ಹೊಸದಿಲ್ಲಿ : ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕರಾಗಿರುವ ಮುಕೇಶ್ ಅಂಬಾನಿ ಅವರು ಜಿಯೋ ಗೆ ಅತ್ಯಧಿಕ ಸಂಖ್ಯೆಯ ನೋಂದಣಿದಾರರನ್ನು ಆಕರ್ಷಿಸುವ ಸಲುವಾಗಿ ಹಾಗೂ ಈಗಿರುವ ಬಳಕೆದಾರರನ್ನು ಜಿಯೋ ಜಾಲದಲ್ಲಿ ದೀರ್ಘ ಕಾಲ ಉಳಿಸಿಕೊಳ್ಳುವ ಸಲುವಾಗಿ ಹೊಸ ಕೊಡುಗೆಯೊಂದನ್ನು ಬಳಕೆದಾರರ ಮುಂದಿಟ್ಟಿದ್ದಾರೆ.
ಮಾರ್ಚ್ 31ರಂದು ಈ ಮೊದಲಿನ ಹಲವು ಉಚಿತಗಳ ಹ್ಯಾಪಿ ನ್ಯೂ ಇಯರ್ ಕೊಡುಗೆ ಕೊನೆಗೊಳ್ಳಲಿರುವುದರಿಂದ, ಎಪ್ರಿಲ್ 1ರಿಂದ ಜಾರಿಗೆ ಬರುವಂತೆ ಜಿಯೋ ತನ್ನ ಸೇವಾ ಕೊಡುಗೆಗಳನ್ನು ಈ ಹಿಂದೆಯೇ ಪ್ರಕಟಿಸಿತ್ತು; ಆದರೆ ಉಚಿತವಾಗಿ ಅಲ್ಲ – ಬದಲು 99 ರೂ.ಗಳ ಜಿಯೋ ಪ್ರೈಮ್ ಮೆಂಬರ್‌ಶಿಪ್ ಪಡೆಯುವ ಮೂಲಕ, ಮತ್ತು ತಿಂಗಳಿಗೆ 303 ರೂ.ಗಳ ರೀಚಾರ್ಜ್ ಶುಲ್ಕ ಪಾವತಿಸುವ ಮೂಲಕ !
ಅಂತೆಯೇ ರಿಲಯನ್ಸ್ ಜಿಯೋ ಕಳೆದ ಮಾರ್ಚ್ 1ರಿಂದ ಜಿಯೋ ಪ್ರೈಮ್ ಮೆಂಬರ್‌ಶಿಪ್ ಯೋಜನೆಯನ್ನು ಪ್ರಕಟಿಸಿತ್ತು. ಇದಕ್ಕೆ ಸೇರಬಯಸುವ ಆಸಕ್ತರು 99 ರೂ.ಗಳನ್ನು ಪಾವತಿಸಬೇಕಾಗಿತ್ತು. ಅಲ್ಲದೇ ತಿಂಗಳಿಗೆ 303 ರೂ. ರೀಚಾರ್ಜ್ ದರ ತೆತ್ತು ರಿಲಯನ್ಸ್‌ನ 4ಜಿ “ಹ್ಯಾಪಿ ನ್ಯೂ ಇಯರ್ ಕೊಡುಗೆ’ಯನ್ನು ಮಾರ್ಚ್ 31ರ ಬಳಿಕವೂ ಪೂರ್ತಿಯಾಗಿ ಅನುಭವಿಸುವುದಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಇದೀಗ ಮುಕೇಶ್ ಅಂಬಾನಿ ಅವರು ರಿಲಯನ್ಸ್ ಜಿಯೋ ಪ್ರೈಮ್ ಮೆಂಬರ್‌ಶಿಪ್ ಪಡೆಯಲು ಪಾವತಿಸಬೇಕಾಗಿರುವ 99 ರೂ.ಗಳನ್ನು ರಿಲಯನ್ಸ್ ಜಿಯೋದಲ್ಲಿನ ಜಿಯೊ ಮನಿ ಆ್ಯಪ್ ಮೂಲಕ ಪಾವತಿಸಿದರೆ 50 ರೂ. ಕ್ಯಾಶ್ ಬ್ಯಾಕ್ ಆಫರ್ ಪಡೆಯಬಹುದೆಂದು ಹೇಳಿದ್ದಾರೆ. ಅದೇ ರೀತಿ ತಿಂಗಳ ರೀಚಾರ್ಜ್ 303 ರೂ.ದರವನ್ನು ಜಿಯೋ ಮನಿ ಆ್ಯಪ್ ಮೂಲಕ ಪಾವತಿಸಿದರೆ ಪುನಃ 50 ರೂ.ಗಳ ಕ್ಯಾಶ್ ಬ್ಯಾಕ್ ಆಫರ್ ಸಿಗುತ್ತದೆ.
ಎಂದರೆ ಒಟ್ಟಾರೆಯಾಗಿ ಬಳಕೆದಾರರಿಗೆ 50 + 50 ರೂ. ಎಂದರೆ ಒಟ್ಟು 100 ರೂ. ಕ್ಯಾಶ್ ಬ್ಯಾಕ್ ಆಫರ್ ಸಿಗುವಂತಾಗಿ, ಬಳಕೆದಾರರು ಪಾವತಿಸುವ 99 ರೂ.ಗಳ ಜಿಯೋ ಪ್ರೈಮ್ ಮೆಂಬರ್‌ಶಿಪ್ ಶುಲ್ಕ ಪೂರ್ತಿಯಾಗಿ ಉಚಿತವಾದಂತಾಗುತ್ತದೆ.
ಮುಕೇಶ್ ಅಂಬಾನಿ ಅವರ ಈ ಡಬಲ್ ಕ್ಯಾಶ್ ಬ್ಯಾಕ್ ಆಫರ್, ಬಳಕೆದಾರರಿಗೂ ಜಿಯೋ ಕಂಪೆನಿಗೂ ವಿನ್-ವಿನ್ ಸ್ಥಿತಿಯಾಗಿರುವುದರಿಂದ ಜಿಯೋ ಬಳಕೆದಾರರನ್ನು ಪೂರ್ತಿಯಾಗಿ ತಮ್ಮ ಜಾಲದಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗುವುದೆಂದು ಭಾವಿಸಲಾಗಿದೆ.