Advertisement

ವಿದ್ಯಾರ್ಥಿಗಳಿಗೆ ನೆಮ್ಮದಿ ಕೊಡಿ

12:30 AM Mar 20, 2019 | |

ಸರ್ಕಾರಿ ವ್ಯವಸ್ಥೆಯೊಳಗೆ ಶಿಕ್ಷಕರ ಸಮೂಹವೇ ದೊಡ್ಡದು. ಸರ್ಕಾರ ಮತ್ತು ಶಿಕ್ಷಕ, ಉಪನ್ಯಾಸಕ ನಡುವಿನ ಸಮಸ್ಯೆ ಪರಿಹಾರದ ಗುದ್ದಾಟಕ್ಕೂ ದೊಡ್ಡ ಇತಿಹಾಸವಿದೆ. ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ 2 ಲಕ್ಷಕ್ಕೂ ಅಧಿಕ ಶಿಕ್ಷಕರು (ಮುಖ್ಯಶಿಕ್ಷಕರು, ಸಹ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ಚಿತ್ರಕಲಾ ಇತ್ಯಾದಿ) ಸೇವೆ ಸಲ್ಲಿಸುತ್ತಿದ್ದಾರೆ. ಪದವಿಪೂರ್ವ ಶಿಕ್ಷಣ ಇಲಾಖೆ ವ್ಯಾಪ್ತಿಯ ಸರ್ಕಾರಿ ಕಾಲೇಜುಗಳಲ್ಲಿ 12 ಸಾವಿರಕ್ಕೂ ಅಧಿಕ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ.

Advertisement

ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಸಾರ್ವಕಾಲಿಕ ಸಮಸ್ಯೆ ಎಂಬಂತಾಗಿದೆ. ನಿಯಮಗಳಿಗೆ ತಿದ್ದುಪಡಿ ತಂದರೂ ಅನುಷ್ಠಾನಕ್ಕೆ ನೂರಾರು ವಿಘ್ನಗಳು ಎದುರಾಗುತ್ತಿವೆ. ಮೂರು ವರ್ಷಗಳಿಂದ ಇಡೀ ವರ್ಗಾವಣೆ ಪ್ರಕ್ರಿಯೆಯೇ ನನೆಗುದಿಗೆ ಬಿದ್ದಿದೆ. ವರ್ಗಾವಣೆ ಪ್ರಕ್ರಿಯೆ ನಡೆಸಬೇಕೆಂದು ಶಾಲಾ ಶಿಕ್ಷಕರು ಮತ್ತು ಸಂಘ ಎಲ್ಲ ರೀತಿಯ ಆಗ್ರಹ, ಒತ್ತಡ ಸರ್ಕಾರ ಮೇಲೆ ತಂದಿದ್ದರು. ಆದರೂ ವರ್ಗಾವಣೆ ಪ್ರಕ್ರಿಯೆ ಹಳ್ಳಹತ್ತಿದೆ.

ಇನ್ನು, ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಪ್ರತಿ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಗೂ ಮೊದಲೇ ತಮ್ಮ ಕೆಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು, ಬಗೆಹರಿಸದೇ ಇದ್ದರೆ ಮೌಲ್ಯಮಾಪನ ಬಹಿಷ್ಕರಿಸುತ್ತೇವೆ ಎಂಬ ನೇರ ಎಚ್ಚರಿಕೆ ನೀಡುತ್ತಾ ಬಂದಿದ್ದಾರೆ. ಸರ್ಕಾರ ಸಮಸ್ಯೆ ಬಗೆಹರಿಸುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ವಿದ್ಯಾರ್ಥಿಗಳು ಮತ್ತು ಪಾಲಕ, ಪೋಷಕರಲ್ಲಿ ಭಯ, ಆತಂಕ ಹಾಗೂ ಗೊಂದಲ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಉತ್ತರ ಪತ್ರಿಕೆ ಮೌಲ್ಯಮಾಪನವೇ ಮಾಡದಿದ್ದರೆ ಮುಂದೇನು ಎಂಬುದು ಪ್ರತಿ ವಿದ್ಯಾರ್ಥಿಯ ಪಾಲಕರಲ್ಲೂ ಕಾಡುತ್ತದೆ. ವಿದ್ಯಾರ್ಥಿಗೂ ಈ ಆತಂಕ ಇರುತ್ತದೆ. ಅದು ಅವರ ಪರೀಕ್ಷೆಯ ಮೇಲೂ ಪರಿಣಾಮ ಬೀರುತ್ತದೆ. ಪ್ರಸಕ್ತ ಸಾಲಿನಲ್ಲೂ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಮೌಲ್ಯಮಾಪನ ಬಹಿಷ್ಕಾರದ ಎಚ್ಚರಿಕೆಯನ್ನು ಈಗಾಗಲೇ ಸರ್ಕಾರದ ಮುಂದೆ ಇಟ್ಟಿದ್ದಾರೆ. ಉಪನ್ಯಾಸಕರ ಪ್ರಮುಖ 20 ಸಮಸ್ಯೆ ಬಗೆಹರಿಸುವ ಯಾವ ಭರವಸೆಯನ್ನು ಈವರೆಗೂ ಸರ್ಕಾರ ನೀಡಿಲ್ಲ. 

2018-19ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ತರಗತಿಯನ್ನು ಅವಧಿಗೂ ಒಂದು ತಿಂಗಳು ಮೊದಲೇ ಆರಂಭಿಸಲಾಗಿತ್ತು. ಅದರಿಂದಾದ ಪ್ರಯೋಜನ ಏನೆಂಬುದು ಈ ಬಾರಿಯ ದ್ವಿತೀಯ ಪಿಯುಸಿ ಫ‌ಲಿತಾಂಶದ ನಂತರವೇ ತಿಳಿಯಬೇಕು. 2019-20ನೇ ಸಾಲಿನ ತರಗತಿಯನ್ನು ಮೇ 2 ಅಥವಾ 6ರಿಂದಲೇ ಆರಂಭಿಸಲು ಇಲಾಖೆ ಹಾಗೂ ಸರ್ಕಾರ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿತ್ತು. ಈ ನಿರ್ಧಾರಕ್ಕೆ ಉಪನ್ಯಾಸಕರ ಸಂಘ ಸಂಪೂರ್ಣ ವಿರೋಧ ವ್ಯಕ್ತಪಡಿಸಿತ್ತು. ಸರ್ಕಾರ ತನ್ನ ನಿಲುವಿನಲ್ಲಿ ಬದಲಾವಣೆ ಮಾಡದಿದ್ದರೆ ಮೌಲ್ಯಮಾಪನ ಬಹಿಷ್ಕರಿಸಿ, ಪ್ರತಿಭಟನೆ ನಡೆಸುತ್ತೇವೆ ಎಂದು ಸಂಘ ಘೋಷಿಸಿದೆ. ಸರ್ಕಾರವೀಗ ಮೇ 20ರಿಂದ ತರಗತಿ ಆರಂಭಿಸಲು ನಿರ್ಧರಿಸಿದೆ. 

ಸರ್ಕಾರ ಮತ್ತು ಉಪನ್ಯಾಸಕರ ಈ ಗುದ್ದಾಟದಲ್ಲಿ ವಿದ್ಯಾರ್ಥಿಗಳು ಮತ್ತು ಅವರ ಪಾಲಕ, ಪೋಷಕರು ಸಂಪೂರ್ಣವಾಗಿ ಕುಗ್ಗಿ ಹೋಗಿದ್ದಾರೆ. ಮೌಲ್ಯಮಾಪನಕ್ಕೆ ಉಪನ್ಯಾಸಕರು ಬಾರದೆ, ಪರ್ಯಾಯ ವ್ಯವಸ್ಥೆಯ ಮೂಲಕ ಮೌಲ್ಯಮಾಪನ ಮಾಡುವುದು ವಿಳಂಬವಾದರೆ  ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಏನು? ವೃತ್ತಿಪರ ಹಾಗೂ ಪದವಿ ಕೋರ್ಸ್‌ಗಳ ಆಯ್ಕೆಗೂ ಇದು ಅಡ್ಡಿಯಾಗಿದೆ. ಸರ್ಕಾರ ಅಥವಾ ಉಪನ್ಯಾಸಕರು ಇದಕ್ಕೆ ಹೊಣೆಯಾಗುತ್ತಾರೇ? ಉಪನ್ಯಾಸಕರ ಎಲ್ಲ ಬೇಡಿಕೆ ಈಡೇರಿಸುವುದು ಕಷ್ಟವಾದರೂ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೆಲವೊಂದು ಹೊಂದಾಣಿಕೆಯ ನಿರ್ಧಾರವಾದರೂ ಸರ್ಕಾರ ತೆಗೆದುಕೊಳ್ಳಬಹುದಲ್ಲವೇ? 

Advertisement

ಹಾಗೆಯೇ ಉಪನ್ಯಾಸಕರು ಕೂಡ ವಿದ್ಯಾರ್ಥಿಗಳ ತಮ್ಮ ನಿಲುವಿನಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳಬಹುದಲ್ಲವೆ?  ಪ್ರತಿ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗುತ್ತಿದ್ದಂತೆ ಈ ಗೋಳು ತಪ್ಪಿದ್ದಲ್ಲ. ವಿದ್ಯಾರ್ಥಿ, ಪಾಲಕ, ಪೋಷಕರ ನೆಮ್ಮದಿ ಕೆಡವಲು ಸರ್ಕಾರ ಹಾಗೂ ಉಪನ್ಯಾಸಕರೇ ಟೊಂಕಕಟ್ಟಿ ನಿಂತಂತಿದೆ. ಸರ್ಕಾರ ಅಥವಾ ಉಪನ್ಯಾಸಕರು ಪಟ್ಟು ಸಡಿಲಿಸದೇ ಇದ್ದರೆ ಸಮಸ್ಯೆ ಬಗೆಹರಿಯುವುದು ಹೇಗೆ ಮತ್ತು ವಿದ್ಯಾರ್ಥಿಗಳಿಗೆ ನೆಮ್ಮದಿ ನೀಡುವುದು ಯಾರು? ಸಾಮಾಜಿಕ ವ್ಯವಸ್ಥೆಯ ಭಾಗವಾಗಿ ಇಬ್ಬರು ಆತ್ಮಾವಲೋಕನ ಮಾಡಬೇಕಲ್ಲವೇ?

Advertisement

Udayavani is now on Telegram. Click here to join our channel and stay updated with the latest news.

Next