ಸಿನಿಮಾ ಅನ್ನೋದೇ ಹಾಗೆ! ಇಲ್ಲಿ ನಿರ್ಮಾಣ ಸುಲಭದ ಮಾತಲ್ಲ. ನಿರ್ಮಾಪಕರ ಲೈಫೂ ಸುಲಭವಲ್ಲ. ಎಷ್ಟೋ ನಿರ್ಮಾಪಕರು ಸಿನಿಮಾಗಾಗಿ ಮನೆ, ಸೈಟು ಮಾರಿಕೊಂಡಿದ್ದಾರೆ. ಇವತ್ತಿಗೂ ಸಾಲದ ಸುಳಿಯಲ್ಲಿ ಬದುಕು ತಳ್ಳುತ್ತಿದ್ದಾರೆ. ಇದೆಲ್ಲಾ ಸಿನಿಮಾರಂಗದಲ್ಲಿ ಹೊಸದೇನಲ್ಲ. ಆದರೆ, ಅನುಭವಿ ಹಿರಿಯ ನಿರ್ಮಾಪಕ ಕುಪ್ಪುಸ್ವಾಮಿ ಅಂಥವರೇ, ತಮ್ಮ ಮನೆಯೊಂದನ್ನು ಅಡವಿಟ್ಟು ಇದೀಗ ಸಿನಿಮಾ ರಿಲೀಸ್‌ಗೆ ಮುಂದಾಗಿದ್ದಾರೆ.
ಆಶ್ಚರ್ಯವಾಗಬಹುದು. ಆದರೂ ಇದು ನಿಜ. ಕುಪ್ಪುಸ್ವಾಮಿ, ರಾಗಿಣಿ ಅಭಿನಯದ “ರಣಚಂಡಿ’ ಚಿತ್ರ ನಿರ್ಮಿಸಿದ್ದರು. ಈ ಸಿನಿಮಾವನ್ನು ಕೇವಲ ಒಂದೂವರೆ ಕೋಟಿ ರುಪಾಯಿಯಲ್ಲಿ ಮಾಡಿಕೊಡುತ್ತೇನೆ ಅಂತ ನಿರ್ದೇಶಕರು ಹೇಳಿ, ಅವರನ್ನು ಒಪ್ಪಿಸಿ, ಚಿತ್ರ ಮಾಡಿದ್ದರು. ಆದರೆ, ಸಿನಿಮಾ ಮುಗಿಯೋ ಹೊತ್ತಿಗೆ ಬಜೆಟ್ ಡಬ್ಬಲ್ ಆಗಿ ಹೋಗಿತ್ತು. ಸಿನಿಮಾ ರೆಡಿಯಾಗಿ ವರ್ಷವೇ ಆಗಿತ್ತು.
ಆದರೆ, ರಿಲೀಸ್ ಮಾಡೋಕೆ ಕುಪ್ಪುಸ್ವಾಮಿ ಬಳಿ ಹಣ ಇರಲಿಲ್ಲ. ತಮ್ಮ ಬ್ಯಾನರ್‌ನಲ್ಲಿ ಮಾಡಿದ ಸಿನಿಮಾ ಯಾವ ಕಾರಣಕ್ಕೂ ನಿಲ್ಲಬಾರದು ಎಂಬ ಕಾರಣಕ್ಕೆ, ಕುಪ್ಪುಸ್ವಾಮಿ ಈಗ ವಾಸವಿರುವ ಮನೆಯನ್ನೇ ಅಡವಿಟ್ಟು, ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ. ಮಾರ್ಚ್ 10ರಂದು “ರಣಚಂಡಿ’ ತೆರೆಗೆ ಬರಲಿದೆ. ಇಷ್ಟಕ್ಕೂ ಈ ವಿಷಯ ಪ್ರಸ್ತಾಪ ಆಗಿದ್ದು, “ರಣಚಂಡಿ’ ಪತ್ರಿಕಾಗೋಷ್ಠಿಯಲ್ಲಿ.
ಈ ವೇಳೆ ಕುಪ್ಪುಸ್ವಾಮಿ ಅವರ ಕಷ್ಟವನ್ನು ಅರಿತ ನಿರ್ಮಾಪಕ ಸೂರಪ್ಪ ಬಾಬು ಅವರಿಗೆ ಸಲಹೆಯೊಂದನ್ನು ಕೊಟ್ಟಿದ್ದಾರೆ. “ಕುಪ್ಪುಸ್ವಾಮಿ ಅವರಿಗೆ ಈಗ ವಯಸ್ಸು 70. ಸಿನಿಮಾವನ್ನು ಪ್ರೀತಿಸುವ ಅವರು, “ರಣಚಂಡಿಗೆ’ ಕೋಟಿ ಕೋಟಿ ಹಾಕಿದ್ದಾರೆ. ಅವರ ಬಳಿ ಈಗ ಸಿನಿಮಾ ರಿಲೀಸ್ ಮಾಡಲು ಹಣವಿಲ್ಲದೆ ಮನೆ ಅಡವಿಟ್ಟು ರಿಲೀಸ್ ಮಾಡುತ್ತಿದ್ದಾರೆ. ಅವರಿಗೆ ಒಂದು ಸಲಹೆ ಕೊಡ್ತೀನಿ. ಸಿನಿಮಾ ರಿಲೀಸ್ ಬಳಿಕ ಮತ್ತೆ ಯಾವ ಸಿನಿಮಾ ಮಾಡಬೇಡಿ.
ಚಿತ್ರರಂಗ ಹಿಂದಿನಂತೆ ಇಲ್ಲ. ಕೆಲವರು ಟಿವಿ ರೈಟ್ಸ್ ಬರುತ್ತೆ ಅಂತ ನಂಬಿಸಿ, ಚಿತ್ರ ಮಾಡಿಸಿದ್ದಾರೆ. ಈವರೆಗೂ ಟಿವಿ ರೈಟ್ಸ್ ಹೋಗಿಲ್ಲ. ಈ ಚಿತ್ರ ಬಿಡುಗಡೆ ಬಳಿಕ ಹೇಗಾದರೂ ಮಾಡಿ ಮನೆಯನ್ನು ಬಿಡಿಸಿಕೊಳ್ಳಿ. ನಿಮ್ಮೊಂದಿಗೆ ನಿರ್ಮಾಪಕರ ಮತ್ತು ವಾಣಿಜ್ಯ ಮಂಡಳಿಯ ಸಹಕಾರ ಇರಲಿದೆ. ಇನ್ಯಾವತ್ತೂ ಇಂತಹ ಕೆಲಸ ಮಾಡಬೇಡಿ’ ಎಂದು ಸಲಹೆ ಕೊಟ್ಟಿದ್ದಾರೆ ಸೂರಪ್ಪ ಬಾಬು.