Advertisement

ಧರ್ಮದ ವಿಮರ್ಶೆ ಅಧಿಕ ಪ್ರಸಂಗತನ ಆಗದಿರಲಿ

03:01 PM Jan 01, 2018 | |

ಬೊಳುವಾರು: ಹಿಂದೂ ಧರ್ಮದಲ್ಲಿ ಮುಕ್ತ ಸ್ವಾತಂತ್ರ್ಯವಿದೆ. ವಿಮರ್ಶೆ ಮಾಡುವ ಅಧಿಕಾರವೂ ಇದೆ. ವಿಮರ್ಶೆ ಅಧಿಕ ಪ್ರಸಂಗತನ ಆಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಕಟಪಾಡಿ ಆನೆಗುಂದಿ ಮಹಾಸಂಸ್ಥಾನದ ಜಗದ್ಗುರು ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿ ಹೇಳಿದರು. ದ.ಕ. ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘ, ವಿಶ್ವಕರ್ಮ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಬೊಳುವಾರು ಶ್ರೀ ವಿಶ್ವಕರ್ಮ ಸಭಾಭವನದಲ್ಲಿ ರವಿವಾರ ನಡೆದ ಸಾಮೂಹಿಕ ಶ್ರೀ ಗುರುಪಾದ ಪೂಜೆಯಲ್ಲಿ ಆಶೀರ್ವಚನ ನೀಡಿದರು.

Advertisement

ಧರ್ಮದ ಯಾವುದೇ ವಿಚಾರವನ್ನು ವಿಮರ್ಶೆ ಮಾಡಿ ಒಪ್ಪಿಕೋ. ಸುಖಾಸುಮ್ನೆ ಒಪ್ಪಿಕೊಳ್ಳಬೇಕಿಲ್ಲ ಎಂದು ಶಾಸ್ತ್ರವೇ ಹೇಳಿದೆ. ಹಿಂದೂ ಧರ್ಮದ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೊದಲು ಸಾಕಷ್ಟು ವಿಮರ್ಶೆ ನಡೆಸಿಕೊಳ್ಳುವುದು ಆವಶ್ಯಕ ಎಂದು ಸಲಹೆ ನೀಡಿದರು.

ವಿಚಿತ್ರ ಫ್ಯಾಷನ್‌ ನಮಗ್ಯಾಕೆ ಸೀಮಿತ?
ಯುವಜನರಲ್ಲಿ ವಿಚಿತ್ರ ಫ್ಯಾಶನ್‌ಗಳನ್ನು ಕಾಣುತ್ತೇವೆ. ಆದರೆ ಇಂತಹ ಫ್ಯಾಶನ್‌ ಗಳನ್ನು ಕ್ರೈಸ್ತ, ಮುಸಲ್ಮಾನ ಯುವಜನರಲ್ಲಿ ಕಾಣಲು ಸಾಧ್ಯವಿಲ್ಲ. ಕಾರಣ ಅವರು ಧರ್ಮವನ್ನು ಆಚರಣೆಗೆ ತಂದಿದ್ದಾರೆ. ಅವರಿಗಿಲ್ಲದ ವಿಚಿತ್ರ ಫ್ಯಾಶನ್‌, ಹಿಂದೂ ಧರ್ಮಕ್ಕೆ ಮಾತ್ರ ಸೀಮಿತ ಆಗಿರುವುದು ವಿಪರ್ಯಾಸ. ನಮ್ಮ ಸಂಸ್ಕೃತಿಯ ಬಗ್ಗೆ ನಮಗೇ ಅಸಡ್ಡೆ ಬೆಳೆದಿರುವುದು ಇಂತಹ ಫ್ಯಾಶನ್‌ಗೆ ಕಾರಣ ಎಂದು ವ್ಯಾಖ್ಯಾನಿಸಿದರು.

ಸ್ವಸ್ಥಾನದ ಪರಿಕಲ್ಪನೆ ಅಗತ್ಯ
ಸ್ವಸ್ಥಾನದ ಪರಿಕಲ್ಪನೆಯನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು. ಯಾವುದೇ ವಿಚಾರವನ್ನು ಇನ್ನೊಬ್ಬರಿಗೆ ಹೇಳುವ ಮೊದಲು ನಮ್ಮ ಜೀವನದಲ್ಲಿ ಆಚರಣೆಗೆ ತರಬೇಕು. ಇದು ಮಾದರಿಯಾಗಿ ಇರಬೇಕು ಎಂದರು.

ಹಿತರಕ್ಷಣಾ ಸಂಘದ ಅಧ್ಯಕ್ಷ ಹರಿಶ್ಚಂದ್ರ ಆಚಾರ್ಯ ಇಳಂತಿಲ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್‌ ಎಂಜಿನಿಯರ್‌ ವಿಭಾಗದ ಸುಳ್ಯ ಜೆಇ ಜನಾರ್ದನ ಆಚಾರ್ಯ ತುಂಬ್ಯ ಶುಭ ಹಾರೈಸಿದರು. ವಿಶ್ವೇಶ್ವರ ಪುರೋಹಿತ್‌, ಸಂಘದ ಗೌರವ ಸಲಹೆಗಾರ ನಲ್ಕ ಗೋಪಾಲಕೃಷ್ಣ ಆಚಾರ್ಯ, ಉಪಾಧ್ಯಕ್ಷೆ ಪ್ರಭಾ ಹರೀಶ್‌ ಆಚಾರ್ಯ, ಪ್ರ.ಕಾರ್ಯದರ್ಶಿ ಕೆ.ಆರ್‌. ಸಂಜೀವ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

Advertisement

ಮಂಗಳೂರು ಶ್ರೀ ಕಾಳಿಕಾಂಬ ವಿನಾಯಕ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿ ಆಯ್ಕೆಯಾದ ವಿ. ಪುರುಷೋತ್ತಮ ಆಚಾರ್ಯ ದಂಪತಿಯನ್ನು ಹಾಗೂ ಕಾರ್ಕಳ ಸೂರ್ಯ ಆಚಾರ್‌ ಅವರನ್ನು ಇದೇ ಸಂದರ್ಭ ಗೌರವಿಸಲಾಯಿತು. 28 ವಿದ್ಯಾರ್ಥಿಗಳಿಗೆ ಜನಶ್ರೀ ವಿಮೆಯ ಕೊನೆಯ ಕಂತನ್ನು ವಿತರಿಸಲಾಯಿತು. ಗೌರವಾಧ್ಯಕ್ಷ ಕೆ. ಉದಯ ಕುಮಾರ್‌ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ನಮ್ಮದು ಡಿವೈನ್‌ ಸಂಸ್ಕೃತಿ
ಹಿಂದೂ ಧರ್ಮ ಡಿವೈನ್‌ ಸಂಸ್ಕೃತಿಯಿಂದ ಕೂಡಿದೆಯೇ ಹೊರತು, ವೈನ್‌ ಸಂಸ್ಕೃತಿಯಿಂದಲ್ಲ. ಸಂಸ್ಕೃತಿ ಎಂದರೆ ನಮ್ಮ ಸ್ಥಾನದ ಪರಿಕಲ್ಪನೆಯನ್ನು ನಾವು ತಿಳಿದುಕೊಂಡಿರುವುದು. ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಸೂರ್ಯೋದಯವನ್ನು ನೋಡಲು ಸಾಧ್ಯವಾಗದ ಪರಿಸ್ಥಿತಿ ಕೆಲವರಲ್ಲಿದೆ. ಆದ್ದರಿಂದ ಹೊಸ ವರ್ಷದ ಸಂಭ್ರಮ ಆಚರಣೆಗಷ್ಟೇ ಇರಲಿ. ಹೊರ ಜಗತ್ತಿನ ವ್ಯವಹಾರವನ್ನು ಮನೆಯೊಳಗೆ ತರುವುದು ಬೇಡ. ಮನೆಯೊಳಗಿನ ಜಗತ್ತನ್ನು ಹೊರಜಗತ್ತಿಗೆ ತಿಳಿಸುವುದು ಬೇಡ ಎಂದು ಜಗದ್ಗುರು ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಕಿವಿಮಾತು ಹೇಳಿದರು.

ಸಮಾಜ ಸೇವೆ
ಮಂಗಳೂರು ಬಜಾರ್‌ ಬೀಡಿ ಮಾಲಕ ಗೋಪಾಲಕೃಷ್ಣ ಆಚಾರ್ಯ ಮಾತನಾಡಿ, ದುಡಿಮೆಯ ಒಂದಂಶವನ್ನು ಸಮಾಜಕ್ಕೆ ಅರ್ಪಿಸುವ ಕೆಲಸ ಇಂದು ಆಗಬೇಕಿದೆ. ಕೆರೆಯ ನೀರನ್ನು ಕೆರೆಗೆ ಚೆಲ್ಲುವ ಕೆಲಸವಿದು. ಮಾತ್ರವಲ್ಲ, ಸಮಾಜ ಸೇವೆಗೆ ಹೊಸ ಮುಖಗಳನ್ನು ಪರಿಚಯಿಸಬೇಕಿದೆ. ಇದಕ್ಕಾಗಿ ಯುವಕರಿಗೆ ಸಮಾಜ ಸೇವೆಯಲ್ಲಿ ಅವಕಾಶ ನೀಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next