Advertisement

ಅಯೋಧ್ಯೆ ರಾಮನದ್ದೇ: ಮತ್ತೊಮ್ಮೆ ಸಾಬೀತು

03:32 AM May 22, 2020 | Hari Prasad |

ಅಯೋಧ್ಯೆಯಲ್ಲಿಯೇ ಶ್ರೀ ರಾಮ ಮಂದಿರ ನಿರ್ಮಾಣವಾಗಬೇಕು ಎಂಬ ಬಗ್ಗೆ ಸುಪ್ರೀಂಕೋರ್ಟ್‌ 2019ರ ನವೆಂಬರ್‌ನಲ್ಲಿ ತೀರ್ಪು ನೀಡಿತ್ತು. ಜತೆಗೆ ಮಸೀದಿ ನಿರ್ಮಾಣಕ್ಕೆಂದು ಬೇರೆ ಕಡೆ ಐದು ಎಕರೆ ಜಮೀನ‌ನ್ನೂ ನೀಡುವ ಬಗ್ಗೆ ತೀರ್ಪಿನಲ್ಲಿ ಉಲ್ಲೇಖಿಸಿತ್ತು. ಈಗ ಅಯೋಧ್ಯೆಯಲ್ಲಿ ದೇಗುಲ ನಿರ್ಮಾಣ ಹಿನ್ನೆಲೆಯಲ್ಲಿ ಮೇ 11ರಿಂದ ಭೂಮಿ ಅಗೆಯುವ ಕಾರ್ಯ ನಡೆಯುತ್ತಿದೆ. ಈ ಸಂದರ್ಭದಲ್ಲಿ ಶತಮಾನಗಳಷ್ಟು ಹಳೆಯದಾಗಿರುವ ದೇವರ ವಿಗ್ರಹಗಳು, ಕಲಾಶಿಲ್ಪಗಳು ಸಿಕ್ಕಿವೆ. ಹೀಗಾಗಿ ಸುಪ್ರೀಂಕೋರ್ಟ್‌ ತೀರ್ಪಿನ ಜತೆಗೆ ಮತ್ತೂಮ್ಮೆ ಅಯೋಧ್ಯೆಯಲ್ಲಿ ಇದ್ದದ್ದು ದೇಗುಲವೇ ಎಂಬ ಅಂಶ ಸಾಬೀತಾಗಿದೆ.

Advertisement

ಮೊಹಮ್ಮದ್‌ ನಿಲುವಿಗೆ ಮತ್ತಷ್ಟು ಪುಷ್ಟಿ
ಅಯೋಧ್ಯೆಯಲ್ಲಿ ರಾಮಮಂದಿರ ಇತ್ತು ಎಂದು ಭಾರತಿಯ ಪುರಾತತ್ವ ಇಲಾಖೆಯ ಮಾಜಿ ಪ್ರಾದೇಶಿಕ ನಿರ್ದೇಶಕ ಕೆ.ಕೆ.ಮಹಮದ್‌ ಹಿಂದೆಯೇ ಹೇಳಿದ್ದರು. ಈಗ ಅವರ ನಿಲುವಿಗೆ ಮತ್ತಷ್ಟು ಪುಷ್ಟಿ  ಸಿಕ್ಕಿದೆ. ಎಎಸ್‌ಐ 1976-77ರಲ್ಲಿ ಅಯೋಧ್ಯೆಯ ರಾಮ ಜನ್ಮಭೂಮಿ ಸ್ಥಳದಲ್ಲಿ  ಮೊದಲ ಉತ್ಖನನ ನಡೆಸಿತ್ತು.

ಪ್ರೊ.ಬಿ.ಬಿ.ಲಾಲ್‌ ಮತ್ತು ಕೆ.ಕೆ.ಮೊಹಮ್ಮದ್‌  ಸೇರಿದಂತೆ 12 ಮಂದಿಯ ತಂಡ ಈ ಕಾರ್ಯ ನಡೆಸಿತ್ತು. ದೇವಾಲಯದ ಅವಶೇಷಗಳು ಈ ಸ್ಥಳದಲ್ಲಿವೆ ಎಂದು ಸೂಚಿಸಲು ಸಾಕಷ್ಟು ಪುರಾವೆಗಳನ್ನು ಅವರು ಕಂಡುಕೊಂಡರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೆ.ಕೆ.ಮೊಹಮ್ಮದ್‌ ಅವರು, ‘ನನ್ನ ಸಂಶೋಧನೆಯಿಂದ ನಾನು ಕಂಡುಕೊಂಡ ಹೇಳಿಕೆಗಳನ್ನು ಕಳೆದ 30 ವರ್ಷಗಳಿಂದ ಹಲವರು ಸಂಶಯಾತ್ಮಕ ದೃಷ್ಟಿಯಿಂದ ನೋಡುತ್ತಾ ಬಂದಿದ್ದಾರೆ. ಆದರೂ, ಸುಪ್ರೀಂಕೋರ್ಟ್‌ ತೀರ್ಪಿನಲ್ಲಿ ಮಾಡಲಾಗಿದ್ದ ಉಲ್ಲೇಖ ನನಗೆ ಸಂತೋಷ ತಂದಿತ್ತು. ಈಗ ನನ್ನ ವಾದಕ್ಕೆ ಮತ್ತೆ ಪುಷ್ಠಿ ಬಂದಂತಾಗಿದೆ’ ಎಂದಿದ್ದಾರೆ.

ಕೆ.ಕೆ.ಮೊಹಮ್ಮದ್‌ ಅವರು ಪ್ರತಿಪಾದಿಸಿದ್ದ‌ ವಾದ

Advertisement

– ಮಸೀದಿಯನ್ನು ದೇವಾಲಯದ ಅವಶೇಷಗಳ ಮೇಲೆ ನಿರ್ಮಿಸಲಾಗಿದೆ.

– ಮಸೀದಿಯ 12 ಸ್ತಂಭಗಳನ್ನು ವಾಸ್ತವವಾಗಿ ದೇವಾಲಯಕ್ಕೆ ಸೇರಿದ ಮೊದಲಿನ ರಚನೆಗಳಿಂದ ನಿರ್ಮಿಸಲಾಗಿದೆ.

– 12 ಮತ್ತು 13ನೇ ಶತಮಾನದ ದೇವಾಲಯಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ‘ಪೂರ್ಣ ಕಲಶ’ ಇಲ್ಲಿ ಕಂಡುಬರುತ್ತದೆ. ಇದು ಹಿಂದೂ ಧರ್ಮದಲ್ಲಿ ಸಮೃದ್ಧಿಯ ಸಂಕೇತ ಎಂದು ನಂಬಲಾಗಿದೆ. ಇದರ ಕುರುಹು ಇಲ್ಲಿದೆ.

– ಎರಡನೇ ಉತ್ಖನನದ ಸಮಯದಲ್ಲಿ 17 ಸಾಲುಗಳಲ್ಲಿ 50ಕ್ಕೂ ಹೆಚ್ಚು ಸ್ತಂಭದ ನೆಲೆಗಳನ್ನು ಕಂಡು ಹಿಡಿಯಲಾಗಿದೆ.

– ಮೊಸಳೆ ಮುಖವನ್ನು ಹೊಂದಿರುವ ‘ಮಕರ ಪ್ರಾಣಾಲಿ’ ಇಲ್ಲಿ ಕಂಡು ಬಂದಿದೆ. ಮೊಸಳೆಗಳು ಗಂಗಾ ನದಿಯ ಸಂಕೇತ. ಇಂತಹ ಚಿತ್ರಣಗಳು ಕೆಲವು ದೇವಾಲಯಗಳ ಗರ್ಭಗುಡಿ ಪ್ರವೇಶದ ಬಳಿ ಕಂಡು ಬರುತ್ತದೆ. ಇಂತಹ ಕಲಾಕೃತಿ ದೇವಾಲಯಗಳಲ್ಲಿ ಮಾತ್ರ ಕಂಡು ಬರಲು ಸಾಧ್ಯ.

ಹಿನ್ನೋಟ
– ಭಾರತೀಯ ಪುರಾತತ್ವ ಇಲಾಖೆ 1976-77ರಲ್ಲಿ ಅಯೋಧ್ಯೆಯ ರಾಮ ಜನ್ಮಭೂಮಿ ಸ್ಥಳದಲ್ಲಿ ಮೊದಲ ಉತ್ಖನನ ನಡೆಸಿತು.

– ರಾಮ ದೇವಸ್ಥಾನ ನಿರ್ಮಾಣ ಕಾರ್ಯ ಮುಗಿಯುವವರೆಗೆ ತಾತ್ಕಾಲಿಕವಾಗಿ ರಾಮ ಜನ್ಮಭೂಮಿಯಲ್ಲಿರುವ ಮಾನಸ ಭವನ ಸಮೀಪದ ತಾತ್ಕಾಲಿಕ ಕಟ್ಟಡಕ್ಕೆ ರಾಮಲಲ್ಲಾ ಮೂರ್ತಿಯನ್ನು ಕಳೆದ ಮಾರ್ಚ್‌ನಲ್ಲಿ ವರ್ಗಾಯಿಸಲಾಗಿದೆ.

– 1992ರ ಡಿಸೆಂಬರ್‌ 6ರಂದು ಬಾಬರಿ ಮಸೀದಿಯನ್ನು ಧ್ವಂಸಗೊಳಿಸಲಾಯಿತು.

– 2010ರ ಸೆಪ್ಟೆಂಬರ್‌ 30ರಂದು ಅಲಹಾಬಾದ್‌ ಹೈಕೋರ್ಟ್‌ ತೀರ್ಪು ನೀಡಿ, ವಿವಾದಿತ 2.77 ಎಕರೆ ಭೂಮಿಯನ್ನು ಮೂರು ಭಾಗಗಳಾಗಿ ವಿಂಗಡಿಸಿ, ರಾಮಲಲ್ಲಾ, ಸುನ್ನಿ ವಕ್ಖ್ ಮಂಡಳಿ, ನಿರ್ಮೋಹಿ ಅಖಾರಾಗೆ ಸಮನಾಗಿ ಹಂಚಿತು.

– ಈ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. 2019ರ ನವೆಂಬರ್‌ 9ರಂದು ಸುಪ್ರೀಂಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ನೇತೃತ್ವದ ಸುಪ್ರೀಂಕೋರ್ಟ್‌ನ ಪೀಠ ತೀರ್ಪು ನೀಡಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿತು.

ಭೂಮಿಯನ್ನು (2.77 ಎಕರೆ) ಟ್ರಸ್ಟ್‌ ರಚಿಸಿ, ಅದಕ್ಕೆ ಹಸ್ತಾಂತರಿಸುವಂತೆ ನಿರ್ದೇಶಿಸಿತು. ಮಸೀದಿ ನಿರ್ಮಿಸಲು ಪರ್ಯಾಯವಾಗಿ ಬೇರೆ ಕಡೆ 5 ಎಕರೆ ಭೂಮಿಯನ್ನು ಸುನ್ನಿ ವಕ್ಖ್ ಮಂಡಳಿಗೆ ನೀಡುವಂತೆ ಸರಕಾರಕ್ಕೆ ಆದೇಶ ನೀಡಿತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ 2020ರ ಫೆ.5ರಂದು ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ’ ಎಂಬ ಟ್ರಸ್ಟ್‌ ರಚಿಸಿತು.

ಈ ವರದಿಯಿಂದ ನನಗೇನೂ ಆಶ್ಚರ್ಯವಾಗುತ್ತಿಲ್ಲ. ಈ ಹಿಂದೆ ಭಾರತೀಯ ಪುರಾತತ್ವ ಇಲಾಖೆ ನಡೆಸಿದ ಉತ್ಖನನದ ವೇಳೆಯೂ ಹಲವು ಅವಶೇಷಗಳು ಪತ್ತೆಯಾಗಿದ್ದವು. ಆದರೆ, ಆ ವೇಳೆಯೂ ಸಂಪೂರ್ಣವಾಗಿ ಉತ್ಖನನ ನಡೆಸಿರಲಿಲ್ಲ. ಈ ಬಗ್ಗೆ ಇನ್ನಷ್ಟು ಉತ್ಖನನ ಆಗಬೇಕಿತ್ತು.
– ಡಾ.ಸುಬ್ರಮಣಿಯನ್‌ ಸ್ವಾಮಿ, ರಾಜ್ಯಸಭಾ ಸದಸ್ಯ

ಮೇ 11ರಂದು ಅಯೋಧ್ಯೆಯಲ್ಲಿ ರಾಮ ದೇವಾಲಯದ ಮೊದಲ ಹಂತದ ನಿರ್ಮಾಣ ಕಾರ್ಯ ಆರಂಭವಾಗಿದೆ. ಉತ್ಖನನ ಸಮಯದಲ್ಲಿ ಅನೇಕ ವಸ್ತುಗಳು ಪತ್ತೆಯಾಗಿವೆ. ಲಾಕ್‌ಡೌನ್‌ ನಿಯಮಗಳಿಂದಾಗಿ ನಿರ್ಮಾಣ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿದೆ.
– ವಿನೋದ ಬನ್ಸಾಲ, ವಿಶ್ವ ಹಿಂದೂ ಪರಿಷತ್‌ ವಕ್ತಾರ.

Advertisement

Udayavani is now on Telegram. Click here to join our channel and stay updated with the latest news.

Next