Advertisement

ಅಮ್ಮ ಹೊಡೆದರೂ, ಅಪ್ಪ ಬೈದರೂ ಮೊದಲು ಓಡಿ ಹೋಗುತ್ತಿದ್ದುದು ಅಜ್ಜನ ಹತ್ತಿರ

09:26 PM Sep 25, 2020 | Karthik A |

ಅಜ್ಜನ ಪ್ರೀತಿ ಎಷ್ಟು ಜನಕ್ಕೆ ಸಿಕ್ಕಿರುತ್ತದೆ ಹೇಳಿ, ಆ ವಿಷಯದಲ್ಲಂತೂ ನಾನು ತುಂಬಾನೆ ಪುಣ್ಯವಂತೆ. ಯಾಕೆಂದರೆ ಅಪ್ಪ, ಅಮ್ಮನಿಗಿಂತ ಹೆಚ್ಚಾಗಿ ನನ್ನ ಜೀವನ ರೂಪಿಸಿದವರೇ ನನ್ನ ಅಜ್ಜ.

Advertisement

ಅಮ್ಮ ಹೊಡೆದರೂ, ಅಪ್ಪ ಬೈದರೂ ಮೊದಲು ಓಡಿ ಹೋಗುತ್ತಿದ್ದುದು ಅಜ್ಜನ ಹತ್ತಿರ. ಅವರು ಹಾಗೆ ನಾವು ಏನೇ ತಪ್ಪು ಮಾಡಿದರು ಏನು ಮಾಡಲೇ ಇಲ್ಲ ಅನ್ನುವಂತೆ ನಮ್ಮ ಪರವಾಗಿರುತ್ತಿದ್ದರು.

ನನ್ನ ಎಲ್ಲ ಆಸೆಗಳಿಗೂ ಮೆಟ್ಟಿಲಾಗಿ ನಿಂತಿದ್ದು ನನ್ನ ಅಜ್ಜ. ಅಮ್ಮನ ಬಳಿ ಚಾಕಲೇಟ್‌ಗೆ ದುಡ್ಡು ಕೇಳಿದರೆ ಹೇಗೆ ಬೈತಾರೋ, ಆದರೆ ಅಜ್ಜ ಯಾರಿಗೂ ಗೊತ್ತಾಗದೆ ಹಾಗೆ ಚಾಕಲೇಟ್‌ ತಂದು ಕೊಡುತ್ತಿದ್ದರು. ಅಪ್ಪ,ಅಮ್ಮ ಒಂದಿನ ಮನೇಲಿ ಇಲ್ಲದಿದ್ದರೂ ನಿದ್ರೆ ಬರುತ್ತದೆ. ಆದರೆ ಅಜ್ಜ ಇಲ್ಲವಾದರೆ ಇಡೀ ರಾತ್ರಿ ಕಣ್ಣೀರು ಧಾರೆಯಾಗಿ ಬರುತಿತ್ತು.

ಅಜ್ಜನ ಜತೆ ದನ ಮೇಯಿಸಲು ಹೋಗುವ ಖುಷಿಗೆ ಪಾರವೇ ಇಲ್ಲ. ಅಜ್ಜನಿಗೆ ಸಹಾಯಕ್ಕಾಗಿ ಹೋಗುದಲ್ಲ ನಮ್ಮ ಹೊಟ್ಟೆಗಾಗಿ. ಹಾಡಿಯಲ್ಲಿ ಹೋಗುವಾಗ ಅಜ್ಜ ಗೋಯ್‌ ಹಣ್ಣು (ಗೇರು ಹಣ್ಣು), ಚೂರಿ ಹಣ್ಣು ಕೊಯ್ದು ಕೊಡುತ್ತಾರೆ ಅಂತ ಅಷ್ಟೇ. ವಾರದ ಸಂತೆಗೆ ಹೋಗಿ ಅಲ್ಲಿ ಅಜ್ಜ ತೆಗೆದುಕೊಡುವ ಗೋಳಿಬಜೆ, ಬನ್ಸ್‌, ಬೋಟಿ, ಹಬ್ಬದಲ್ಲಿ ತೆಗೆದುಕೊಡುವ ಬಳೆ, ಬಿಂದಿ,ತಿಂಡಿ ಎಲ್ಲವು ಮರೆಯಲು ಸಾಧ್ಯವೇ ಇಲ್ಲ.

ಶಾಲೆ ಬಳಿ ಬಂದಲ್ಲಿ ಸರ್‌, ಮೇಡಂ ಹತ್ತಿರ ಎರಡು ಚಾಕಲೇಟ್‌ ಕೊಟ್ಟು ಇದು ನನ್ನ ಮೊಮ್ಮಗಳಿಗೆ ಕೊಡಿ ಎಂದು ಪ್ರೀತಿಯಿಂದ ಹೇಳುತ್ತಿದ್ದರು. ಮನೆಯಲ್ಲಿ ಏನಾದರೂ ವಿಶೇಷ ತಿಂಡಿ ಮಾಡಿದರು ಅವರು ತಿನ್ನುವುದರಲ್ಲಿ ಸ್ವಲ್ಪ ತೆಗೆದು ನಮಗೆ ಕೊಡಲಿಲ್ಲ ಅಂದರೆ ಅವರಿಗೆ ತಿಂದಿದ್ದು ಜೀರ್ಣವಾಗುತ್ತಿರಲಿಲ್ಲ.

Advertisement

ಆದರೆ ಇಂದಿನ ಮಕ್ಕಳು ಹಿರಿಯರ ಪ್ರೀತಿ ವಾತ್ಸಲ್ಯದಿಂದ ವಂಚಿತರಾಗಿರುವುದಂತು ಸತ್ಯ. ಇದಕ್ಕೆ ಹೆತ್ತ ತಂದೆ ತಾಯಿ ಕಾರಣವೇ? ತಂದೆ ತಾಯಿಗೆ ಅವರ ಕೆಲಸ ಮುಖ್ಯವಾಗಿರುತ್ತದೆಯೇ? ಮಕ್ಕಳನ್ನು ಅಜ್ಜ ಅಜ್ಜಿಯ ಬಳಿ ಬಿಟ್ಟರೆ ಇವರ ಗೌರವ ಕಡಿಮೆ ಆಗುತ್ತದೆ ಎನ್ನುವ ಮನೋಭಾವ ಹಾಗಾಗಿ ಎಳೆಯ ವಯಸ್ಸಿನಲ್ಲಿ ಬೇಬಿಸಿಟ್ಟಿಂಗನಂತಹ ಕಡೆ ಕಳುಹಿಸುವುದು ಬಹುಶಃ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು ಈ ಮೂಲ ಕಾರಣದಿಂದಲೇ? ತಮ್ಮ ಬದುಕಿನಲ್ಲಿ ಹಿರಿಯರಿಗೆ ಜಾಗವಿಲ್ಲದ ಮೇಲೆ ತನ್ನ ಮಕ್ಕಳಿಗೂ ಸಹಾ ಅವರು ಆವಶ್ಯಕತೆ ಇಲ್ಲವೆಂದು ಭಾವಿಸಿರಬಹುದೇ? ಹಿರಿಜೀವಿಗಳ ಪ್ರೀತಿ ಮಮಕಾರದಿಂದ ಬೆಳೆದ ಮಗು ಸಂಸ್ಕೃತಿಯ ಒಡಲಾಗಿ ರೂಪಿತವಾಗುತ್ತಾರೆ, ಸಮಾಜದ ಕನಸಿನ ಕೂಸಾಗುತ್ತಾರೆ.

ಸೃಷ್ಠಿಯ ಜೀವಾಳವೇ ಸಂಸ್ಕೃತಿ ಸಂಸ್ಕಾರ ಅಲ್ಲವೇ? ಅವೆಲ್ಲವೂ ಸಿಗುವುದು ಕೇವಲ ಹಿರಿಯರಿಂದಲೇ, ಹಿರಿಯರನ್ನು ಆಲಕ್ಷಿಸದೇ ಅವರೊಂದಿಗೆ ಜೀವನದ ಸೊಗಸನ್ನು ಅನುಭವಿಸಿ. ನಮ್ಮ ಬಾಲ್ಯ ಸರಿಯಾಗಿ ಬೇರೂರಿದರೆ ಮಾತ್ರ ಯೌವನದ ಬದುಕೆನ್ನುವುದು ಹೆಮ್ಮರವಾಗಲು ಸಾಧ್ಯ. ಆಗ ನಮ್ಮಷ್ಟು ಸುಖೀಗಳು ಬೇರಾರಿರುತ್ತಾರೆ.


ಸುಪ್ರೀತಾ ಶೆಟ್ಟಿ, ಡಾ| ಬಿ.ಬಿ. ಹೆಗ್ಡೆ ಪ್ರ. ದ. ಕಾಲೇಜು, ಕುಂದಾಪುರ 

 

 

Advertisement

Udayavani is now on Telegram. Click here to join our channel and stay updated with the latest news.

Next