Advertisement
ಅತಿಯಾದ ಸಾಮಾಜಿಕ ಜಾಲತಾಣ ಬಳಕೆ ಇದಕ್ಕೆ ಕಾರಣ ಎಂಬುದು ಆತಂಕಕಾರಿ ವಿಷಯ ವಾಗಿದೆ. ಈ ಪೈಕಿ ಫೇಸ್‌ಬುಕ್, ಇನ್‌ಸ್ಟಾ ಗ್ರಾಂನಂತಹ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾಗುವ ಅಪರಿಚಿತರ ಮೇಲೆ ಆಕರ್ಷಣೆಗೊಳಗಾಗಿ ಸಂಬಂಧ ಹೊಂದುವುದು, ಪತಿಯಿಂದ ನಿರ್ಲಕ್ಷ್ಯ, ದಂಪತಿ ನಡುವೆ ಸಾಮ ರಸ್ಯದ ಕೊರತೆ, ಕೆಲ ವೈಯಕ್ತಿಕ ಸಮಸ್ಯೆಗಳಿಂದ 3ನೇ ವ್ಯಕ್ತಿ ಜತೆಗೆ ದೈಹಿಕ ಸಂಬಂಧ ಹೊಂದುವ ಪ್ರಕರಣಗಳೇ ಅಧಿಕವಾಗಿದೆ. ಕಳೆದ ಮೂರೂವರೆ ವರ್ಷಗಳಲ್ಲಿ ಅಕ್ರಮ ಸಂಬಂಧದಿಂದ ವಿಚ್ಛೇದನ ಹಂತ ತಲುಪಿದ 981 ಪ್ರಕರಣಗಳು ಪರಿಹಾರ್ ವನಿತಾ ಸಹಾಯವಾಣಿ ಕೇಂದ್ರದ ಮೆಟ್ಟಿಲೇರಿವೆ.
Related Articles
Advertisement
ಬೆಂಗಳೂರಿನ ವಿವಾಹಿತ ಶಿಕ್ಷಕಿಯೊಬ್ಬರು ಫೇಸ್ ಬುಕ್‌ನಲ್ಲಿ ಪರಿಚಯವಾದ ರಾಜಸ್ಥಾನ ಮೂಲದ ವ್ಯಕ್ತಿಯ ಜತೆ ಸಲುಗೆ ಬೆಳೆಸಿಕೊಂಡಿದ್ದಳು. ಆತನೇ ಸ್ವತಃ ಶಿಕ್ಷಕಿಗೆ ವಿಮಾನದ ಟಿಕೆಟ್ ಬುಕ್ ಮಾಡಿ ಗೋವಾಕ್ಕೆ ಕರೆಸಿಕೊಳ್ಳುತ್ತಿದ್ದ. ಆತನೂ ರಾಜಸ್ಥಾನದಿಂದ ವಿಮಾನದಲ್ಲಿ ಗೋವಾಕ್ಕೆ ಬರುತ್ತಿದ್ದ. ಶಾಲಾ ಕೆಲಸದ ಮೀಟಿಂಗ್ ನೆಪ ಹೇಳಿ 2-3 ದಿನ ಮನೆಗೆ ಬಾರದ ಶಿಕ್ಷಕಿ ನಡೆಯಿಂದ ಅನುಮಾನಗೊಂಡ ಪತಿ, ಆಕೆಯನ್ನು ಹಿಂಬಾಲಿಸಿಕೊಂಡು ವಿಮಾನ ನಿಲ್ದಾಣಕ್ಕೆ ಹೋದಾಗ ಕೃತ್ಯ ಬಯಲಾಗಿದ್ದು ಪತಿ ವಿಚ್ಛೇದನ ಕೊಡಲು ಮುಂದಾಗಿದ್ದಾರೆ.
ಮೊಬೈಲ್ ಚಾಟಿಂಗ್ ಅಧಿಕಾರಿಗೆ ತಂದ ಆಪತ್ತು : ಸರ್ಕಾರದ ಉನ್ನತ ಹುದ್ದೆಯಲ್ಲಿರುವ ವಿವಾಹಿತ ಅಧಿಕಾರಿಯೊಬ್ಬರು ಮಹಿಳಾ ಸಹಪಾಠಿ ಜತೆಗೆ ಅಕ್ರಮ ಸಂಬಂಧ ಹೊಂದಿದ್ದರು. ಸದಾ ಮೊಬೈಲ್ ಹಿಡಿದು ಚಾಟ್ ಮಾಡುತ್ತಿದ್ದರು. ಅಧಿಕಾರಿಯ ವರ್ತನೆಯಿಂದ ಅನುಮಾನಗೊಂಡ ಪತ್ನಿ, ಅವರು ನಿದ್ದೆಗೆ ಜಾರಿದ ಸಮಯದಲ್ಲಿ ಮೊಬೈಲ್ ಪರಿಶೀಲಿಸಿದ್ದರು. ಆಗ ಅಧಿಕಾರಿಯ ಅಕ್ರಮ ಸಂಬಂಧ ಬೆಳಕಿಗೆ ಬಂದಿದೆ. ಇದೀಗ ಪತ್ನಿ ಸಹಾಯವಾಣಿ ಸಹಕಾರ ಪಡೆದು ಪತಿಗೆ ವಿಚ್ಛೇದನ ನೀಡಲು ಕೋರ್ಟ್ ಮೊರೆ ಹೋಗಿದ್ದಾರೆ.
ಅಕ್ರಮ ಪತ್ತೆ; ಪತ್ನಿಗೆ ಕಿರುಕುಳ : ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿಯೊಬ್ಬ 34 ವರ್ಷದ ಮಹಿಳೆಯನ್ನು ವಿವಾಹವಾಗಿದ್ದ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕಾರ್ಯಕ್ರಮ ವೊಂದರಲ್ಲಿ ಪರಿಚಯವಾದ ಮಹಿಳೆಯ ಜತೆ ಪತಿ ಅಕ್ರಮ ಸಂಬಂಧ ಹೊಂದಿದ್ದ. ಈ ವಿಚಾರ ಪತ್ನಿಯ ಗಮನಕ್ಕೆ ಬಂದು ಪ್ರಶ್ನಿಸಿದ್ದಳು. ಇದೀಗ ಪತ್ನಿಗೆ ಮಾರಣಾಂತಿಕ ಹಲ್ಲೆ ನಡೆಸಿ ಮನೆಯಿಂದ ಹೊರ ಹಾಕಿದ್ದಾನೆ. ಇದೀಗ ಪತ್ನಿ ನ್ಯಾಯಕ್ಕಾಗಿ ಮಹಿಳಾ ಠಾಣೆ ಮೆಟ್ಟಿಲೇರಿದ್ದಾಳೆ.
3 ತಿಂಗಳಲ್ಲಿ 86 ದಂಪತಿ ಸಹಾಯವಾಣಿ ಮೊರೆ : 2019 ರಿಂದ 2022ಜುಲೈವರೆಗೆ 323 ವಿವಾಹ ಪೂರ್ವ ಹಾಗೂ 638 ವಿವಾಹದ ನಂತರದ ಅಕ್ರಮ ಸಂಬಂಧದ ಕೇಸ್‌ಗಳು ಪರಿಹಾರ್-ವನಿತಾ ಸಹಾಯವಾಣಿಯಲ್ಲಿ ದಾಖಲಾಗಿವೆ. ಕಳೆದ ಏಪ್ರಿಲ್ ನಿಂದ-ಜುಲೈವರೆಗೆ 3 ತಿಂಗಳಲ್ಲಿ ಅಕ್ರಮ ಸಂಬಂಧದಿಂದ ಪ್ರತ್ಯೇಕವಾಗಿರುವ 86 ದಂಪತಿ ಸಮಸ್ಯೆ ಪರಿಹಾರಕ್ಕೆ ಸಹಾಯವಾಣಿ ಮೊರೆ ಹೋಗಿದ್ದಾರೆ. ದಂಪತಿ ತಾಳ್ಮೆಯಿಂದ ತಮ್ಮ ಸಮಸ್ಯೆಗಳನ್ನು ಪರಸ್ಪರ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ಪತಿ- ಪತ್ನಿಯರ ನಡುವಿನ ಬಿರುಕುಗಳಿಗೆ ಕೂಸು ಬಡವಾಗಬಾರದು. –ಪ್ರಮಿಳಾ ನಾಯ್ಡು, ಅಧ್ಯಕ್ಷೆ, ಕರ್ನಾಟಕ ಮಹಿಳಾ ಆಯೋಗ
–ಅವಿನಾಶ್ ಮೂಡಂಬಿಕಾನ