ಹರಪನಹಳ್ಳಿ: ರಾಜಕೀಯ ನಾಯಕರು ಜಾತಿ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಭಗವಂತ ಸೃಷ್ಟಿಸಿರುವುದು ಮನುಷ್ಯ ಜಾತಿ ಮಾತ್ರ. ಧರ್ಮ ಮತ್ತು ಜಾತಿ ಎರಡೂ ಬೇರೆಯಾಗಿದ್ದು, ಧರ್ಮ ಮಾನವರನ್ನು ಒಗ್ಗೂಡಿಸುತ್ತದೆ, ಜಾತಿ ವಿಂಗಡಿಸುತ್ತದೆ ಎಂದು ಸಿರಿಗೆರೆ ತರಳಬಾಳು ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿಶ್ಲೇಷಿಸಿದರು. ತಾಲೂಕಿನ ಎಂ.ಬಾವಿಹಳ್ಳಿ ಗ್ರಾಮದಲ್ಲಿ ಶ್ರೀ ಆದಿಶಕ್ತಿ ಹಾಗೂ ಪತ್ರಿ ಬಸವೇಶ್ವರ ಸ್ವಾಮಿಯ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜಕಾರಣ ಸಮಾಜವನ್ನು ಕಲುಷಿತಗೊಳಿಸಿದ್ದು, ಚುನಾವಣೆ ಸಂದರ್ಭದಲ್ಲಿ ಜಾತಿಗಳು ಬಯಲಿಗೆ ಬರುತ್ತವೆ. ರಾಜಕಾರಣಿಗಳು ನೀತಿಯನ್ನು ಬಂಡವಾಳ ಮಾಡುವ ಬದಲು ಜಾತಿಯನ್ನು ಬಂಡವಾಳನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಇಂದು ರಾಜಕಾರಣಿಗಳನ್ನು ಭ್ರಷ್ಟರನ್ನಾಗಿ ಮಾಡಿರುವುದು ಮತದಾರರು. ಹಾಗಾಗಿ ಮತದಾರರು ಮಹಾ ಭ್ರಷ್ಟರಾಗಿದ್ದಾರೆ ಎಂದು ಹೇಳಿದರು.
ಮತದಾರರು ತೆಗೆದುಕೊಳ್ಳುವ ಹಣ 5 ವರ್ಷಕ್ಕೆ ಲೆಕ್ಕ ಹಾಕಿದಾಗ ಭಿಕ್ಷುಕರಿಗಿಂತಲೂ ಕಡೆಯಾಗಿರುತ್ತದೆ. ಅಲ್ಲದೇ ತಾಯಂದಿರು ಕೂಡ ಕುಟುಂಬದ ಸದಸ್ಯರನ್ನು ಹೊರತುಪಡಿಸಿ ಇನ್ಯಾರೋ ತಂದು ಕೊಟ್ಟ ಸೀರೆಯನ್ನು ತೆಗೆದುಕೊಳ್ಳುವುದು ತಪ್ಪು. ಆದ್ದರಿಂದ ತಾಯಂದಿರು ಮರ್ಯಾದೆಯನ್ನು ಕಾಪಾಡಿಕೊಳ್ಳಬೇಕು.
ಎಲ್ಲರೂ ಧರ್ಮವನ್ನು ಎತ್ತಿ ಹಿಡಿಯಬೇಕು. ಯಾವುದೇ ಅಮಿಷಗಳಿಗೆ ಒಳಗಾಗದೆ ಪರಿಶುದ್ಧ ಚುನಾವಣೆ ಆಗಲು ಪರಿಶುದ್ಧತೆಯಿಂದ ಮತದಾನ ಮಾಡಬೇಕು. ಆ ಮೂಲಕ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಬೇಕು ಎಂದು ತಿಳಿಸಿದರು. ಮನಗೋಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರೂ ಜಾತಿ, ಭೇದ ಭಾವ ಇಲ್ಲದಂತೆ ಪ್ರೀತಿ, ವಿಶ್ವಾಸದಿಂದ ಜೀವನ ನಡೆಸಬೇಕು. ನಾವು ಮಾಡಿದ ಕಾಯಕ, ಸಾಧನೆಗೆ ಕಾರಣವಾಗುತ್ತದೆ. ಆದ್ದರಿಂದ ಎಲ್ಲರೂ ಧಾರ್ಮಿಕ ಸಭೆ,
ಸಮಾರಂಭಗಳಲ್ಲಿ ಭಾಗವಹಿಸಿ ಸಂಸ್ಕಾರ ಕಲಿಯಬೇಕು. ಮಠ, ಮಾನ್ಯಗಳಿಗೆ ತನು, ಮನ, ಧನದ ಸಹಕಾರ ಭಾವನೆ ಇರಲಿ ಎಂದರು.
ನಿವೃತ್ತ ಕನ್ನಡ ಉಪನ್ಯಾಸಕ ಎಂ.ಪಿ.ಎಂ. ಶಾಂತವೀರಯ್ಯ ಮಾತನಾಡಿ, ವಿಜ್ಞಾನ, ತಂತ್ರಜ್ಞಾನ ಮುಂದುವರೆದಂತೆ ಶಾಂತಿ ನೆಮ್ಮದಿ ಇಲ್ಲದಾಗಿದೆ. ಶಿಷ್ಟಚಾರವಿಲ್ಲದೇ ಭ್ರಷ್ಟಾಚಾರವಾಗುತ್ತಿದೆ. ಧರ್ಮ ಬಿಟ್ಟು ಹೋಗದೇ ಎಲ್ಲರೂ ನ್ಯಾಯ, ನೀತಿ ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು.
ಸಾಧು ವೀರಶೈವ ಸಮಾಜದ ಅಧ್ಯಕ್ಷ ಬಿ. ಮಂಜುನಾಥ, ವೀರಶೈವ ಪಂಚಮಸಾಲಿ ತಾಲೂಕು ಅಧ್ಯಕ್ಷ ಪಾಟೀಲ್ ಬೆಟ್ಟನಗೌಡ, ನಿವೃತ್ತ ಪ್ರಾಚಾರ್ಯ ಎ. ಸಿದ್ದೇಶ್ವರ್, ವಕೀಲ ಕೆ. ಬಸವರಾಜ್, ನಿವೃತ್ತ ಶಿಕ್ಷಕ ಎಂ.ಬಸಪ್ಪ, ಕೆ.ಕುಬೇರಪ್ಪ, ಮಲ್ಲಿಕಾರ್ಜುನ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.