Advertisement

ಅಂತ್ಯ ಸಂಸ್ಕಾರಕ್ಕೆ ಸಂಬಂಧಿಕರ ಪರದಾಟ

01:54 AM Jan 28, 2019 | |

ಚಿಂತಾಮಣಿ: ಸುಳ್ವಾಡಿ ಮಾರಮ್ಮ ದೇವಾಲಯದ ವಿಷ ಪ್ರಸಾದ ಪ್ರಕರಣ ಮಾಸುವ ಮುನ್ನವೇ, ಚಿಂತಾಮಣಿ ಗಂಗಮ್ಮ ದೇವಾಲಯದ ಪ್ರಸಾದ ದುರಂತದಲ್ಲಿ ಇಬ್ಬರು ಮೃತಪಟ್ಟು 12 ಮಂದಿ ಅಸ್ವಸ್ಥರಾದ ಘಟನೆ ಜನತೆಯನ್ನು ಮತ್ತೂಮ್ಮೆ ಬೆಚ್ಚಿಬೀಳಿಸಿದೆ. ಘಟನೆಯಲ್ಲಿ ಕವಿತಾ ಎಂಬುವವರು ಶನಿವಾರ ಮೃತಪಟ್ಟಿದ್ದು ಮೃತ ದೇಹವನ್ನು ಭಾನುವಾರ ನಗರದ ತಮ್ಮ ನಿವಾಸಕ್ಕೆ ತಂದ ಸಂಬಂಧಿಕರು ಅಂತ್ಯ ಸಂಸ್ಕಾರ ನಡೆಸಲು ಹಣಕಾಸಿನ ಕೊರತೆಯಿಂದ ಪರದಾಡುವಂತಾಯಿತು. ಮೃತ ಕವಿತಾಳ ಕುಟುಂಬಸ್ಥರು ಕೂಲಿ ಮಾಡಿ ಜೀವನ ನಡೆಸುತ್ತಿದ್ದು, ಇಡೀ ಕುಟುಂಬ ಆಸ್ಪತ್ರೆ ಪಾಲಾಗಿದೆ.

Advertisement

ಅಧಿಕಾರಿಗಳ ವಿರುದ್ಧ ಆಕ್ರೋಶ: ಕವಿತಾಳ ಮೃತ ದೇಹವನ್ನು ಮನೆಗೆ ತಂದಿದ್ದ ವೇಳೆ ಸ್ಥಳಿಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸದೆ ನಿರ್ಲಕ್ಷ್ಯವಹಿಸಿದ್ದಾರೆಂದು ಕವಿತಾಳ ಸಂಬಂಧಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. ಇನ್ನು ಕೋಲಾರ ಆಸ್ಪತ್ರೆಯಲ್ಲಿ ಮೃತಪಟ್ಟ ಸರಸ್ವತಿ ಅವರ ಮೃತ ದೇಹವನ್ನು ಸಂಬಂಧಿಕರಿಗೆ ನೀಡದ ಆಸ್ಪತ್ರೆ ಸಿಬ್ಬಂದಿ, ಸಂಪೂರ್ಣ ಶುಲ್ಕ ಭರಿಸಿ ಶವವನ್ನು ಕೊಂಡೊಯ್ಯುವಂತೆ ಪಟ್ಟು ಹಿಡಿದ ಪರಿಣಾಮ ಸಂಬಂಧಿಕರು ಗೋಳಾಡಿದ ಪ್ರಸಂಗ ಕೋಲಾರ ಜಾಲಪ್ಪ ಆಸ್ಪತ್ರೆಯಲ್ಲಿ ನಡೆಯಿತು. ಈ ಮಾಹಿತಿ ಅರಿತ ವಿಧಾನಸಭೆ ಉಪಸಭಾಧ್ಯಕ್ಷ ಜೆ.ಕೆ.ಕೃಷ್ಣಾರೆಡ್ಡಿ ಅವರ ಸೂಚನೆ ಮೇರೆಗೆ ಶವವನ್ನು ಸಂಬಂಧಿಕರಿಗೆ ನೀಡಲಾಯಿತು.

ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ ಅವರು ಭಾನುವಾರ ಮೃತ ಕವಿತಾಳ ಮನೆಗೆ ಭೇಟಿ ನೀಡಿ ಸಂಬಂಧಿಕರಿಗೆ ಸಾಂತ್ವನ ಹೇಳಿದರು. ವೈಯಕ್ತಿಕವಾಗಿ 20 ಸಾವಿರ ರೂ. ನೀಡಿ, ಮಕ್ಕಳಿಗೆ ಉಚಿತ ಶಿಕ್ಷಣ ನೀಡಿಸುವುದಾಗಿ ಭರವಸೆ ನೀಡಿದರಲ್ಲದೇ, ಆಸ್ಪತ್ರೆಯಲ್ಲಿರುವವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರಕಾರ ಭರಿಸುವುದಾಗಿ ತಿಳಿಸಿದರು.

ಭಾನುವಾರ ಮಧ್ಯಾಹ್ನ ಕವಿತಾ ಮೃತದೇಹವನ್ನು ಶ್ರೀರಾಮನಗರದ ರುದ್ರಭೂಮಿಯಲ್ಲಿ, ಸರಸ್ವತಿ ಮೃತ ದೇಹವನ್ನು ಗಡಿಮಿಂಚೆನಹಳ್ಳಿಯ ರುದ್ರಭೂಮಿಯಲ್ಲಿ ಅತ್ಯ ಸಂಸ್ಕಾರ ಮಾಡಲಾಯಿತು. ಇನ್ನು ಘಟನೆ ನಡೆದ ನರಸಿಂಹಪೇಟೆಯ ಗಂಗಮ್ಮ ದೇವಾಲಯದಲ್ಲಿ ಎಂದಿನಂತೆ ದೇವಿಗೆ ಪೂಜೆ ಮಾಡಿ ನಂತರ ಬಾಗಿಲು ಹಾಕಲಾಯಿತು.

ಆರೋಗ್ಯದಲ್ಲಿ ಸುಧಾರಣೆ

Advertisement

ಪ್ರಸಾದ ಸೇವಿಸಿ ಅಸ್ವಸ್ಥರಾಗಿರುವ ಪೈಕಿ ಇಬ್ಬರು ಮೃತಪಟ್ಟಿದ್ದು, ಉಳಿದವರು ಕೋಲಾರ, ಚಿಂತಾಮಣಿ ಮತ್ತು ಹೊಸಕೋಟೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ ಎಂದು ತಾಲೂಕು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಇನ್ನು ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ದೇವಾಲಯದ ಆವರಣದಲ್ಲಿ ಖಾಸಗಿ ವ್ಯಕ್ತಿಗಳಿಂದ ಪ್ರಸಾದ ಹಂಚಿಕೆ ಮಾಡಿದ್ದರಿಂದ ದೇವಾಲಯದ ಆಡಳಿತ ಮಂಡಳಿಗೆ ನೋಟಿಸ್‌ ನೀಡುವುದಾಗಿ ಪ್ರೊಬೆಷನರಿ ಎಸಿ ಅಶೋಕ್‌ ತೇಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next