ದರ್ಬೆ: ವಿದ್ಯಾರ್ಥಿಗಳು ಪಠ್ಯ ಅಧ್ಯಯನದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲೂ ಸಕ್ರಿಯವಾಗಿ ಭಾಗವಹಿಸಿದಾಗ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣ ಆಗುತ್ತದೆ ಎಂದು ಸಂತ ಫಿಲೋಮಿನಾ ಕಾಲೇಜಿನ ಪ್ರಾಚಾರ್ಯ ಪ್ರೊ| ಲಿಯೋ ನೊರೊನ್ಹಾ ಅವರು ಹೇಳಿದರು.
ಸಂತ ಫಿಲೋಮಿನಾ ಕಾಲೇಜಿನ ದ್ವಿತೀಯ ಬಿಸಿಎ ವಿಭಾಗದ ವಿದ್ಯಾರ್ಥಿ ವಿಶ್ವಜಿತ್ ಇವರ ನಿರ್ದೇಶನದಲ್ಲಿ ವಿಶು ಕ್ರಿಯೇಶನ್ಸ್ ತಂಡದವರ ಅರೆಭಾಷೆ ಕಿರುಚಿತ್ರ ‘ನೆಂಟತಿ ಗೂಡೆ’ ಇದರ ಪೋಸ್ಟ ರನ್ನು ಕಾಲೇಜಿನ ಸ್ಪಂದನ ಭಾಭವನದಲ್ಲಿ ಮೇ 10ರಂದು ಬಿಡುಗಡೆಗೊಳಿಸಿ, ಮಾತನಾಡಿದರು.
ಶಿಕ್ಷಣದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ನಾನಾ ರೀತಿಯ ಅವಕಾಶಗಳಿವೆ. ವಿದ್ಯಾರ್ಥಿಗಳು ಆಸಕ್ತಿ, ಸೃಜನಶೀಲತೆ ಮತ್ತು ಕ್ರಿಯಾಶೀಲತೆಯನ್ನು ಹೊಂದಿದಾಗ ಹೊಸ ನಮೂನೆಯ ಜ್ಞಾನದ ಸೃಷ್ಟಿಯಾಗುತ್ತದೆ. ಕಲಾವಿದರಿಗೆ ಸಮಾಜದಲ್ಲಿ ಸದಾ ಉತ್ತಮ ಮನ್ನಣೆಯಿದೆ. ಕಲಾ ಭೂಮಿಕೆಯನ್ನು ಉತ್ತುಂಗಕ್ಕೆ ಕೊಂಡೊಯ್ಯುವಲ್ಲಿ ಕಲಾವಿದರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.
ನಿರ್ದೇಶಕ ವಿಶ್ವಜಿತ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗೌಡ ಜನಾಂಗದ ಪ್ರಮುಖ ಭಾಷೆಯಾದ ಅರೆಭಾಷೆಯನ್ನು ವಿಶು ಕ್ರಿಯೇಶನ್ಸ್ ತಂಡದವರು ಈ ಕಿರುಚಿತ್ರದಲ್ಲಿ ಅಳವಡಿಸಿಕೊಂಡಿದ್ದಾರೆ. ಅಣ್ಣ ತಮ್ಮಂದಿರ ವೈಮನಸ್ಸಿನಿಂದ ನೊಂದು ಮನೆಯಿಂದ ದೂರವಾದ ಚಿಕ್ಕ ಹುಡುಗಿಯ ಕಥೆಯೇ ‘ನೆಂಟತಿ ಗೂಡೆ’. ಇದರಲ್ಲಿ ಕೊಡಗಿನ ಗೌಡ ಜನಾಂಗ ಬಾಂಧವರಾದ 35ಕ್ಕೂ ಹೆಚ್ಚು ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ. ಕೊಡಗಿನ ಸುತ್ತಮುತ್ತ ಚಿತ್ರೀಕರಣಗೊಂಡಿರುವ ಈ ಕಿರುಚಿತ್ರವು ಕುಯ್ಯಮುಡಿ ಐನ್ಮನೆಯ ಸೊಬಗನ್ನು ಅದ್ಭುತವಾಗಿ ಒಳಗೊಂಡಿದ್ದು, ಮುಖ್ಯ ತಾರೆಯಾಗಿ ಜಾಗೃತಿ ಕಡ್ಯದ ಅಭಿನಯಿಸಿದ್ದಾರೆ. ಈ ಕಿರು ಚಿತ್ರವು ವಿಶು ಕ್ರಿಯೇಶನ್ಸ್ ಎಂಬ ಯುಟ್ಯೂಬ್ ಚ್ಯಾನಲ್‌ನಲ್ಲಿ ಮೇ 16ರಂದು ಬಿಡುಗಡೆಗೊಳ್ಳಲಿದೆ ಎಂದರು.
ಕಾಲೇಜಿನ ಎನ್‌ಸಿಸಿ ಅಧಿಕಾರಿ ಲೆ| ಜಾನ್ಸನ್ ಡೇವಿಡ್ ಸಿಕ್ವೇರಾ, ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ವಿನಯಚಂದ್ರ, ಸಾರ್ವಜನಿಕ ಸಂಪರ್ಕಾಧಿಕಾರಿ ದಿನಕರ ರಾವ್, ಕಿರುಚಿತ್ರದ ವಿಎಫ್‌ಎಕ್ಸ್ ಎಡಿಟರ್ ಗೌರೀಶ್, ಕೋ-ಎಡಿಟರ್ ಶಿಲ್ಪಕ್, ನಟ ತುಶಿತ್ ಬೈತಡ್ಕ, ಟೆಕ್ನೀಷಿಯನ್ ಮೋಕ್ಷಿತ್ ಪೆರುಮುಂಡ, ವೋಯ್ಸ ವೋವರ್ ಮೇಘನಾ ಗಬಲಡ್ಕ ಹಾಗೂ ಇತರ ಸಹಕಲಾವಿದರು ಉಪಸ್ಥಿತರಿದ್ದರು.