾಮಾ ಸಾವನ್ನಪ್ಪಿದ್ದರು.
–
ಕೀರ್ತನ್ ಶೆಟ್ಟಿ ಬೋಳ