ಹರಿಹರ: ವಿಧಾನ ಪರಿಷತ್ ಸದಸ್ಯರಾದ 4 ವರ್ಷಗಳ ಅವಧಿಯಲ್ಲಿ ಕ್ಷೇತ್ರಾಭಿವೃದ್ಧಿಯಡಿ ಹರಿಹರ ತಾಲೂಕಿನ ಅಭಿವೃದ್ಧಿಗೆ 40 ಕೋಟಿ ರೂ. ಮಂಜೂರು ಮಾಡಿರುವುದಾಗಿ ವಿಧಾನ ಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮೂಲತಃ ಇದೇ ಕ್ಷೇತ್ರದವನಾಗಿರುವುದರಿಂದ ಸಹಜವಾಗಿಯೆ ಗರಿಷ್ಠ ಅನುದಾನ ನೀಡಿದ್ದೇನೆ. ಈಗಾಗಲೇ 33 ಕೋಟಿ ರೂ. ಬಿಡುಗಡೆಯಾಗಿದ್ದು, ಕಾಮಗಾರಿಗಳ ಪ್ರಗತಿಯನುಸಾರ ಬಾಕಿ 7 ಕೋಟಿ ರೂ. ಬಿಡುಗಡೆಯಾಗಲಿದೆ ಎಂದರು.
2017-18ನೇ ಸಾಲಿನಲ್ಲಿ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ವಿವಿಧ ಗ್ರಾಮಗಳಿಗೆ 2 ಕೋಟಿ ರೂ., ಕೊಂಡಜ್ಜಿ ಗ್ರಾಮದ ಸಮುದಾಯ ಭವನಕ್ಕೆ 1 ಕೋಟಿ, ಕೊಂಡಜ್ಜಿ-ಕಕ್ಕರಗೊಳ್ಳ ರಸ್ತೆ ಅಭಿವೃದ್ಧಿಗೆ 5 ಕೋಟಿ, ಕೊಂಡಜ್ಜಿಯಲ್ಲಿ ವೃತ್ತಿ ರಂಗಭೂಮಿ ಕೇಂದ್ರ ಸ್ಥಾಪನೆಗೆ 1 ಕೋಟಿ, ಕೊಂಡಜ್ಜಿ ಪ್ರವಾಸೋದ್ಯಮಕ್ಕೆ 1 ಕೋಟಿ, ಕಕ್ಕರಗೊಳ್ಳ-ಚಿಕ್ಕಬಿದರಿ ರಸ್ತೆ ಅಭಿವೃದ್ಧಿಗೆ 10 ಕೋಟಿ, ಎಚ್.ಎಂ. ರಸ್ತೆಯಿಂದ ಅರಸೀಕೆರೆ ಸೇರುವ ರಸ್ತೆಗೆ 5 ಕೋಟಿ ರೂ. ಸೇರಿದಂತೆ ಹತ್ತಾರು ಯೋಜನೆಗಳಿಗೆ ಅನುದಾನ ನೀಡಿದ್ದೇನೆ. ತಾಲೂಕಿನ 30 ಶಾಲೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನೀರಿನ ಸೌಲಭ್ಯ ಕಲ್ಪಿಸಲು ಸಹಕಾರ ನೀಡಿದ್ದೇನೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಂಬ ಭೇದವಿಲ್ಲದೆ ಎಲ್ಲಾ ಪಕ್ಷಗಳ ಮುಖಂಡರ ಕೋರಿಕೆಯನ್ನು ಸಾಧ್ಯವಾದಷ್ಟು ಮನ್ನಿಸಿದ್ದೇನೆ. ಎಲ್ಲಾ ಧರ್ಮ, ಜಾತಿ, ಜನಾಂಗದವರ ವಿವಿಧ ಸಾರ್ವಜನಿಕ ಕಾಮಗಾರಿಗಳಿಗೆ ಅನುದಾನ ನೀಡಿದ್ದೇನೆ ಎಂದು ಮಾಹಿತಿ ನೀಡಿದರು.
ರಂಗಭೂಮಿ ಹಿನ್ನೆಲೆಯಿಂದ ಬಂದ ನಾನು, ಕೊಂಡಜ್ಜಿಯ ಕುಷ್ಠ ರೋಗ ನಿವಾರಣಾ ಆಸ್ಪತ್ರೆ ಆವರಣದಲ್ಲಿ 10 ಎಕರೆ ಜಾಗವನ್ನು ವೃತ್ತಿ ರಂಗಭೂಮಿ ಕೇಂದ್ರ ಸ್ಥಾಪನೆಗೆ ಮಂಜೂರು ಮಾಡಿಸಿದ್ದೇನೆ. ಈಗಾಗಲೇ ಅಲ್ಲಿ ಪೊಲೀಸ್ ಪಬ್ಲಿಕ್ ಶಾಲೆ, ಮೊರಾರ್ಜಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳನ್ನು ಆರಂಭಿಸಲಾಗಿದ್ದು, ಕೊಂಡಜ್ಜಿ ಶೈಕ್ಷಣಿಕ ಹಬ್ ಆಗಿ ಬೆಳೆಯುತ್ತಿದೆ. ಕೊಂಡಜ್ಜಿ ಬಸಪ್ಪ ಅವರು ಸ್ಕೌಟ್ಸ್ ಮತ್ತು ಗೈಡ್ಸ್ ಕೇಂದ್ರವಾಗಿ ರೂಪಿಸಿ ಕೊಂಡಜ್ಜಿಯನ್ನು ಪ್ರವಾಸಿ ತಾಣವಾಗಿಸಲು ವೇದಿಕೆ ಸೃಷ್ಟಿಸಿದ್ದರು. ಅದರ ಮುಂದಿನ ಭಾಗವಾಗಿ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇವೆ ಎಂದರು.
ನಾನಾಗಲೀ, ನನ್ನ ಅಣ್ಣನ ಪುತ್ರ ನಿಖೀಲ್ ಕೊಂಡಜ್ಜಿಯಾಗಲೀ ಹರಿಹರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಅಕಾಂಕ್ಷಿಗಳಲ್ಲ ಎಂದು ಸ್ಪಷ್ಟಪಡಿಸಿದ ಅವರು, ಜಿಲ್ಲೆಯಲ್ಲಿ ಈಗಾಗಲೇ ಎರಡು ಮೆಡಿಕಲ್ ಕಾಲೇಜಿಗಳಿವೆ. ಅಗತ್ಯ ಇರುವ ಜಿಲ್ಲೆಗಳಲ್ಲಿ ಕಾಲೇಜು ಆರಂಭಕ್ಕೆ ಯಾವುದೇ ಸರ್ಕಾರವಾದರೂ ಗಮನಹರಿಸುತ್ತದೆ ಎಂದು ಪ್ರತಿಕ್ರಿಯಿಸಿದರು. ಸುದ್ದಿಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಿಖೀಲ್ ಕೊಂಡಜ್ಜಿ ಇತರರು ಇದ್ದರು.
ಎಲ್ಲಿಂದಲೋ ಬಂದವರ ನಂಟು
80ರ ದಶಕದಲ್ಲಿ ನಾನು ಹಾಗೂ ಪಿ. ಲಂಕೇಶ್ ಆವರು “ಎಲ್ಲಿಂದಲೋ ಬಂದವರು’ ಸಿನಿಮಾ ಶೂಟಿಂಗ್‌ಗೆ ಮೈಸೂರು ಭಾಗಕ್ಕೆ ಹೋಗಿದ್ದಾಗ ಅಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಿಚಯವಾಗಿತ್ತು. ಅವರಿಗೆ ಆ ಸಿನಿಮಾದ ಒಂದು ಚಿಕ್ಕ ಪಾತ್ರದಲ್ಲಿ ಅಭಿನಯಿಸಲು ಅವಕಾಶ ನೀಡಲಾಗಿತ್ತು. ಅಂದಿನಿಂದಲೂ ನಮ್ಮಿಬ್ಬರ ನಂಟು ಮುಂದುವರಿದಿದೆ ಎಂದು ಮೋಹನ್ ಕೊಂಡಜ್ಜಿ ಸ್ಮರಿಸಿದರು.