ಸಿನಿಮಾ ಸೆಳೆತವೇ ಹಾಗೆ. ಅದು ಯಾವುದೇ ರಂಗವಿರಲಿ, ಒಮ್ಮೆ ಸಿನಿಮಾ ಕಡೆ ಒಲವು ಮೂಡಿದರೆ ಮುಗೀತು. ಮತ್ತೆ ಮತ್ತೆ ಸಿನಿಮಾದಲ್ಲಿ ಮಿಂದೇಳಬೇಕೆನಿಸದೇ ಇರದು. ಸಿನಿಮಾ ರಂಗ ಯಾವ ಕ್ಷೇತ್ರದವರನ್ನೂ ಬಿಟ್ಟಿಲ್ಲ. ಬಣ್ಣದ ಮೇಲಿರುವ ಪ್ರೀತಿಯಿಂದ ವಕೀಲರೊಬ್ಬರು. ಹಣ ಹಾಕಿ ತಾವೇ ಹೀರೋ ಆಗಿಯೂ ಕ್ಯಾಮೆರಾ ಮುಂದೆ ನಿಂತಿದ್ದಾರೆ. ಈಗಾಗಲೇ ಆ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಇತ್ತೀಚೆಗೆ ಚಿತ್ರದ ಆಡಿಯೋ ಸಿಡಿ ಕೂಡ ಬಿಡುಗಡೆಯಾಗಿದೆ.
ಅಂದಹಾಗೆ, ಆ ಚಿತ್ರಕ್ಕೆ “ಧರ್ಮವೀರ’ ಎಂದು ನಾಮಕರಣ ಮಾಡಲಾಗಿದೆ. ಈ ಚಿತ್ರದ ಮೂಲಕ ಡಾ.ಡಿ.ಕಲ್ಮೇಶ್ ಹಾವೇರಿಪೇಟ್ ನಿರ್ಮಾಪಕರಾಗಿ, ನಾಯಕರಾಗಿ ಗಾಂಧಿನಗರಕ್ಕೆ ಕಾಲಿಟ್ಟಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿರುವ ಕಲ್ಮೇಶ್ ಅವರಿಗೆ ಸಿನಿಮಾ ಮೇಲೆ ಆಸಕ್ತಿ ಇತ್ತು. ನಟಿಸುವ ಉದ್ದೇಶದಿಂದ ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡು, ತಾವೇ ಹಣ ಹಾಕಿ ನಾಯಕರಾಗಿ ನಟಿಸಿದ್ದಾರೆ.
ಇದೊಂದು ಗ್ರಾಮೀಣ ಸೊಗಡಿನ ಚಿತ್ರ. ಗ್ರಾಮವೊಂದರಲ್ಲಿ ಜನರ ಕಷ್ಟ, ಸುಖ ವಿಚಾರಿಸಿಕೊಂಡು ಅವರ ನೋವು-ನಲಿವುಗಳಿಗೆ ಸ್ಪಂದಿಸುವವನೇ “ಧರ್ಮವೀರ’. ಅಂತಹ ವ್ಯಕ್ತಿಯ ಮನೆಯೊಳಗೇ ಶತ್ರುಗಳು ಹುಟ್ಟಿಕೊಂಡು, ಅವರ ಹೆಸರಿಗೆ ಧಕ್ಕೆ ತರುವಂತಹ ಕೆಲಸ ಮಾಡುತ್ತಾರೆ. ಆಮೇಲೆ ಆ ವ್ಯಕ್ತಿ ಏನೆಲ್ಲಾ ಸಮಸ್ಯೆ ಎದುರಿಸಿ ನಿಲ್ಲುತ್ತಾನೆ ಅನ್ನೋದು ಕಥೆ.
ಇನ್ನು ಈ ಚಿತ್ರವನ್ನು ರಂಗನಾಥ್ ನಿರ್ದೇಶನ ಮಾಡಿದ್ದಾರೆ. “ಇದೊಂದು ಗ್ರಾಮೀಣ ಪರಿಸರದಲ್ಲಿ ಮೂಡಿಬಂದಿರುವ ಸಿನಿಮಾ. ಕುಟುಂಬ ಸಮೇತ ನೋಡಬಹುದಾದ ಚಿತ್ರ. ಧಾರವಾಡ, ಹಾವೇರಿ, ಗುಂತಲ್ಲ, ಮೈಲಾರ, ಹಿರೇಕೆರೂರು ಸುತ್ತಮುತ್ತ ಸ್ಥಳಗಳಲ್ಲಿ ಸುಮಾರು 32 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಹಾವೇರಿಯಲ್ಲಿ ಉಳಿದ ಆರು ದಿನಗಳ ಚಿತ್ರೀಕರಣ ಮುಗಿಸುವ ಯೋಚನೆ ಇದೆ’ ಎಂದು ವಿವರ ಕೊಡುತ್ತಾರೆ ಅವರು.
ಅಂದು ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಂ.ಸಾಲಿ ಅವರು ಆಕರ್ಷಣೆಯಾಗಿದ್ದರು. ಅವರೇ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದರು. “ನಿರ್ದೇಶಕರು ಅವಕಾಶ ಕೊಟ್ಟರೆ, ನಟಿಸಲು ಸಿದ್ಧ’ ಅಂತ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟರು ಸಾಲಿ.
ಈ ಚಿತ್ರದಲ್ಲಿ ಸಿಂಧು ರಾವ್ ಹಾಗೂ ರಂಜನಿ ರಾವ್ ನಾಯಕಿಯರು. ಈ ಪೈಕಿ ಸಿಂಧು ರಾವ್ ಇಲ್ಲಿ ಸಂಪ್ರದಾಯಸ್ಥ ಹುಡುಗಿಯಾಗಿ ನಟಿಸಿದ್ದಾರಂತೆ. ಇನ್ನೊಬ್ಬ ನಾಯಕಿ ರಂಜನಿ ರಾವ್‌ಗೆ ಇದು ಮೊದಲ ಅನುಭವ. ನಿರ್ದೇಶಕರು ಹೇಳಿಕೊಟ್ಟಿದ್ದನ್ನು ಇಲ್ಲಿ ಮಾಡಿದ್ದಾಗಿ ಹೇಳಿಕೊಂಡರು. ಚಿತ್ರಕ್ಕೆ ಜಗ್ಗು ಶಿರ್ಸಿ ಐದು ಗೀತೆಗಳನ್ನು ರಚಿಸಿದ್ದಾರೆ. ವಿನು ಮನಸು ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, 2018 ರ ಜನವರಿಯಲ್ಲಿ ಚಿತ್ರ ಬಿಡುಗಡೆಯಾಗಲಿದೆ.