Advertisement

ಧರ್ಮ ಎಂದರೆ ಬದುಕುವ ರೀತಿ: ಡಾ|ಭಟ್‌

03:09 PM May 07, 2017 | |

ಕಟ್ಟೆಮಾರು ತರವಾಡು ಕ್ಷೇತ್ರದ ದೈವಗಳ ಪುನಃ ಪ್ರತಿಷ್ಠೆ 
ಬಂಟ್ವಾಳ : ನಾವು ಹೇಗೆ ಬದುಕಬೇಕು ಎಂಬುದೇ ಧರ್ಮ ಹೊರತು ಅಂಧಾನುಕರಣೆಯಲ್ಲ. ಪ್ರಾಣಿಗಳೂ ಬದುಕುತ್ತವೆ. ಅವುಗಳಿಗೆ ಪ್ರಾಕೃತಿಕ ಧರ್ಮವಿದೆ. ಅಲ್ಲಿ ಆಹಾರ ಹೊರತುಪಡಿಸಿದರೆ ಹಿಂಸೆ, ನೋವು, ಸ್ವಾರ್ಥಗಳಿಲ್ಲ. ಮನುಷ್ಯ ಮೃಗವಲ್ಲ. ಹಾಗಾಗಿ ಅವನಿಗೆ ಶಿಸ್ತುಬದ್ಧ ಜೀವನ ಬೇಕು. ಅಂತಹ ಶಿಸ್ತು ಧರ್ಮ-ಸಂಸ್ಕೃತಿಯಿಂದ ಬರುವುದು, ಇದೇ ನೈಜ ಧರ್ಮ ಎಂದು ಪುತ್ತೂರು ಶ್ರೀ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್‌ ಹೇಳಿದರು.

Advertisement

ಅವರು ಶುಕ್ರವಾರ ಕಟ್ಟೆಮಾರು ಶ್ರೀ ಧೂಮಾವತಿ, ನಾಗದೇವರು, ಚಾಮುಂಡಿ ಮತ್ತು ಪರಿವಾರ ದೈವಗಳ ತರವಾಡು ಕ್ಷೇತ್ರದ ದೈವಗಳ ಪುನಃ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ತರವಾಡು ಮನೆಯ ಗೃಹಪ್ರವೇಶ ಮೊದಲ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಆಧುನಿಕ ಆಂಗ್ಲ ಶಿಕ್ಷಣದಿಂದ ಎಳೆಯರಲ್ಲಿ ಸಂಸ್ಕಾರ ಕಡಿಮೆ ಆಗುತ್ತಿದೆ. ಶಿಕ್ಷಣದಲ್ಲಿ ಭಾರತೀಯ ವಿಚಾರಗಳ ಸೇರ್ಪಡೆ ಆಗಬೇಕು. ಅದು ವಿಚಾರ ಪ್ರಚೋದಕ ಆಗಬೇಕು. ನೀರಸ ಶಿಕ್ಷಣದಿಂದ ಆಸಕ್ತಿ ಕೆರಳುವುದಿಲ್ಲ. ಧರ್ಮದ ಮೌಲ್ಯದಿಂದ, ಶಿಕ್ಷಣದಿಂದ, ಆಚರಣೆಗಳಿಂದ ಹೊಸತನ ಮೂಡುವುದು ಎಂದು ಅವರು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ ಮಾತನಾಡಿ, ನಿಟಿಲಾಪುರ ಕ್ಷೇತ್ರ ಮತ್ತು ಇಲ್ಲಿನ ತರವಾಡು ಮನೆಗೆ ಅವಿನಾಭಾವ ಸಂಬಂಧವಿದೆ. ದೈವ-ದೇವರ ಸಾನ್ನಿಧ್ಯ ದೊರಕುವುದು ನಮ್ಮ ಪೂರ್ವ ಪುಣ್ಯ ಫಲದಿಂದ. ಸೇವೆ ಸಲ್ಲಿಸಬೇಕು ಎಂದು ಅಪೇಕ್ಷೆ ಪಟ್ಟವರಿಗೆ ಅನೇಕ ಸಂದರ್ಭಗಳಲ್ಲಿ ಅವಕಾಶ  ಲಭ್ಯವಾಗುವುದಿಲ್ಲ. ಆದರೆ ಕಟ್ಟೆಮಾರು ಕುಟುಂಬಕ್ಕೆ ಅಂತಹ ದೈವದೇವರ ಕೆಲಸ ಮಾಡಲು ಪೂರ್ವ ದಿಂದಲೇ ಅವಕಾಶ ಲಭ್ಯವಾಗಿದೆ ಎಂದರು.

ಮಕ್ಕಳಿಗೆ ಉತ್ತಮ ಸಂಸ್ಕಾರ ಸಿಗಬೇಕಾದರೆ ನಾವು ಅವರನ್ನು ಇಂತಹ ಕಾರ್ಯಕ್ರಮಗಳಲ್ಲಿ ತೊಡಗಿಸ ಬೇಕು. ಅವರಿಗೆ ಆಚರಣೆಗಳ ಮಾಹಿತಿ ನೀಡದಿದ್ದರೆ ಅವರು ದೈವದ ಕೋಲವನ್ನು ಪಾನೀಯ ಎಂದು ತಪ್ಪಾಗಿ ಅರ್ಥೈಸುವ ದಿನ ದೂರವಿಲ್ಲ ಎಂದರು.

Advertisement

ನೆಟ್ಲ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅಶೋಕ್‌ ಕುಮಾರ್‌ ಬರಿಮಾರು, ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್‌, ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ಶಿವಪ್ಪ, ಜಿ.ಪಂ. ಮಾಜಿ ಸದಸ್ಯ ಚೆನ್ನಪ್ಪ ಆರ್‌. ಕೋಟ್ಯಾನ್‌ ಮಾತನಾಡಿದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯೋಗೀಶ್‌ ಪೂಜಾರಿ ಕಡ್ತಿಲ ಪ್ರಸ್ತಾವನೆಗೈದರು. ಆಡಳಿತ ಸಮಿತಿ ಅಧ್ಯಕ್ಷ ಲೋಕಾನಂದ ಕಲ್ಲಕಟ್ಟ ಸ್ವಾಗತಿಸಿ, ಕಾರ್ಯ ದರ್ಶಿ ಜಯರಾಮ ಪೂಜಾರಿ ವಂದಿಸಿದರು. ಸತೀಶ್‌ ಬಲ್ಯ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next