ವಾಷಿಂಗ್ಟನ್: ಮುಂಬಯಿನಲ್ಲಿ 2008ರ ಉಗ್ರ ದಾಳಿಯ ಸಂಚುಕೋರ ತಹಾವ್ವುರ್ ರಾಣಾಗೆ ಜಾಮೀನು ನೀಡಿದರೆ ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯಕ್ಕೆ ಧಕ್ಕೆ ಬರಬಹುದು. ಹೀಗಾಗಿ, ಆತನಿಗೆ ಜಾಮೀನು ನೀಡಬಾರದು ಎಂದು ಅಮೆರಿಕ ಪ್ರತಿಪಾದಿಸಿದೆ.
ಭಾರತದಲ್ಲಿ ಮರಣದಂಡನೆ ಶಿಕ್ಷೆ ಜಾರಿಯಲ್ಲಿದೆ. ಹೀಗಾಗಿ, ಆತ ಪರಾರಿಯಾಗಿ ಕೆನಡಾಕ್ಕೆ ಹೋಗಬಹುದು.
ಇದು ರಾಜತಾಂತ್ರಿಕ ಬಾಂಧವ್ಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀರೀತು ಎಂದು ವಿಚಾರಣೆ ವೇಳೆ ಅಮೆರಿಕ ಸರಕಾರ ಕೋರ್ಟ್‌ಗೆ ಮನವರಿಕೆ ಮಾಡಲು ಪ್ರಯತ್ನಿಸಿತು.
ಪಾಕ್ ಮೂಲದ ಕೆನಡಾ ಉದ್ಯಮಿ ರಾಣಾನನ್ನು ಗಡಿಪಾರು ಮಾಡಬೇಕು ಎಂದು ಭಾರತ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಜೂ.10ರಂದು ಮತ್ತೆ ಬಂಧಿಸಲಾಗಿತ್ತು.
ಈ ಬಗ್ಗೆ ಕ್ಯಾಲಿಫೋರ್ನಿಯಾ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಅಮೆರಿಕ ಸರಕಾರದ ಪರ ವಾದಿಸಿದ ಸಹಾಯಕ ಅಟಾರ್ನಿ ಜಾನ್.ಜೆ.ಲುಲೆಜಿಯಾನ್, 1997ರ ದ್ವಿ ಪಕ್ಷೀಯ ಹಸ್ತಾಂತರ ಒಪ್ಪಂದದನ್ವಯ ಆತನನ್ನು ಭಾರತಕ್ಕೆ ಹಸ್ತಾಂತರಿಸಲು ಮತ್ತೆ ಬಂಧಿಸಲಾಗಿದೆ.
ಅಲ್ಲಿ ಗಲ್ಲು ಶಿಕ್ಷೆ ಜಾರಿಯಲ್ಲಿರುವುದರಿಂದ ಆತನಿಗೆ ಜಾಮೀನು ನೀಡಿದರೆ ಆತ ಕೆನಡಾಕ್ಕೆ ಪರಾರಿಯಾಗಬಹುದು. ಇದರಿಂದ ಭಾರತಕ್ಕೆ ಆತನನ್ನು ಹಸ್ತಾಂತರಿಸಲು ಸಾಧ್ಯವಾಗದೆ, ಉಭಯ ದೇಶಗಳ ನಡುವಿನ ಸಂಬಂಧ ಹದಗೆಡ ಬಹುದು ಎಂದರು.
ಬಳಿಕ ನ್ಯಾಯಾಲಯ, ಆತನ ಜಾಮೀನು ಅರ್ಜಿಯ ವಿಚಾರಣೆಯನ್ನು ಜೂ.30ಕ್ಕೆ ನಿಗದಿಪಡಿಸಿ, ಜೂ.26ರೊಳಗೆ ಪ್ರತಿಕ್ರಿಯೆ ನೀಡುವಂತೆ ಅಮೆರಿಕ ಸರಕಾರಕ್ಕೆ ಸೂಚನೆ ನೀಡಿತು.