ಗಜೇಂದ್ರಗಡ: ರಸ್ತೆ ಅಗಲೀಕರಣಕ್ಕೆ ಬಲಿಯಾಗುತ್ತಿದ್ದ ಸ್ವತ್ಛಂದವಾಗಿ ಬೆಳೆದು ನಿಂತಿದ್ದ 52 ಮರಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಕಾರ್ಯ ಪಟ್ಟಣದಲ್ಲಿ ಭರದಿಂದ ಸಾಗಿದೆ.
ರಾಮಾಪೂರದಿಂದ ಗಜೇಂದ್ರಗಡ ಮಾರ್ಗವಾಗಿ ಕಾತ್ರಾಳ ಕ್ರಾಸ್ ವರೆಗಿನ ರಾಷ್ಟ್ರೀಯ ಹೆದ್ದಾರಿ 367ರ ಕಾಮಗಾರಿ ಈಗಾಗಲೇ ಪಟ್ಟಣದಲ್ಲಿ ಭರದಿಂದ ಸಾಗಿದೆ. ಹೆದ್ದಾರಿ ಪ್ರಾಧಿಕಾರ ರಸ್ತೆ ಅಗಲೀಕರಣಕ್ಕೆ ಮುಂದಾಗಿದೆ. ಆದರೆ, ಸುಂದರವಾಗಿ ಬೆಳೆದು ನಿಂತ ಮರಗಳನ್ನು ರಕ್ಷಣೆ ಮಾಡುವ ಉದ್ದೇಶದಿಂದ ಸ್ಥಳೀಯ ಶಾಸಕರ ಸಹಕಾರದಿಂದ ಅರಣ್ಯ ಇಲಾಖೆ ಮರಗಳನ್ನು ಬೇರೆಡೆಗೆ ಸ್ಥಳಾಂತರಿಸಿ, ಮರಗಳಿಗೆ ಮರುಜೀವ ತುಂಬುವ ಕಾರ್ಯ ಭರದಿಂದ ನಡೆದಿದೆ. ನಗರೀಕರಣದಿಂದ ಮರಗಳಿಗೆ ಕೊಡಲಿ ಪೆಟ್ಟು ಬೀಳುತ್ತಿದ್ದು, ಪರಿಸರ ರಕ್ಷಣೆಯ ಹಂಬಲದಿಂದ ಜನಪ್ರತಿನಿಧಿಗಳು ಮರಗಳನ್ನು ಸ್ಥಳಾಂತರಿಸಿ ಜೀವ ತುಂಬುವ ಕೆಲಸಕ್ಕೆ ಮುಂದಾಗಿದ್ದಾರೆ.
ವಿದೇಶಗಳಲ್ಲಿ ಮರಗಳನ್ನು ಒಂದೆಡೆಯಿಂದ ಇನ್ನೊಂದೆಡೆ ಸ್ಥಳಾಂತರಿಸಿರುವ ನಿದರ್ಶನಗಳನ್ನು ಪ್ರೇರಣೆಯಾಗಿಸಿಕೊಂಡು ಮರಗಳ ಸ್ಥಳಾಂತರ ಮಾಡುವ ಉಪಾಯ ಕಂಡುಕೊಂಡಿದ್ದಾರೆ. ಸಮೀಪದ ರಾಮಾಪೂರ ಗ್ರಾಮದ ರಸ್ತೆ ಮಧ್ಯೆದಲ್ಲಿನ 20 ರಿಂದ 25 ವರ್ಷಗಳ 52 ಅರಳಿ ಮರ, ಹತ್ತಿ ಮರ, ಆಲದ ಮರಗಳನ್ನು ಸ್ಥಳಾಂತರಿಸಲು ಅರಣ್ಯ ಇಲಾಖೆ ನಿರ್ಧಸಿದೆ. ಈಗಾಗಲೇ ಮರಗಳ ಸ್ಥಳಾಂತರಕ್ಕೆ ಪಟ್ಟಣದ ಗುಡ್ಡಕ್ಕೆ ಹೊಂದಿಕೊಂಡಿರುವ ಇಂಗು ಕೆರೆಯಲ್ಲಿ ಗುಂಡಿಗಳನ್ನು ಸಹ ತೆಗೆಯಲಾಗಿದ್ದು, ಮರಗಳ ಬೇರು ಬಾಡದಂತೆ ರಾಸಾಯನಿಕ ನಿಂಪಡಿಸಲಾಗಿದೆ. ಗದಗ ಜಿಲ್ಲೆ ಹೊರತುಪಡಿಸಿದರೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮರಗಳ ಸ್ಥಳಾಂತರ ಕಾರ್ಯ ಗಜೇಂದ್ರಗಡದಲ್ಲಿಯೇ ನಡೆಯುತ್ತಿರುವುದು ಪರಿಸರ ಪ್ರೇಮಿಗಳ ಸಂತಸಕ್ಕೆ ಕಾರಣವಾಗಿದೆ.
ಮರ ಸ್ಥಳಾಂತರ ವಿಧಾನ: ರಾಮಾಪೂರ ಗ್ರಾಮದ ಬಳಿಯ ಮರದ ಸುತ್ತಳತೆಯ ಎರಡು ಪಟ್ಟು ಆಳದ ಗುಂಡಿ ತೆಗೆದು, ತಾಯಿ ಬೇರಿಗೆ ಹಾನಿಯಾಗದಂತೆ ಮಣ್ಣು ಸಮೇತ ಬೇರಿಗೆ ಹಾಗೂ ಮರಕ್ಕೆ ಔಷ ಧ ಹಾಕಲಾಗಿದೆ. ಮಣ್ಣು ಬೀಳದಂತೆ ಗೋಣಿ ಚೀಲದಿಂದ ಭದ್ರಪಡಿಸಿ, ಮರ ನೆಡುವ ಕಡೆಗೆ ಮರದ ಸುತ್ತಳತೆಗೆ ಮೂರು ಪಟ್ಟು ಮೀರಿ ಆಳ ತೆಗೆದು ಮರಳು ಮತ್ತು ಎನ್‌ಜಿನ್ಸ್ ಎಂಬ ಔಷಧ ಹಾಕಿ ನೆಡಲಾಗಿದೆ. ಮರ ನೆಟ್ಟ ಎರಡು ತಿಂಗಳೊಳಗೆ ಚಿಗುರೊಡೆಯಲಿದೆ ಎಂಬುದು ಅರಣ್ಯ ಇಲಾಖೆ ಅಧಿ ಕಾರಿಗಳ ಮಾತಾಗಿದೆ.
ಪರಿಸರ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ರಸ್ತೆ ಅಗಲೀಕರಣಕ್ಕೆ ಬಲಿಯಾಗುವ ಮರಗಳನ್ನು ಸ್ಥಳಾಂತರಿಸಲು ಸರಕಾರ ಅರಣ್ಯ ಇಲಾಖೆಯಲ್ಲಿ ಪ್ರತ್ಯೇಕ ಘಟಕ ತೆರೆದು ಹಣ ಮೀಸಲಿಡಬೇಕು. ಮರಗಳ ಸ್ಥಳಾಂತರಕ್ಕೆ ತಗಲುವ ವೆಚ್ಚ ದೊಡ್ಡದಲ್ಲ. ಬದಲಾಗಿ ಮರಗಳ ಮೌಲ್ಯವೇ ಮುಖ್ಯವಾಗಿದೆ. ಮರಗಳಿಗೆ ಸೋಂಕು ತಗಲದಂತೆ ಔಷಧ ಲೇಪನ ಮಾಡಬೇಕು. ಸ್ಥಳಾಂತರವಾಗುವ ಎಲ್ಲ ಮರಗಳು ಸಹ ಸುರಕ್ಷಿತವಾಗಿ, ಆರೋಗ್ಯಯುತವಾಗಿ ಸಮೃದ್ಧಗೊಳ್ಳುವಂತೆ ನೋಡಿಕೊಳ್ಳಬೇಕು ಎಂಬುದು ಪರಿಸರ ಪ್ರೇಮಿಗಳ ಒತ್ತಾಸೆಯಾಗಿದೆ.