Advertisement

ಅಭ್ಯರ್ಥಿಗಳಿಗೆ ಒಂದೆಡೆ ರಿಲ್ಯಾಕ್ಸ್‌, ಮತ್ತೂಂದೆಡೆ ಟೆನ್ಷನ್‌..

05:38 PM May 14, 2018 | Team Udayavani |

ಚಿತ್ರದುರ್ಗ: “ಒಂದೆಡೆ ವಿಧಾನಸಭಾ ಚುನಾವಣೆಯ ಮಹತ್ವದ ಘಟ್ಟವಾದ ಮತದಾನ ಮುಗಿಯಿತಲ್ಲ ಎಂದ ಸಮಾಧಾನ. ಮತ್ತೂಂದೆಡೆ ಮಂಗಳವಾರದ ಫಲಿತಾಂಶ ಏನಾಗುವುದೋ ಎಂಬ ಆತಂಕ…”

Advertisement

ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಮತದಾನದ ಮರುದಿನವಾದ ಭಾನುವಾರ ನಿರಾಳವಾಗಿರುವಂತೆ ಕಂಡರೂ ಒಳಗೊಳಗೆ ಮುಂದೇನಾಗುವುದೋ ಎಂಬ ಆತಂಕ ಅವರಲ್ಲಿ ಎದ್ದು ಕಾಣುತ್ತಿತ್ತು. ಶನಿವಾರ ಸಂಜೆ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಅಭ್ಯರ್ಥಿಗಳು ಕೊಂಚ ನಿಟ್ಟುಸಿರು ಬಿಟ್ಟರು.

ಕಳೆದ ಒಂದು ತಿಂಗಳಿನಿಂದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರರು ಬಿರುಸಿನ ಪ್ರಚಾರ ನಡೆಸಿದ್ದರು. ತಮ್ಮ ಪಕ್ಷಗಳ ರಾಷ್ಟ್ರ, ರಾಜ್ಯ ನಾಯಕರನ್ನು ಕರೆಸಿ ಚುನಾವಣಾ ಪ್ರಚಾರ ನಡೆಸಿ ಮತಬೇಟೆಯಾಡಿ ಸುಸ್ತಾಗಿದ್ದರು. ಮತದಾನ ಮುಗಿದ ತಕ್ಷಣ ಮೊಬೈಲ್‌ ಸ್ವಿಚ್‌ಆಫ್‌ ಮಾಡಿಕೊಂಡು ನಿದ್ದೆಗೆ ಜಾರಿದ್ದರು. 

ಚುನಾವಣಾ ಫಲಿತಾಂಶ ಹೊರಬೀಳಲು ಇನ್ನೊಂದೇ ದಿನ ಬಾಕಿ ಇದೆ. ಕೆಲವು ಅಭ್ಯರ್ಥಿಗಳು ಜಿಲ್ಲೆಯಲ್ಲೆ ಬೀಡು ಬಿಟ್ಟಿದ್ದರೆ, ಇನ್ನುಳಿದವರು ತಮ್ಮನ್ನು ಹುಡುಕಿಕೊಂಡು ಬಂದ ಪಕ್ಷದ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರೊಂದಿಗೆ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದರು. ಬಹುತೇಕ ಅಭ್ಯರ್ಥಿಗಳು ತಮ್ಮ ಮೊಬೈಲ್‌ಗ‌ಳನ್ನು ನಾಟ್‌ ರೀಚಬಲ್‌ ಮಾಡಿಕೊಂಡು ವಿಶ್ರಾಂತಿ ಪಡೆಯುತ್ತಿದ್ದಾರೆ. ಮತದಾನ ಆಗುತ್ತಿದ್ದಂತೆ ಕೆಲವು ಅಭ್ಯರ್ಥಿಗಳ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದೂ ಆಗಿದೆ. ದೇವಾಲಯಗಳಿಗೆ ತೆರಳಿದ ಅಭ್ಯರ್ಥಿಗಳು ದೇವರ ದರ್ಶನ ಪಡೆದು ತಮ್ಮ ಗೆಲುವಿಗಾಗಿ ಪ್ರಾರ್ಥಿಸಿಕೊಂಡಿದ್ದಾರೆ.

„ತೋಟದ ಮನೆಯಲ್ಲಿ ಆಂಜನೇಯ ವಿಶ್ರಾಂತಿ  ಚಿತ್ರದುರ್ಗದಲ್ಲೆ ಬೀಡು ಬಿಟ್ಟಿರುವ ಹೊಳಲ್ಕೆರೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಚಿವ ಎಚ್‌. ಆಂಜನೇಯ ನಗರದ ಹೊರವಲಯದಲ್ಲಿರುವ ತೋಟದ ಮನೆಗೆ ತೆರಳಿ ವಿಶ್ರಾಂತಿ
ಪಡೆದರು. ತಮ್ಮನ್ನು ಭೇಟಿ ಮಾಡಲು ಬರುತ್ತಿರುವ ಸಾರ್ವಜನಿಕರ ಕಷ್ಟ ಸುಖ ಆಲಿಸಿ ಕಳುಹಿಸುತ್ತಿದ್ದರು. ಬಿಜೆಪಿ ಅಭ್ಯರ್ಥಿ ಚಂದ್ರಪ್ಪ ಚಿತ್ರದುರ್ಗದ ಮನೆಯಲ್ಲಿ ವಿಶ್ರಾಂತಿ ಪಡೆದರು. ಜೆಡಿಎಸ್‌ ಅಭ್ಯರ್ಥಿ ಗದ್ದಿಗೆ ಶ್ರೀನಿವಾಸ್‌ ಕ್ಷೇತ್ರದಲ್ಲೇ ಬೀಡುಬಿಟ್ಟಿದ್ದು ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಭೇಟಿ ಮಾಡಿ ಚರ್ಚಿಸಿದರು. ಅಲ್ಲದೆ ಭರಮಸಾಗರದ ಜೆಡಿಎಸ್‌ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ಕರೆದು ಫಲಿತಾಂಶ ಏನಾಗಬಹುದು ಎಂಬ ಚಿಂತನೆ ನಡೆಸಿದರು. 

Advertisement

„ಬಳ್ಳಾರಿಗೆ ತೆರಳಿದ ಶ್ರೀರಾಮುಲು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಬೆಳಿಗ್ಗೆ ಬಳ್ಳಾರಿಯ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆದು ವಿಶೇಷ ಪೂಜೆ ನಡೆಸಿದರು. ಕಾಂಗ್ರೆಸ್‌ ಅಭ್ಯರ್ಥಿ ಡಾ| ಬಿ. ಯೋಗೇಶ್‌ಬಾಬು ಬಿ.ಜಿ. ಕೆರೆ ಗ್ರಾಮದಲ್ಲಿದ್ದರು. ಪಕ್ಷೇತರ ಅಭ್ಯರ್ಥಿ ಎಸ್‌. ತಿಪ್ಪೇಸ್ವಾಮಿ ಸ್ವಗ್ರಾಮ ನೇರಲಗುಂಟೆ ಹಾಗೂ ಜೆಡಿಎಸ್‌ ಅಭ್ಯರ್ಥಿ ಪಟೇಲ್‌ ತಿಪ್ಪೇಸ್ವಾಮಿ (ಎತ್ತಿನಹಟ್ಟಿ ಗೌಡ) ತಮ್ಮ ಮನೆಯಲ್ಲಿ ವಿಶ್ರಾಂತಿ ಪಡೆದರು.

„ರಘುಮೂರ್ತಿ ಫುಲ್‌ ರಿಲ್ಯಾಕ್ಸ್‌ ಚಳ್ಳಕೆರೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಟಿ. ರಘುಮೂರ್ತಿ ಚಿತ್ರದುರ್ಗದ ಮನೆ ಮತ್ತು ಸ್ನೇಹಿತರ ವಸತಿ ಗೃಹದಲ್ಲಿ ವಿಶ್ರಾಂತಿ ಪಡೆದರು. ಕೆಲ ಕಾಲ ಟಿವಿ ವೀಕ್ಷಣೆ ಮಾಡಿದರು. ಜೆಡಿಎಸ್‌ ಅಭ್ಯರ್ಥಿ ರವೀಶ್‌ಕುಮಾರ್‌ ಸ್ವಂತ ಊರು ಬೆಂಗಳೂರಿಗೆ ತೆರಳಿದ್ದರು. ಬಿಜೆಪಿ ಅಭ್ಯರ್ಥಿ ಕೆ.ಟಿ. ಕುಮಾರಸ್ವಾಮಿ ಚಳ್ಳಕೆರೆಯ ತಮ್ಮ ಮನೆಯಲ್ಲಿ ವಿಶ್ರಾಂತಿ ಮೂಡ್‌ನ‌ಲ್ಲಿದ್ದರು.

„ಹನುಮಲಿ ಮೊಬೈಲ್‌ ನಾಟ್‌ ರಿಚೇಬಲ್‌ ಚಿತ್ರದುರ್ಗ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಬೆಳಿಗ್ಗೆ ಎರಡು ಮದುವೆಗಳಿಗೆ ತೆರಳಿದ್ದರು. ಅವರ ಆಪ್ತರೊಬ್ಬರು ಮೃತಪಟ್ಟಿದ್ದು ಕುಟುಂಬದವರಿಗೆ ಸಾಂತ್ವನ ಹೇಳಿದರು. ಸಿಟಿ ಕ್ಲಬ್‌ನಲ್ಲಿ
ಸ್ನೇಹಿತರೊಂದಿಗೆ ಕಾಲ ಕಳೆದರು. ಜೆಡಿಎಸ್‌ ಅಭ್ಯರ್ಥಿ ಕೆ.ಸಿ. ವೀರೇಂದ್ರ (ಪಪ್ಪಿ) ಚಳ್ಳಕೆರೆಗೆ ತೆರಳಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಚಳ್ಳಕೆರೆ ನಿವಾಸದಲ್ಲಿ ವಿಶ್ರಾಂತಿ ಪಡೆದರು. ಕಾಂಗ್ರೆಸ್‌ ಅಭ್ಯರ್ಥಿ ಹನುಮಲಿ ಷಣ್ಮುಖಪ್ಪ ಯಾರ ಕೈಗೂ ಸಿಗದೆ ಮೊಬೈಲ್‌ ನಾಟ್‌ ರಿಚೇಬಲ್‌ ಮಾಡಿಕೊಂಡಿದ್ದಾರೆ. 

„ಮುಖಂಡರು-ಕಾರ್ಯಕರ್ತರೊಂದಿಗೆ ಸುಧಾಕರ್‌ ಚರ್ಚೆ ಹಿರಿಯೂರು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಿ. ಸುಧಾಕರ್‌
ಮುಖಂಡರು, ಕಾರ್ಯಕರ್ತರಿಂದ ಕ್ಷೇತ್ರದ ಮಾಹಿತಿ ಪಡೆದು ಚಳ್ಳಕೆರೆಯಲ್ಲಿರುವ ತಮ್ಮ ಮನೆಯಲ್ಲಿ ವಿಶ್ರಾಂತಿ ಪಡೆದರು. ಜೆಡಿಎಸ್‌ ಅಭ್ಯರ್ಥಿ ಡಿ. ಯಶೋಧರ್‌ ಹಿರಿಯೂರಿನ ಮನೆಯಲ್ಲೇ ವಿಶ್ರಾಂತಿ ಪಡೆದರೆ, ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಶ್ರೀನಿವಾಸ್‌ ಶನಿವಾರ ರಾತ್ರಿಯೇ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. 

„ಬೆಂಗಳೂರಿಗೆ ಪ್ರಯಾಣಿಸಿದ ಗೂಳಿಹಟ್ಟಿ ಹೊಸದುರ್ಗ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಿ.ಜಿ. ಗೋವಿಂದಪ್ಪ ಕ್ಷೇತ್ರದಲ್ಲಿ ನಡೆದ ಮದುವೆಗೆ ಹಾಜರಾಗಿ ಬೆಲಗೂರಿನ ಮನೆಯಲ್ಲಿದ್ದರು. ಪಕ್ಷದ ಕಾರ್ಯಕರ್ತರೊಂದಿಗೆ ಚರ್ಚಿಸಿದರು. ಬಿಜೆಪಿ ಅಭ್ಯರ್ಥಿ ಗೂಳಿಹಟ್ಟಿ ಶೇಖರ್‌ ಹೊಸದುರ್ಗದ ಸ್ನೇಹಿತರೊಬ್ಬರ ಮನೆಯಲ್ಲಿ ಕೆಲವು ಮುಖಂಡರು ಹಾಗೂ ಕಾರ್ಯಕರ್ತರೊಟ್ಟಿಗೆ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದರು. ನಂತರ ಬೆಂಗಳೂರಿಗೆ ತೆರಳಿದರು. ಜೆಡಿಎಸ್‌ ಅಭ್ಯರ್ಥಿ ಚಿತ್ರನಟ ಶಶಿಕುಮಾರ್‌ ಬೆಂಗಳೂರಿನ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next