ಬೆಂಗಳೂರು: ವಿಧಾನಮಂಡಲ ಕಾಗದ ಪತ್ರಗಳ ಸಮಿತಿ ಹಾಗೂ ಹಕ್ಕುಚ್ಯುತಿ ಸಮಿತಿಯೆದುರು ಹಾಜರಾಗುವಂತೆ ಲೋಕಾಯುಕ್ತ ರಿಜಿಸ್ಟ್ರಾರ್‌ಗೆ ನೀಡಲಾಗಿದ್ದ ನೋಟಿಸ್‌ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಲೋಕಾಯುಕ್ತ ಸಂಸ್ಥೆಯು ವಾರ್ಷಿಕ ಲೆಕ್ಕಪರಿಶೋಧನಾ ವರದಿ ಸಲ್ಲಿಸದೆ ಇರುವುದರಿಂದ ಹಕ್ಕುಚ್ಯುತಿ ಮಂಡನೆಗೆ ಅನುಮತಿ ಕೋರಿ ಕಾಗದ ಪತ್ರಗಳ ಸಮಿತಿ ಅಧ್ಯಕ್ಷರಾದ ಶಾಸಕ ಸಾ.ರಾ ಮಹೇಶ್ ವಿಧಾನಸಭಾಧ್ಯಕ್ಷರಿಗೆ ನೀಡಿದ್ದ ಪತ್ರ, ಈ ಕುರಿತು ವಿಧಾನಸಭಾಧ್ಯಕ್ಷರ ಮುಂದೆ ಹಾಜರಾಗುವಂತೆ ಸಚಿವಾಲಯದ ಉಸ್ತುವಾರಿ ಕಾರ್ಯದರ್ಶಿ ನೀಡಿದ್ದ ನೋಟಿಸ್ ರದ್ದು ಕೋರಿ
ಲೋಕಾಯುಕ್ತ ರಿಜಿಸ್ಟ್ರಾರ್ ಎಚ್.ಎಂ ನಂಜುಂಡಸ್ವಾಮಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್ ಬುಧವಾರ ಈ ಅರ್ಜಿಯ ವಿಚಾರಣೆ ನಡೆಸಿ ಅರ್ಜಿದಾರರಿಗೆ ನೀಡಿರುವ ನೋಟಿಸ್ ಸಂಬಂಧ ಮುಂದಿನ ಯಾವುದೇ ಕ್ರಮಗಳನ್ನು ಜರುಗಿಸದಂತೆ ನಿರ್ಬಂಧ ವಿಧಿಸಿ ಮಧ್ಯಂತರ ತಡೆಯಾಜ್ಞೆ ಆದೇಶ ನೀಡಿತು. ಪ್ರಕರಣ ಸಂಬಂಧ ಪ್ರತಿವಾದಿಗಳಾದ ವಿಧಾನ ಮಂಡಲದ ಕಾಗದ ಪತ್ರಗಳ ಸಮಿತಿ ಅಧ್ಯಕ್ಷ, ಹಕ್ಕುಬಾಧ್ಯತಾ ಸಮಿತಿ , ಸಚಿವಾಲಯದ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಪ್ರಧಾನ ಕಾರ್ಯದರ್ಶಿಗೆ ನ್ಯಾಯಮೂರ್ತಿ ಎ.ಎಸ್ ಬೋಪಣ್ಣ ಅವರಿದ್ದ ಏಕಸದಸ್ಯ ಪೀಠ, ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು. ರಿಜಿಸ್ಟ್ರಾರ್ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಅನುಮತಿ ನೀಡುವಂತೆ ಕೋರಿ ಕಾಗದಪತ್ರಗಳ ಸಮಿತಿ ಅಧ್ಯಕ್ಷ ಶಾಸಕ ಸಾ.ರಾ ಮಹೇಶ್, ಕಳೆದ ವರ್ಷ ಅ.10ರಂದು ವಿಧಾನಸಭಾಧ್ಯಕ್ಷರಿಗೆ ಪತ್ರ ಬರೆದಿದ್ದರು. ಈ ಸಂಬಂಧ ಹಕ್ಕುಚ್ಯುತಿ ಮಂಡನೆ ಕ್ರಮಕ್ಕೆ ಸಂಬಂಧಿಸಿದಂತೆ ವಿಧಾನಸಭಾಧ್ಯಕ್ಷರ ಮುಂದೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಡಿ. 26ರಂದು ಸಚಿವಾಲಯದ ಉಸ್ತುವಾರಿ ಕಾರ್ಯದರ್ಶಿ ನೋಟಿಸ್ ನೀಡಿದ್ದರು.
ರಿಜಿಸ್ಟ್ರಾರ್ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವಿಲ್ಲ!:
ಸ್ವಾಯತ್ತ ಸಂಸ್ಥೆಯಾಗಿರುವ ಲೋಕಾಯುಕ್ತದ ರಿಜಿಸ್ಟ್ರಾರ್ ಸೇರಿದಂತೆ ಯಾವುದೇ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಲೋಕಾಯುಕ್ತ ಕಾಯಿದೆ ಕಲಂ 17 (ಎ) ಅನ್ವಯ ಲೋಕಾಯುಕ್ತರಿಗೆ ಅಧಿಕಾರವಿದೆ. ಆದರೆ, ಶಾಸನಸಭೆಗೆ ಲೋಕಾಯುಕ್ತ ರಿಜಿಸ್ಟ್ರಾರ್ ಸೇರಿ ನ್ಯಾಯಾಂಗ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ, ವಿಚಾರಣೆಗೆ ಹಾಜರು ಪಡಿಸಲು ಅವಕಾಶವಿಲ್ಲ. ಅದು
ಸಕ್ಷಮ ಪ್ರಾಧಿಕಾರವಲ್ಲ. ನ್ಯಾಯಾಂಗ ಅಧಿಕಾರಿ ಹಾಗೂ ಜಿಲ್ಲಾ ನ್ಯಾಯಾಧೀಶರೂ ಆಗಿರುವ ರಿಜಿಸ್ಟ್ರಾರ್ ಅವರನ್ನು ಖುದ್ದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿರುವುದು ಕಾನೂನುಬಾಹಿರ ಕ್ರಮ ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.