ಮಂಡ್ಯ/ಭಾರತೀನಗರ: ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧನೊಬ್ಬನ ಸ್ಮಾರಕ ನಿರ್ಮಾಣ ಮಾಡುವುದಕ್ಕೆ ಕೆ.ಎಂ.ದೊಡ್ಡಿ ಸುತ್ತ ಎಲ್ಲಿಯೂ ಸರ್ಕಾರಿ ಜಾಗವೇ ಇಲ್ಲ ಎಂದು ಹೇಳುವ ಮೂಲಕ ತಾಲೂಕು ಅಧಿಕಾರಿಗಳು ಸರ್ಕಾರಿ ಜಾಗ ನೀಡುವುದಕ್ಕೆ ಹಿಂದೇಟು ಹಾಕಿದರು.
ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ. ಕೆ.ಎಂ.ದೊಡ್ಡಿ ಸುತ್ತ ನೂರಾರು ಎಕರೆ ಸರ್ಕಾರಿ ಭೂಮಿ ಇದೆ. ಅದನ್ನು ಕೊಡೋ ಮನಸ್ಸಿಲ್ಲ. ಸರ್ಕಾರಿ ಜಾಗವನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಅದನ್ನು ತೆರವು ಮಾಡಿಸಲು ಶಕ್ತಿ ಇಲ್ಲದೆ ಅಧಿಕಾರಿಗಳು ಈ ಮಾತು ಹೇಳುತ್ತಿದ್ದಾರೆ. ಎಲ್ಲಿಯೂ ಜಾಗ ಸಿಗದಿದ್ದರೆ ಕೆ.ಎಂ.ದೊಡ್ಡಿ ಆಸ್ಪತ್ರೆಯ ಒಳಾವರಣದಲ್ಲಿಯೇ ಸ್ಮಾರಕ ನಿರ್ಮಾಣ ಮಾಡುವಂತೆ ಪಟ್ಟು ಹಿಡಿದರು.
ಗುಡಿಗೆರೆ ಕಾಲೋನಿಯ ಪಕ್ಕದಲ್ಲಿರುವ ಸ್ಮಶಾನ ಜಾಗವನ್ನು ಅಂತ್ಯಕ್ರಿಯೆಗೆ ಗುರುತಿಸುವುದಕ್ಕೆ ಮುಂದಾದಾಗ ಗ್ರಾಮಸ್ಥರು ಆ ಜಾಗ ಬೇಡ ಎಂದು ವಿರೋಧಿಸಿದರು. ಅಲ್ಲಿಗೆ ಯಾರೂ ಹೋಗುವುದೇ ಇಲ್ಲ. ಅಲ್ಲಿ ನಿರ್ಮಾಣ ಮಾಡಿದರೆ ಏನು ಪ್ರಯೋಜನ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಗುಡಿಗೆರೆ ಕಾಲೋನಿಯ ಮೃತ ಯೋಧ ಗುರು ಕುಟುಂಬಕ್ಕೆ ಸಾಂತ್ವನ ಹೇಳಲು ಆಗಮಿಸಿದ್ದ ತಹಶೀಲ್ದಾರ್ ಗೀತಾ ಅವರು, ವೀರ ಯೋಧ ಗುರು ಅವರ ಅಂತ್ಯಕ್ರಿಯೆ ನಡೆಸಲು ಸರ್ಕಾರಿ ಜಾಗ ಸದ್ಯಕ್ಕೆ ಕಂಡುಬರುತ್ತಿಲ್ಲ. ಸರ್ಕಾರ ಜಾಗದ ಕೊರತೆ ನಮ್ಮನ್ನು ಬಹಳವಾಗಿ ಕಾಡುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಶೀಘ್ರವೇ ತಿಳಿಸುತ್ತೇನೆ ಎಂದು ಗ್ರಾಮಸ್ಥರಿಗೆ ತಿಳಿಸಿದರು.
ನಂತರ ಜಿಲ್ಲಾ ಪೊಲೀಸ್ ಅಧೀಕ್ಷಕ ಡಿ.ಶಿವಪ್ರಕಾಶ್, ಮದ್ದೂರು ತಹಶೀಲ್ದಾರ್, ಕಂದಾಯಾಧಿಕಾರಿ, ಗ್ರಾಮ ಲೆಕ್ಕಿಗರು ಸಭೆ ಸೇರಿ ಕೆ.ಎಂ.ದೊಡ್ಡಿ ಆಸುಪಾಸಿನಲ್ಲಿ ಸರ್ಕಾರಿ ಜಾಗವಿಲ್ಲದಿರುವುದು ಸಮಸ್ಯೆಯಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಮನವಿ ಮಾಡುವಂತೆ ಸಲಹೆ ನೀಡಿದರು ಎಂದು ತಿಳಿದು ಬಂದಿದೆ.