ಮುಂಬಯಿ : ಉದ್ಯಮಿ ಮುಕೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಇದೀಗ ಪುನಃ ಭಾರತದ ಅತ್ಯಂತ ಮೌಲ್ಯಯುತ ಕಂಪೆನಿಯಾಗಿ ತನ್ನ ಅಗ್ರಸ್ಥಾನವನ್ನು ಮರಳಿ ಸಂಪಾದಿಸಿದೆ.
ಈ ನಿಟ್ಟಿನಲ್ಲಿ ರಿಲಯನ್ಸ್ ಕಂಪೆನಿಯು ಟಾಟಾ ಕನ್‌ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಕಂಪೆನಿಯನ್ನು ಹಿಂದಿಕ್ಕಿದೆ.
ಕಳೆದ ಎರಡು ತಿಂಗಳಲ್ಲಿ ಶೇರು ಮಾರುಕಟ್ಟೆಗಳಲ್ಲಿ ರಿಲಯನ್ಸ್ ಕಂಪೆನಿಯ ಶೇರು ಧಾರಣೆ ಒಂದೇ ಸಮನೆ ನಿರಂತರವಾಗಿ ಏರುತ್ತಾ ಬಂದಿರುವುದು ಮತ್ತು ತದ್ವಿರುದ್ಧವಾಗಿ ಟಿಸಿಎಸ್ ಕಂಪೆನಿಯ ಶೇರು ಧಾರಣೆ ಕುಸಿದಿರುವುದು ಇದಕ್ಕೆ ಕಾರಣವಾಗಿದೆ.
ಇಂದು ರಿಲಯನ್ಸ್ ಕಂಪೆನಿಯ ಶೇರು ದಿನದ ವಹಿವಾಟಿನಲ್ಲಿ ಕಂಡಿರುವ ಗರಿಷ್ಠ ಎತ್ತರವಾಗಿ 1,410 ರೂ.ಗಳ ಮಟ್ಟವನ್ನು ತಲುಪಿದೆ. ನಿನ್ನೆ ಸೋಮವಾರದ ವಹಿವಾಟಿನ ಅಂತ್ಯದಲ್ಲಿ ರಿಲಯನ್ಸ್ ದಾಖಲಿಸಿದ್ದ ಧಾರಣೆಗಿಂತ ಇಂದಿನದು ಶೇ.1.44ರಷ್ಟು ಹೆಚ್ಚಿರುವುದು ಗಮನಾರ್ಹವಾಗಿದೆ.
ಟಿಸಿಎಸ್ ಶೇರಿನ ಧಾರಣೆ ಈಗ 2,315.15ರಲ್ಲಿ ಸ್ಥಿತವಾಗಿದೆ. ಇಂದು ಅದು ಕಂಡಿರುವ ಕುಸಿತ ಶೇ.0.25. ಇಂದು ಟಿಸಿಎಸ್ ತನ್ನ ನಾಲ್ಕನೇ ತ್ತೈಮಾಸಿಕ ಮತ್ತು ಪೂರ್ತಿ ವರ್ಷದ ಹಣಕಾಸು ಫಲಿತಾಂಶವನ್ನು ಪ್ರಕಟಿಸಲಿದೆ.
ಈಗಿನ ಧಾರಣೆಯಲ್ಲಿ ರಿಲಯನ್ಸ್ ಶೇರು 4.57 ಲಕ್ಷ ಕೋಟಿ ರೂ.ಗಳ ಬಂಡವಳೀಕರಣವನ್ನು ದಾಖಲಿಸಿದೆ. ಇದು ಟಿಸಿಎಸ್‌ಗಿಂತ ಅಧಿಕವಿದೆ.
ಜಿಯೋದಿಂದಾಗಿಯೂ ರಿಲಯನ್ಸ್‌ನ ಮಾರುಕಟ್ಟೆ ಮೌಲ್ಯ ಏರುವಂತಾಗಿರುವುದು ಕೂಡ ಗಮನಾರ್ಹವಾಗಿದೆ.