Advertisement

Rekha Patra: ಬಿಜೆಪಿ ಟಿಕೆಟ್‌ ಪಡೆದ ಸಂದೇಶ್‌ಖಾಲಿ ಸಂತ್ರಸ್ತೆ ಜತೆ ಮೋದಿ ಮಾತು

09:12 PM Mar 26, 2024 | Team Udayavani |

ನವದೆಹಲಿ: ಪಶ್ಚಿಮ ಬಂಗಾಳದ ಸಂದೇಶ್‌ಖಾಲಿ ಪ್ರಕರಣದಲ್ಲಿ ಲೈಂಗಿಕ ಕಿರುಕುಳಕ್ಕೊಳಗಾದ ಸಂತ್ರಸ್ತೆಯೂ ಆಗಿರುವ ಬಸೀರ್‌ಹಾತ್‌ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ನಲ್ಲಿ ಸ್ಪರ್ಧಿಸುತ್ತಿರುವ ರೇಖಾ ಪಾತ್ರ ಅವರೊಂದಿಗೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರೇ ಖುದ್ದು ಕರೆ ಮಾಡಿ ಮಾತುಕತೆ ನಡೆಸಿದ್ದಾರೆ.

Advertisement

ಇತ್ತೀಚೆಗೆ ಬಿಡುಗಡೆಯಾದ ಅಭ್ಯರ್ಥಿಗಳ ಪಟ್ಟಿಯಲ್ಲಿ ಬಿಜೆಪಿಯು ಅಚ್ಚರಿಯೆಂಬಂತೆ, ದೇಶಾದ್ಯಂತ ಸುದ್ದಿ ಮಾಡಿದ್ದ ಸಂದೇಶ್‌ಖಾಲಿ ಪ್ರಕರಣದ ಸಂತ್ರಸ್ತೆ ರೇಖಾ ಅವರಿಗೆ ಬಸೀರ್‌ಹಾತ್‌ ಕ್ಷೇತ್ರದ ಟಿಕೆಟ್‌ ಘೋಷಿಸಿತ್ತು. ಇದರ ಬೆನ್ನಲ್ಲೇ, ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಅಭ್ಯರ್ಥಿ ರೇಖಾ ಪಾತ್ರ ಅವರಿಗೆ ಕರೆ ಮಾಡಿ, ಚುನಾವಣಾ ಪ್ರಚಾರಕ್ಕೆ ನಡೆಸಲಾದ ಸಿದ್ಧತೆಗಳ ಕುರಿತು ವಿಚಾರಿಸಿದರು. ಜತೆಗೆ, ಸಂದೇಶಖಾಲಿ ದೌರ್ಜನ್ಯದ ವಿರುದ್ಧ ಧೈರ್ಯವಾಗಿ ಹೋರಾಡಿದ ಅವರನ್ನು ‘ಶಕ್ತಿ ಸ್ವರೂಪ’ ಎಂದು ಶ್ಲಾಘಿಸಿದರು.

ಸಂದೇಶ್‌ಖಾಲಿಯಲ್ಲಿ ಟಿಎಂಸಿ ಸ್ಥಳೀಯ ನಾಯಕ ಶಹಜಹಾನ್‌ ಶೇಖ್‌ ಮತ್ತು ಆತನ ಸಹಚರರಿಂದ ಮಹಿಳೆಯರ ಮೇಲೆ ನಡೆಯುತ್ತಿದ್ದ ಅತ್ಯಾಚಾರ ಮತ್ತು ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವ ಮೂಲಕ ರೇಖಾ ಅವರು ಭಾರೀ ಸುದ್ದಿಯಾಗಿದ್ದರು. ಅವರೊಂದಿಗೆ ಮಾತನಾಡುವ ವೇಳೆ ಮೋದಿಯವರು, ಪ್ರಚಾರದ ಸಿದ್ಧತೆಗಳ ಬಗ್ಗೆ, ಸ್ಥಳೀಯವಾಗಿ ಬಿಜೆಪಿಗಿರುವ ಬೆಂಬಲದ ಬಗ್ಗೆ ಹಾಗೂ ಸಂದೇಶ್‌ಖಾಲಿ ಮಹಿಳೆಯರ ಸ್ಥಿತಿಗತಿ ಬಗ್ಗೆಯೂ ವಿಚಾರಿಸಿದರು. ಜತೆಗೆ, ರೇಖಾ ಅವರಿಗೆ ಪ್ರಧಾನಿ ಮೋದಿ ಧೈರ್ಯ ತುಂಬಿದರು.

ಯಾರ ಮೇಲೂ ದ್ವೇಷವಿಲ್ಲ

ಆರಂಭದಲ್ಲಿ ಬಿಜೆಪಿ ನನಗೆ ಟಿಕೆಟ್‌ ನೀಡುತ್ತಿದ್ದಂತೆ, ನಮ್ಮ ಸುತ್ತಮುತ್ತಲಿರುವ ಟಿಎಂಸಿ ಕಾರ್ಯಕರ್ತರು ವಿರೋಧ ಮಾಡಿದರು. ನಂತರದಲ್ಲಿ ಅವರೂ ನನಗೆ ಬೆಂಬಲ ನೀಡುತ್ತಿದ್ದಾರೆ. ನನಗೆ ಯಾರ ಮೇಲೂ ದ್ವೇಷವಿಲ್ಲ ಎಂದೂ ರೇಖಾ ಹೇಳಿದರು.

Advertisement

2011ರಿಂದ ಮತದಾನವನ್ನೇ ಮಾಡಿಲ್ಲ: ರೇಖಾ

ಸಂದೇಶ್‌ಖಾಲಿಯಲ್ಲಿ ನಡೆಯುತ್ತಿದ್ದ ಅನಾಚಾರಗಳ ಬಗ್ಗೆ ಪ್ರಧಾನಿ ಮೋದಿ ಅವರಿಗೆ ವಿವರಿಸಿದ ರೇಖಾ ಅವರು, “ಇಲ್ಲಿನ ಪರಿಸ್ಥಿತಿಯಿಂದಾಗಿ 2011ರಿಂದ ನನಗೆ ಮತ ಹಾಕಲು ಕೂಡ ಸಾಧ್ಯವಾಗಲಿಲ್ಲ. ಇಲ್ಲಿನ ಜನರು ಉದ್ಯೋಗ ಅರಸಿಕೊಂಡು ಬೇರೆ ರಾಜ್ಯಗಳಿಗೆ ಹೋಗುತ್ತಾರೆ. ನನ್ನ ಪತಿ ಕೂಡ ತಮಿಳುನಾಡು ಮತ್ತು ಕೇರಳದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ಜನರಿಗೆ ಇಲ್ಲಿಯೇ ಉದ್ಯೋಗ ಕಲ್ಪಿಸಬೇಕೆಂಬುದು ಬಡ ಕುಟುಂಬದಿಂದ ಬಂದ ನನ್ನ ಆಶಯವಾಗಿದೆ’ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ನಮ್ಮೊಂದಿಗೆ ನಿಂತಿರುವುದು ನಮಗೆ ಶಕ್ತಿ ತಂದಿದೆ. ಸ್ವತಃ ಶ್ರೀರಾಮನೇ ನಮ್ಮೊಂದಿಗಿದ್ದಾನೆ ಎಂಬಂಥ ಭಾವನೆ ಮೂಡಿದೆ ಎಂದು ರೇಖಾ ಪಾತ್ರ ಹೇಳಿದರು.

ಸಂತ್ರಸ್ತೆಗೆ ಮೋದಿ ಹೇಳಿದ್ದೇನು?

– ನೀವು ದಿಟ್ಟವಾಗಿ ಸಂದೇಶ್‌ಖಾಲಿ ಹೋರಾಟ ಮಾಡಿದ್ದೀರಿ. ನೀವು ಶಕ್ತಿ ಸ್ವರೂಪ.

– ತೃಣಮೂಲ ಕಾಂಗ್ರೆಸ್‌ ಸರ್ಕಾರವು ರಾಜ್ಯದ ಜನರ ವಿರುದ್ಧ ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ನೀವೇ ಜನರಿಗೆ ತಿಳಿಸಬೇಕು.

– ಟಿಎಂಸಿ ಸರ್ಕಾರವು ಕೇಂದ್ರದ ಬಿಜೆಪಿ ಸರ್ಕಾರದ ಯೋಜನೆಗಳನ್ನು ರಾಜ್ಯದಲ್ಲಿ ಜಾರಿ ಮಾಡಲು ಬಿಡುತ್ತಿಲ್ಲ.

– ತೃಣಮೂಲ ಕಾಂಗ್ರೆಸ್‌ ಭ್ರಷ್ಟಾಚಾರದಲ್ಲಿ ತೊಡಗಿದೆ. ಕೇಂದ್ರದ ಯೋಜನೆಗಳ ಹೆಸರನ್ನು ಬದಲಿಸುತ್ತಿದೆ

– ಜನರ ಮಧ್ಯೆ ಇದ್ದು, ಈ ಎಲ್ಲ ವಿಚಾರಗಳನ್ನೂ ಅವರಿಗೆ ತಲುಪಿಸುವ ಕೆಲಸ ಮಾಡಿ.

Advertisement

Udayavani is now on Telegram. Click here to join our channel and stay updated with the latest news.

Next