Advertisement

ಬೆಳ್ತಂಗಡಿ ವಾರದ ಸಂತೆ ಎಪಿಎಂಸಿಗೆ ಸ್ಥಳಾಂತರ

02:19 AM Jun 20, 2020 | Sriram |

ವಿಶೇಷ ವರದಿಬೆಳ್ತ‌ಂಗಡಿ: ಇಲ್ಲಿನ ವಾರದ ಸಂತೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆಗೆ ಸ್ಥಳಾಂತರಿಸಬೇಕೆಂಬ 2 ದಶಕಗಳ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗಿದೆ.

Advertisement

ಬೆಳ್ತಂಗಡಿ ಸಂತೆ ಮಾರುಕಟ್ಟೆಯಲ್ಲಿ ನಡೆಸುತ್ತಿದ್ದ ವಾರದ ಸಂತೆಯನ್ನು ಕೊವಿಡ್‌-19 ಮುಂಜಾಗೃತ ಕ್ರಮವಾಗಿ ಹಳೆಕೋಟೆ ಕೃಷಿ ಉತ್ಪನ್ನ ಮಾರುಕಟ್ಟೆಗೆ ಶಾಸಕ ಹರೀಶ್‌ ಪೂಂಜ ಅವರ ಮುತು ವರ್ಜಿಯಿಂದ ಸ್ಥಳಾಂತರಿಸಲಾಗಿತ್ತು. ಕೃಷಿಕರು ಮತ್ತು ಖರೀದಿದಾರರ ಪೂರ್ಣ ಬೆಂಬಲ ದೊರೆತಿತ್ತು. ಕಳೆದ ಎರಡು ದಶಕ ಗಳಿಂದಲೂ ಸಂತೆ ಮಾರುಕಟ್ಟೆಯನ್ನು ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸುವ ಕುರಿತು ಸಾರ್ವಜನಿಕರಿಂದ ಒತ್ತಾಸೆ ಕೇಳಿಬಂದಿತ್ತು. ಆದರೆ ಯಾವುದೇ ಪ್ರಯತ್ನ ಫಲಪ್ರದವಾಗಿರಲಿಲ್ಲ.

ಶಾಸಕ ಹರೀಶ್‌ ಪೂಂಜ ಅವರು ಶಾಶ್ವತ ವಾಗಿ ಎಪಿಎಂಸಿ ಪ್ರಾಂಗಣದಲ್ಲೇ ವಾರದ ಮಾರುಕಟ್ಟೆಯನ್ನು ಮುಂದುವರಿಸುವ ಕುರಿತು ನಿರ್ಧಾರಕ್ಕೆ ಬಂದಿದ್ದರು.

ಇದೇ ಸಂದರ್ಭ ಗ್ರಾಹಕರು, ಖರೀದಿ ದಾರರು ಎಪಿಎಂಸಿ ಆಡಳಿತ ಮಂಡಳಿ, ಅಧಿಕಾರಿಗಳು, ನ.ಪಂ. ಸಹಿತ ಎಲ್ಲರೂ ಸ್ಥಳಾಂತರಿಸಲು ಸಮ್ಮತಿ ಸೂಚಿಸಿದ್ದರು. ಇದರ ಫಲವಾಗಿ ಸೂಕ್ತ ದಿನಾಂಕ ನಿಗದಿಪಡಿಸಿ ಸ್ಥಳಾಂತರಿಸುವ ಕುರಿತು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿತ್ತು.

ಹಳೆಕೋಟೆ ಸಮೀಪದ 11.8 ಎಕ್ರೆ ವಿಸ್ತೀರ್ಣದ ಎಪಿಎಂಸಿಯಲ್ಲಿ 40 ಮೆಟ್ರಿಕ್‌ ಟನ್‌ನ 2 ಗೋದಾಮು, 250 ಮೆಟ್ರಿಕ್‌ ಟನ್‌ನ 1 ಗೊದಾಮು, ರೈತ ಭವನ, ಪೋಸ್ಟ್‌ ಕಚೇರಿಗೆ ಕಟ್ಟಡ, ಬ್ಯಾಂಕ್‌ ವ್ಯವಸ್ಥೆಗೆ ಕಟ್ಟಡ, ವ್ಯಾಪಾರ, ವ್ಯವಹಾರಕ್ಕೆ 4 ಸಭಾಂಗಣ, ಹರಾಜು ಕೊಠಡಿ, ವಸತಿಗೃಹ, ಆಡಳಿತ ಕಚೇರಿ, ಪಾರ್ಕಿಂಗ್‌ ಸಹಿತ ಇತರ ವ್ಯವಸ್ಥೆ ಒಂದೇ ಪ್ರಾಂಗಣದೊಳಗಿದೆ. ಕ್ಯಾಂಪ್ಕೋ ಖರೀದಿ ಕೇಂದ್ರವೂ ಇದೇ ಆವರಣದಲ್ಲಿದೆ.

Advertisement

ಜೂ. 29ರಂದು ವಾರದ ಸಂತೆ ಸ್ಥಳಾಂತರ
ಜೂ. 29ರಂದು ಬೆಳ್ತಂಗಡಿ ವಾರದ ಸೋಮವಾರ ಸಂತೆ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸ್ಥಳಾಂತರವಾಗಲಿದೆ. ಪ್ರಾಂಗಣದಲ್ಲಿ ಮಾರಾಟಕ್ಕೆ ಯೋಗ್ಯ ಮೂಲ ಸೌಕರ್ಯಕ್ಕೆ ಶಾಸಕರು ಅನುದಾನ ದೊರಕಿಸಿ ಕೊಡುವ ಭರವಸೆ ನೀಡಿದ್ದಾರೆ. ಇಲ್ಲಿ ಇನ್ನಿತರ ದಿನಬಳಕೆ ವಸ್ತುಗಳ ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದೆ. ಪ್ರಾಂಗಣದ ಗೇಟ್‌ ಮುಂಭಾಗ 100 ಮೀ. ರಸ್ತೆ ಇಕ್ಕೆಲಗಳಲ್ಲಿ ಬಟ್ಟೆ, ಪಾತ್ರೆ ಸಹಿತ ಅಗತ್ಯ ವಸ್ತುಗಳನ್ನು ಮಾರಾಟ ಮಾಡಲು ಅವಕಾಶ ನೀಡಲಾಗುತ್ತದೆ ಎಂದು ಆಡಳಿತ ಅಧಿಕಾರಿಗಳು ತಿಳಿಸಿದ್ದಾರೆ.

2 ದಿನ ಸಂತೆ ಚಿಂತನೆ
ರೈತರ ಹಿತದೃಷ್ಟಿಯಿಂದ ಎಪಿಎಂಸಿ ಆವರಣಕ್ಕೆ ವಾರದ ಸಂತೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಅದರಂತೆ ದಿನಾಂಕವನ್ನು ನಿಗದಿ ಪಡಿಸ ಲಾಗಿದ್ದು, ಮುಂದಿನ ದಿನಗಳಲ್ಲಿ ವಾರಕ್ಕೆ 2 ದಿನ ಸಂತೆ ನಡೆಸಲು ಚಿಂತಿಸಲಾಗಿದೆ.
-ಹರೀಶ್‌ ಪೂಂಜ , ಶಾಸಕರು

ಸಂಪೂರ್ಣ ಸಹಕಾರ
ಎಪಿಎಂಸಿಯಲ್ಲಿ ವಾರದ ಸಂತೆ ನಡೆಸಲು ಮೂಲ ಸೌಕರ್ಯ ಇದೆ. ಜೂ. 29ರಂದು ಅಧಿಕೃತವಾಗಿ ಸ್ಥಳಾಂತ ರಿಸುವ ಕುರಿತು ಶಾಸಕರೊಂದಿಗೆ ಚರ್ಚಿಸಲಾಗಿದೆ. ಈ ಮೂಲಕ ವ್ಯಾಪಾರಿಗಳು, ರೈತರಿಗೆ ಎಪಿಎಂಸಿ ಸಂಪೂರ್ಣ ಸಹಕಾರ ಒದಗಿಸಲಿದೆ.
-ಕೇಶವ ಬೆಳಾಲು, ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next