ಹುಮನಾಬಾದ: ಕೈಗಾರಿಕಾ ಪ್ರದೇಶದಲ್ಲಿನ ಕೆಲ ಕಾರ್ಖಾನೆಗಳು ರಾತ್ರಿ ಸಮಯದಲ್ಲಿ ವಿಷಯುಕ್ತ ತ್ಯಾಜ್ಯ ನೇರವಾಗಿ ಹೊರ ಬಿಡುತ್ತಿರುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ತಹಶೀಲ್ದಾರ್ ಡಾ| ಪ್ರದೀಪಕುಮಾರ ಹಿರೇಮಠ ಗುರುವಾರ ಮಧ್ಯರಾತ್ರಿ ಕಾರ್ಖಾನೆ ಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕೈಗಾರಿಕಾ ಪ್ರದೇಶದಲ್ಲಿನ ಅನೇಕ ಕಾರ್ಖಾನೆಗಳು ವಿಷಯುಕ್ತ ತ್ಯಾಜ್ಯ ಶುದ್ಧೀಕರಣ ಘಟಕದಲ್ಲಿ ಸಂಸ್ಕರಿಸದೇ ನೇರವಾಗಿ ಹೊರಬಿಡುತ್ತಿರುವ ಕಾರಣ ಸುತ್ತಲಿನ ಗಡವಂತಿ, ಮಾಣಿಕನಗರ ಜನರು ಸಮಸ್ಯೆ ಎದುರಿಸುತ್ತಿದ್ದಾರೆ.
ಕಳೆದ ತಿಂಗಳು ಮಾಣಿಕನಗರದ ಹಳ್ಳದಲ್ಲಿ ಸಂಪೂರ್ಣ ಕೆಮಿಕಲ್ ತ್ಯಾಜ್ಯದ ನೀರು ತುಂಬಿ ನಾರುತ್ತಿತ್ತು. ಗ್ರಾಮಸ್ಥರು ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು, ಶಾಸಕರು, ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದರು. ಅಲ್ಲದೇ, ಹಳ್ಳದಲ್ಲಿನ ನೀರು ತಡೆ ಸೇತುವೆ ಒಡೆದು ನೀರು ಹರಿಬಿಟ್ಟಿದ್ದರು.
ಕಳೆದ ಕೆಲ ದಿನಗಳಿಂದ ಕೆಮಿಕಲ್ ನೀರು ಹಳ್ಳದಲ್ಲಿ ಕಂಡು ಬಂದಿಲ್ಲ. ಆದರೆ, ಗುರುವಾರ ರಾತ್ರಿ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ತಹಶೀಲ್ದಾರ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ 2 ಕಾರ್ಖಾನೆಗಳು ತ್ಯಾಜ್ಯ ಹೊರ ಬಿಡುತ್ತಿರುವುದು ಕಂಡು ಬಂದಿದೆ. ಈ ಕುರಿತು ಸಂಬಂಧಿಸಿದವರಿಗೆ ಎಚ್ಚರಿಕೆ ನೀಡಲಾಗಿದೆ. ಜಿಲ್ಲಾಧಿಕಾರಿಗೆ ಈ ಬಗ್ಗೆ ವರದಿ ಸಲ್ಲಿಸುವುದಾಗಿ ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ.
ಕಳೆದ ಕೆಲ ದಿನಗಳಿಂದ ಕೈಗಾರಿಕಾ ಘಟಕದಲ್ಲಿನ ವಿವಿಧ ಕಾರ್ಖಾನೆಗೆ ತಹಶೀಲ್ದಾರ್ ಡಾ| ಪ್ರದೀಪಕುಮಾರ ಹಿರೇಮಠ ಭೇಟಿ ನೀಡಿದ್ದು, ಸಾರ್ವಜನಿಕ ವಲಯದಲ್ಲಿ ಅನೇಕ ಊಹಾಪೋಹಗಳು ಕೇಳಿ ಬರುತ್ತಿವೆ. ಪೊಲೀಸ್ ಅಧಿಕಾರಿಗಳ ಸಹಕಾರ ಪಡೆಯದೇ ಮಧ್ಯರಾತ್ರಿಯಲ್ಲಿ ಒಬ್ಬಂಟಿ ಅಧಿಕಾರಿ ಭೇಟಿ ನೀಡಿದ್ದಾರೆ. ಅಲ್ಲದೇ, ವಿವಿಧ ಕಾರ್ಖಾನೆಗೆ ಭೇಟಿ ನೀಡಿದ ತಹಶೀಲ್ದಾರ್ ಯಾವ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಯಾವ ಕಾರ್ಖಾನೆಗಳಿಂದ ಸಮಗ್ರ ವರದಿ ಪಡೆದುಕೊಂಡಿದ್ದಾರೆ ಎಂದು ಗಡವಂತಿ ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.
ಕಾನೂನು ಕ್ರಮಕ್ಕೆ ಶಿಫಾರಸು: ಕಳೆದ ಕೆಲ ದಿನಗಳಿಂದ ಭೇಟಿ ನೀಡಿದ ಕಾರ್ಖಾನೆಗಳ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಗುರುವಾರ ರಾತ್ರಿ ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಒಬ್ಬನೇ ತೆರಳಿ ಪರಿಶೀಲಿಸಿದ್ದೇನೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ. ಗುರುವಾರ ರಾತ್ರಿ ಭೇಟಿ ನೀಡಿದ ರೇಡಿಸನ್ ಲ್ಯಾಬ್ ಹಾಗೂ ಕರ್ನಾಟಕ ಪೇಪರ್ ಕಾರ್ಖಾನೆಗಳ ಕುರಿತು ಡಿಸಿಗೆ ವರದಿ ಸಲ್ಲಿಸಲಾಗುವುದು. ಯಾವುದೇ ಖಾಸಗಿ ವ್ಯಕ್ತಿಯನ್ನು ಪಿಎ ಎಂದು ನೇಮಕ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.