ಮೂಡಲಗಿ: ಮೂಡಲಗಿ ತಾಲ್ಲೂಕಿನ ಸಾರ್ವಜನಿಕರ ಬಹು ನಿರೀಕ್ಷಿತ ಉಪ ನೋಂದಣಿ ಕಛೇರಿಯಲ್ಲಿ ನೋಂದಣಿ ಕಾರ್ಯವನ್ನು ಆರಂಭಿಸಲಿಕ್ಕೆ ಇಲಾಖೆಯು ಅನುಮತಿ ನೀಡಿದ್ದರ ಹಿನ್ನೆಲೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅವರು ಇದೇ ಡಿ. 20 ರಂದು ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.
ಅರಭಾವಿ ಶಾಸಕ ಮತ್ತು ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುವರು.
ಈಗಾಗಲೇ ಹೊಸದಾಗಿ ಆರಂಭಿಸಲಾಗಿರುವ ಉಪ ನೋಂದಣಿ ಕಛೇರಿಯಲ್ಲಿ ಸಂಬಂಧಪಟ್ಟ ಎಲ್ಲ ಕೆಲಸಗಳು ಪೂರ್ಣಗೊಂಡಿವೆ. ಕಾವೇರಿ ತಂತ್ರಾಂಶ ಮತ್ತು ಖಜಾನೆ-2 ಗೆ ಸಂಬಂಧಿಸಿದ ಕಾರ್ಯಗಳು ಸಹ ಮುಗಿದಿವೆ. ಜತೆಗೆ ಕಛೇರಿಗೆ ಒಳಪಡುವ ಗ್ರಾಮಗಳ ಸಮೀಕ್ಷೆಗಳು ಮುಗಿದಿವೆ. ಈ ಕಛೇರಿಯಿಂದ ಮೂಡಲಗಿ ತಾಲ್ಲೂಕಿನ ೪೮ ಗ್ರಾಮಗಳ ಸಾರ್ವಜನಿಕರಿಗೆ ಅನುಕೂಲವಾಗಲಿದ್ದು, ಇಲ್ಲಿಯವರೆಗೆ ಇದೇ ಕೆಲಸಕ್ಕೆ ದಿನನಿತ್ಯ ಗೋಕಾಕ್ ನಗರಕ್ಕೆ ಹೋಗುತ್ತಿದ್ದ ಸಾರ್ವಜನಿಕರ ಅಲೆದಾಟ ತಪ್ಪಲಿದೆ. ಮೂಡಲಗಿಯಲ್ಲಿಯೇ ಇನ್ಮುಂದೆ ಎಲ್ಲ ಸೇವೆಗಳು ಸಿಗಲಿವೆ.
ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ನಿರಂತರ ಪ್ರಯತ್ನದಿಂದ ಮೂಡಲಗಿ ಹೊಸ ತಾಲೂಕಿಗೆ ಉಪ ನೋಂದಣಿ ಕಛೇರಿ ಆರಂಭವಾಗಿದೆ. ಪ್ರತಿ ಬಾರಿ ರಾಜಧಾನಿಗೆ ಹೋದಾಗಲೆಲ್ಲ ಸರಕಾರದ ಮೇಲೆ ಈ ಕಛೇರಿಯನ್ನು ಆರಂಭಿಸುವಂತೆ ಒತ್ತಡವನ್ನು ಹೇರುತ್ತಲೇ ಇದ್ದರು. ಬಾಲಚಂದ್ರ ಜಾರಕಿಹೊಳಿ ಅವರು ಮೂಡಲಗಿ ತಾಲೂಕಿನ ಸಾರ್ವಜನಿಕರ ಅದರಲ್ಲೂ ರೈತ ವರ್ಗದ ಆಶಯಗಳಿಗೆ ಸ್ಪಂದಿಸುವ ಮೂಲಕ ನುಡಿದಂತೆ ನಡೆಯುತ್ತಿದ್ದಾರೆ.
ಮೂಡಲಗಿ ಉಪ ನೋಂದಣಿ ಕಚೇರಿಯಲ್ಲಿ ದಸ್ತಾವೇಜು ನೋಂದಣಿ ಕಾರ್ಯವನ್ನು ಕಂದಾಯ ಸಚಿವ ಅಶೋಕ್ ಅವರು ಉದ್ಘಾಟಿಸುವ ಮೂಲಕ ಸಾರ್ವಜನಿಕ ಸೇವೆಗೆ ಅರ್ಪಿಸಲಿದ್ದಾರೆ.
ಅಂದ ಹಾಗೇ ಮೂಡಲಗಿಯಲ್ಲಿ ಉಪ ನೋಂದಣಿ ಕಚೇರಿಯಲ್ಲಿ ನೋಂದಣಿ ಕಾರ್ಯವನ್ನು ಪ್ರಾರಂಭಿಸುವುದಕ್ಕೆ ಸರ್ಕಾರ ಅನುಮತಿ ನೀಡಿದ್ದು, ಡಿಸೆಂಬರ್ 20 ರಂದು ಸಂಜೆ 5 ಗಂಟೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಘನ ಉಪಸ್ಥಿತಿಯಲ್ಲಿ ಕಂದಾಯ ಸಚಿವ ಆರ್. ಅಶೋಕ್ ಅವರು ಉದ್ಘಾಟಿಸಲಿದ್ದಾರೆ.