ಮುಂಬೈ: ಹಲವಾರು ಹೊಸತನದ ಹೆಜ್ಜೆಯಿರಿಸುತ್ತಿರುವ ರಿಲಯನ್ಸ್ ಸಂಸ್ಥೆ ಇದೀಗ ನೂತನ ಪ್ರಯೋಗಕ್ಕೆ ಮುಂದಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಎಲ್ ಟಿಡಿ(ಆರ್ ಐಎಲ್) ನಿಂದ ಆನ್ ಲೈನ್ ನಲ್ಲಿ ಕಿರಾಣಿ ವಸ್ತುಗಳನ್ನು ಒದಗಿಸುವ ಸೇವೆ ‘ಜಿಯೋ ಮಾರ್ಟ್’ ಭಾರತದಲ್ಲಿ ಪ್ರಾರಂಭವಾಗಿದೆ.
ಕಳೆದ ತಿಂಗಳಷ್ಟೆ ಸಾಮಾಜಿಕ ಜಾಲತಾಣದ ದೈತ್ಯ ಫೇಸ್ ಬುಕ್, ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ದಲ್ಲಿ 5.7 ಬಿಲಿಯನ್ ಡಾಲರ್ ಹೂಡಿಕೆ ಮಾಡುವ ಮೂಲಕ ಶೇ 9.99ರಷ್ಟು ಪಾಲುದಾರಿಕೆ ಪಡೆದುಕೊಂಡಿತ್ತು.
ಸದ್ಯ ಇ-ಕಾಮರ್ಸ್ ಸಂಸ್ಥೆಗಳಾದ ಅಮೇಜಾನ್, ಫ್ಲಿಫ್ ಕಾರ್ಟ್ ಗಳು ಭಾರತದ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದ್ದು, ಅಗತ್ಯ ವಸ್ತುಗಳನ್ನು ಆನ್ ಲೈನ್ ಮೂಲಕ ಪೂರೈಸುತ್ತಿದೆ. ಇದೇ ರೀತಿಯಾಗಿ ಹೊಸದಾಗಿ ಆರಂಭಗೊಂಡಿರುವ ಜಿಯೋ ಮಾರ್ಟ್ ಆನ್ ಲೈನ್ ಸರ್ವೀಸ್ ಕಾರ್ಯನಿರ್ವಹಿಸಲಿದ್ದು, ದಿನಸಿ ವಸ್ತುಗಳು ಸೇರಿದಂತೆ ಅಗತ್ಯ ವಸ್ತುಗಳು ಎಲ್ಲವೂ ದೊರಕಲಿದೆ.
ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಜಿಯೋ ಮಾರ್ಟ್ ಸೇವೆಯನ್ನು ಪರೀಕ್ಷಿಸಲಾಗಿತ್ತು. ಇದೀಗ ಭಾರತದಾದ್ಯಂತ ರಿಲಾಯನ್ಸ್ ತನ್ನ ಇ ಕಾಮರ್ಸ್ ವೇದಿಕೆಯನ್ನು ಬಿಡುಗಡೆ ಮಾಡಿದೆ. ರಿಲಯನ್ಸ್ ಇಂಡಸ್ಟ್ರೀಸ್ ನ ರಿಟೇಲ್ ವಿಭಾಗವಾದ ‘ರಿಲಯನ್ಸ್ ಸ್ಮಾರ್ಟ್’ ನ ಸಿಇಓ ದಾಮೋದರ್ ಮಾಲ್ ಜಿಯೋ ಮಾರ್ಟ್ ಆರಂಭದ ಕುರಿತು ಟ್ವೀಟ್ ಮಾಡಿದ್ದು, ದೇಶದ 200 ನಗರಗಳಲ್ಲಿ ಶೀಘ್ರವೇ ಸೇವೆ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಸದ್ಯ ಕಿರಾಣಿ ವಸ್ತುಗಳನ್ನು ಮಾತ್ರ ಒದಗಿಸಲಿದ್ದು, ವೆಬ್ ಅವೃತ್ತಿಯಲ್ಲಿ ಮಾತ್ರ ಲಭ್ಯವಿದೆ. ಅದಾಗ್ಯೂ ಮುಂಬೈನಲ್ಲಿರುವ ರಿಲಯನ್ಸ್ ಪ್ರಧಾನ ಕಚೇರಿಯಿಂದ ಜಿಯೋ ಮಾರ್ಟ್ ಪ್ರಾರಂಭದ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.
ಜಿಯೋ ಮಾರ್ಟ್ ಅಪ್ಲಿಕೇಶನ್ ಜಾರಿಗೆ ಬಂದ ನಂತರ ಪ್ರಮುಖ ಇ ಕಾಮರ್ಸ್ ಕಂಪೆನಿಗಳಾದ ಅಮೆಜಾನ್ , ಪ್ಲಿಫ್ ಕಾರ್ಟ್ ಗಳಿಗೆ ಪ್ರತಿಸ್ಪರ್ಧೀಯಾಗಲಿದೆ ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದೆ.