Advertisement

ಗಣ್ಯರ ದೋಸೆ ರುಚಿ ಮೆಲುಕು

11:15 AM Oct 27, 2018 | |

ಬೆಂಗಳೂರು: ನಗರದ ಗಾಂಧಿಬಜಾರ್‌ನಲ್ಲಿರುವ ವಿದ್ಯಾರ್ಥಿ ಭವನದ 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಅಮೃತ ಮಹೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. 

Advertisement

ಹೋಟೆಲ್‌ನಲ್ಲಿ ನಿರಂತರವಾಗಿ ದೋಸೆ ಸವಿದ ಗ್ರಾಹಕರು ಸಂಭ್ರಮಾಚರಣೆಯಲ್ಲಿ ಭಾಗವಹಿಸುವ ಮೂಲಕ ರುಚಿಯ ಅನುಭವವನ್ನು ಮೆಲುಕು ಹಾಕಲು ಅವಕಾಶ ನೀಡಲಾಗಿತ್ತು. ಕಾರ್ಯಕ್ರಮದಲ್ಲಿ ಆಗಮಿಸಿದ್ದ ನೂರಾರು ಗ್ರಾಹಕರು ಹೋಟೆಲ್‌ ಬಗೆಗಿನ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಜತೆಗೆ ನಿರಂತರವಾಗಿ ಒಂದೇ ರುಚಿ ಕಾಪಾಡಿಕೊಂಡು ಬರುತ್ತಿರುವ ಹೋಟೆಲ್‌ ಮಾಲೀಕ ರಾಮಕೃಷ್ಣ ಅಡಿಗರಿಗೆ ಕೃತಜ್ಞತೆ ಸಲ್ಲಿಸಿದರು.

ಹೋಟೆಲ್‌ ಮಾಲೀಕರು ಬಹಳಷ್ಟು ವರ್ಷಗಳಿಂದ ತಮ್ಮ ಜತೆ ಕೆಲಸ ಮಾಡುತ್ತಿರುವ ಸಹಾಯಕ ಸಿಬ್ಬಂದಿ ಮತ್ತು ಬಾಣಸಿಗರನ್ನು ಮಾಲೀಕರು ಅಭಿನಂದಿಸಿದರು. ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ಸಹ ಹೋಟೆಲ್‌ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. 

ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಂ.ಎನ್‌.ವೆಂಕಟಾಚಲಯ್ಯ ಅವರು, ಮತದ ಹೆಸರಿನಲ್ಲಿ ಜನರನ್ನು ವಿಭಜಿಸುತ್ತಿರುವ ಈ ಕಾಲದಲ್ಲಿ ಒಂದು ದೋಸೆಯ ರುಚಿ ಇಷ್ಟು ಜನರನ್ನು ಒಂದುಗೂಡಿಸಿರುವುದು ಮಹತ್ವದ ವಿಷಯವಾಗಿದ್ದು, ಅದನ್ನು ಹಾಗೆ ಮುಂದುವರಿಸಿಕೊಂಡು ಹೋಗುವಂತೆ ತಿಳಿಸಿದರು. 

ಭಾರತ ರತ್ನ ಪ್ರೊ.ಸಿ.ಎನ್‌.ಆರ್‌.ರಾವ್‌ ಅವರು, “1951ರಲ್ಲಿ ಬಿಎಸ್‌ಸಿ ಪಾಸ್‌ ಮಾಡಿದಾಗ ಅಪ್ಪನ ಜತೆಗೆ ಹಾಗೂ ನಂತರದಲ್ಲಿ ಮದುವೆ ಹಿಂದಿನ ದಿನ ಭಾವಿ ಪತ್ನಿಯೊಂದಿಗೆ ವಿದ್ಯಾರ್ಥಿ ಭವನದಲ್ಲಿ ನಾನು ದೋಸೆ ತಿಂದಿದ್ದೇನೆ’ ಎಂದು ಸ್ಮರಿಸಿದರು. 

Advertisement

ಇನ್ಫೋಸೀಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಎಲ್ಲವೂ ಬದಲಾಗುತ್ತಿದೆ. ಆದರೆ, ಇಲ್ಲಿನ ದೋಸೆಯ ರುಚಿ ಮತ್ತು ಗುಣಮಟ್ಟ ಮಾತ್ರ ಬದಲಾಗಿಲ್ಲ. ಹೋಟೆಲ್‌ನಲ್ಲಿ ಸಾಹಿತಿಗಳ ಜತೆಗೆ ಸಾಧಕಿಯರ ಭಾವಚಿತ್ರಗಳಿರುವುದು ಸಂತಸದ ವಿಚಾರ ಎಂದು ಅಭಿನಂದಿಸಿದರು. 

ಸಾಹಿತಿ ಪ್ರೊ.ಕೆ.ಎಸ್‌.ನಿಸಾರ್‌ ಅಹಮದ್‌, ಮಯ್ನಾಸ್‌ ಸಮೂಹ ಸಂಸ್ಥೆ ಸಂಸ್ಥಾಪಕ ಡಾ.ಪಿ.ಸದಾನಂದ ಮಯ್ಯ, ಕರ್ನಾಟಕ ವೃತ್ತದ ಅಂಚೆ ಮಹಾಪ್ರಬಂಧಕ ಡಾ.ಚಾರ್ಲ್ಸ್‌ ಲೋಬೊ ಸೇರಿದಂತೆ ಪ್ರಮುಖರು ಹಾಜರಿದ್ದರು. ಇದೇ ವೇಳೆ ಅಂಚೆ ಇಲಾಖೆ ರೂಪಿಸಿರುವ ದೋಸೆಯ “ವಿಶೇಷ ಅಂಚೆ ಲಕೋಟೆ’, “ನೆನಪಿನಂಗಳ’ ಎಂಬ ಕಾಫಿ ಟೇಬಲ್‌ ಪುಸ್ತಕ ಬಿಡುಗಡೆಗೊಳಿಸಲಾಯಿತು. 

ಮೊದಲು ನಾವೆಲ್ಲ ವಿದ್ಯಾರ್ಥಿ ಭವನದ ದೋಸೆ ಹೆಸರಿನಲ್ಲೇ ಬಾಜಿ ಕಟ್ಟುತ್ತಿದ್ದೆವು. ಏಕೆಂದರೆ ದೋಸೆ ಸವಿಯುವುದೇ ಒಂದು ಖುಷಿಯ ವಿಚಾರ. ವಿದ್ಯಾರ್ಥಿ ಭವನದ ದೋಸೆಗೆ ಭಾರಿ ಪರಂಪರೆಯಿದೆ.
-ಪ್ರೊ.ಕೆ.ಎಸ್‌.ಆರ್‌.ನಿಸಾರ್‌ ಅಹಮದ್‌, ಹಿರಿಯ ಕವಿ

Advertisement

Udayavani is now on Telegram. Click here to join our channel and stay updated with the latest news.

Next