ಬೆಂಗಳೂರು: ನಮ್ಮದು ಜ್ಯಾತ್ಯಾತೀತ ದೇಶ. ಕಾಂಗ್ರೆಸ್ ಕೂಡ ಜ್ಯಾತ್ಯಾತೀತ ಪಕ್ಷ. ಹೀಗಾಗಿ ಮುಸ್ಲಿಮರು ಕಾಂಗ್ರೆಸ್ ಜೊತೆಯಿದ್ದಾರೆ. ನಾಳೆ ಬಿಜೆಪಿ ಜ್ಯಾತ್ಯಾತೀತ ಪಕ್ಷವಾದರೆ ಮುಸ್ಲಿಮರು ಬಿಜೆಪಿ ಜೊತೆ ಕೂಡ ಇರುತ್ತಾರೆ ಎಂದು ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಲ್ಲ. ದೇಶದಲ್ಲಿ 22 ಕೋಟಿ ಮುಸ್ಲಿಂ ಜನಸಂಖ್ಯೆಯಿದೆ. ಹೀಗಾಗಿ ಮಸ್ಲಿಮರು ಹೇಗೆ ಅಲ್ಪಸಂಖ್ಯಾತರಾಗ್ತಾರೆ. ಮುಸ್ಲಿಂರ ಕೈಹಿಡಿಯಲು ಯಾವುದೇ ರಾಜಕೀಯ ಪಕ್ಷ ಬೇಕಿಲ್ಲ. ಸಂವಿಧಾನ ಒಂದೇ ಸಾಕು ಎಂದರು.
ಉಗ್ರಪ್ಪ- ಸಲೀಂ ಸಂಭಾಷಣೆಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಶಿಸ್ತು ಸಮಿತಿ ನೀಡಿದ ನೋಟಿಸ್ ಗೆ ಉತ್ತರ ನೀಡಿದ್ದಾರೆ. ಅವರ ಉತ್ತರ ನೋಡಿಲ್ಲ. ಶಿಸ್ತು ಸಮಿತಿ ಸಭೆಯಲ್ಲಿ ಅವರ ಉತ್ತರ ನೋಡುತ್ತೇವೆ. ಸಲೀಂ ಮಾತಾಡಿದ್ದು ಮೇಲ್ನೋಟಕ್ಕೆ ಸ್ಪಷ್ಟವಾಗಿತ್ತು, ಲೂಸ್ ಟಾಕ್ ಎನ್ನುವುದು ಗೊತ್ತಾಗಿತ್ತು. ಹೀಗಾಗಿ ಅವರ ಮೇಲೆ ಕ್ರಮ ತೆಗೆದುಕೊಂಡಿದ್ದೇವೆ. ಆದರೆ ಉಗ್ರಪ್ಪ ಮಾತು ಸ್ಪಷ್ಟವಾಗಿಲ್ಲ. ಅವರು ನಗೆಯಾಡಿದ್ದು ಕಾಣುತ್ತಿತ್ತು. ಕೆಪಿಸಿಸಿ ಅಧ್ಯಕ್ಷರನ್ನು ನಾವೇ ನೇಮಕ ಮಾಡಿದ್ದು ಎಂದಿದ್ದಾರೆ ಅದೇನು ಮಹಾ ತಪ್ಪಲ್ಲ ಎಂದರು.
ಇದನ್ನೂ ಓದಿ:ಸಿದ್ಧರಾಮಯ್ಯರನ್ನು ಆಫ್ಘಾನಿಸ್ತಾನಕ್ಕೆ ಕಳುಹಿಸಿ: ಶ್ರೀನಿವಾಸ್ ಪ್ರಸಾದ್
ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅದು ಅವರ ಹೇಳಿಕೆ ಅವರ ಹೇಳಿಕೆಗಳೆಲ್ಲಾ ಸತ್ಯ ಎಂದಲ್ಲ. ಜಾಫರ್ ಷರೀಫ್ ಮೊಮ್ಮಗನ ಸೋಲಿಸಿದ್ದು ಸಿದ್ದರಾಮಯ್ಯ ಎಂದು ಕುಮಾರಸ್ವಾಮಿ ಹೇಳುತ್ತಾರೆ. ಹಾಗಾದರೆ ಜಾಫರ್ ಮೊಮ್ಮಗನಿಗೆ ಕುಮಾರಸ್ವಾಮಿ ಟಿಕೆಟ್ ಕೊಟ್ಟು ಗೆಲ್ಲಿಸಬೇಕಿತ್ತು. ಹಾಗೆ ಮಾತನಾಡುತ್ತಾ ಹೋದರೆ ನಾವು ಸಾಕಷ್ಟು ಮಾತಾಡಬಹುದು ಎಂದರು.