Advertisement

ರಾಜಧಾನಿಯಲ್ಲಿ ಹೊಸ ವಾಹನಗಳ ನೋಂದಣಿ ರದ್ದು?

12:17 PM Nov 03, 2018 | |

ಬೆಂಗಳೂರು: ದೆಹಲಿಯ ಪರಿಸ್ಥಿತಿ ಬೆಂಗಳೂರಿಗೆ ಬರದಂತೆ ಮುನ್ನೆಚ್ಚರಿಕೆ ವಹಿಸಲು ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಹೊಸ ವಾಹನಗಳ ನೋಂದಣಿಗೆ ರದ್ದುಪಡಿಸಲು ಸರ್ಕಾರ ಚಿಂತನೆ ನಡೆಸಿದೆ.

Advertisement

ಶುಕ್ರವಾರ ಮಲ್ಲೇಶ್ವರದ ಐಪಿಪಿ ಕೇಂದ್ರದಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಸುದ್ದಿಗೋಷ್ಠಿ ನಡೆಸಿ, ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ವಾಯು ಮಾಲಿನ್ಯ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಮುಂದಿನ ಎರಡು ಮೂರು ವರ್ಷ ಹೊಸ ವಾಹನಗಳ ನೋಂದಣಿ ರದ್ದುಪಡಿಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು. 

ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಈಗಾಗಲೇ 74 ಲಕ್ಷ ಮೀರಿದ್ದು, ನಿತ್ಯ ಸಾವಿರಾರು ವಾಹನಗಳು ರಸ್ತೆಗಿಳಿಯುತ್ತಿವೆ. ಇದರಿಂದಾಗಿ ನಗರದಲ್ಲಿ ವಾಹನ ದಟ್ಟಣೆ ಹಾಗೂ ವಾಯುಮಾಲಿನ್ಯ ಹೆಚ್ಚುತ್ತಿರುವ ಕುರಿತು ವರದಿ ಬಂದಿದೆ. ದೆಹಲಿ ಮಾದರಿಯಲ್ಲಿ ಬೆಂಗಳೂರಿನ ವಾತಾವರಣವೂ ಹಾಳಾಗಬಾರದು ಎಂಬ ಉದ್ದೇಶದಿಂದ ಹೊಸ ವಾಹನಗಳ ನೋಂದಣಿ ರದ್ದುಪಡಿಸುವ ಜತೆಗೆ,

ಎಲೆಕ್ಟ್ರಿಕ್‌ ವಾಹನಗಳ ಬಳಕೆಗೆ ಪ್ರೋತ್ಸಾಹ ನೀಡಲಾಗುವುದು. ಜತೆಗೆ ಬಿಎಂಟಿಸಿಯಲ್ಲೂ ಎಲೆಕ್ಟ್ರಿಕ್‌ ಬಸ್‌ಗಳನ್ನು ಹೆಚ್ಚಿಸಲಾಗುವುದು. ಇದರೊಂದಿಗೆ 15-20 ವರ್ಷಕ್ಕಿಂತ ಹಳೆಯ ವಾಹನಗಳನ್ನು ನಗರದಲ್ಲಿ ನಿಷೇಧಿಸುವ ಬಗ್ಗೆಯೂ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ನೀಡಿದ್ದು, ಆ ಕುರಿತು ಕ್ರಮಕೈಗೊಳ್ಳಲಾಗುವುದು ಎಂದರು.

ನಮ್ಮ ಮೆಟ್ರೋ ಬಂದರೂ ತಗ್ಗದ ವಾಹನಗಳ ಸಂಖ್ಯೆ: ನಮ್ಮ ಮೆಟ್ರೋ ಸೇವೆ ಆರಂಭವಾದ ಬಳಿಕ ನಗರದಲ್ಲಿ ಖಾಸಗಿ ವಾಹನಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂಬ ನಿರೀಕ್ಷೆಯಿತ್ತು. ಆದರೆ, ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, 2016ರಲ್ಲಿ 61.12 ಲಕ್ಷ ಇದ್ದ ಖಾಸಗಿ ವಾಹನಗಳ ಸಂಖ್ಯೆ 2017ರ ಅಂತ್ಯಕ್ಕೆ 68.33 ಲಕ್ಷಕ್ಕೆ ಏರಿಕೆಯಾಗಿತು.

Advertisement

2018 ಮಾರ್ಚ್‌ ಅಂತ್ಯಕ್ಕೆ 74.06 ಲಕ್ಷ ಮೀರಿದ್ದು, ಆ ಪೈಕಿ ಶೇ.69 ರಷ್ಟು ದ್ವಿಚಕ್ರ ವಾಹನಗಳಿದ್ದು, ಒಟ್ಟಾರೆ 51.34 ಲಕ್ಷ ದ್ವಿಚಕ್ರ ವಾಹನಗಳು ಬೆಂಗಳೂರಿನಲ್ಲಿ ಸಂಚರಿಸುತ್ತಿವೆ. ಉಳಿದಂತೆ 14,32,374 ಕಾರುಗಳು (ಶೇ.19), ಶೇ.9 ಇತರೆ ವಾಹನಗಳು, ಶೇ.3 ಆಟೋಗಳಿವೆ ನೋಂದಣಿಯಾಗಿವೆ.

ಸರ್ಕಾರದ ಆದಾಯ ಖೋತಾ?: ಅಬಕಾರಿ ನಂತರ ಸರ್ಕಾರಕ್ಕೆ ಹೆಚ್ಚಿನ ಆದಾಯ ತಂದುಕೊಡುವುದು ಸಾರಿಗೆ ಇಲಾಖೆ. ನೋಂದಣಿ ರದ್ದುಪಡಿಸುವುದರಿಂದ ಸರ್ಕಾರಕ್ಕೆ ನಷ್ಟವಾಗಲಿದೆ. 2017-18ನೇ ಸಾಲಿನಲ್ಲಿ ಬೆಂಗಳೂರು ವಿಭಾಗಕ್ಕೆ 2,788.1 ಕೋಟಿ ರೂ. ರಾಜಸ್ವ ಸಂಗ್ರಹ ನೀಡಲಾಗಿತ್ತು.

ವಾಹನ ಸಂಖ್ಯೆ ಮಿತಿ ಮೀರಿ ಏರಿಕೆಯಾಗಿದ್ದರಿಂದ ರಾಜಸ್ವ ಗುರಿಗಿಂತಲೂ ಹೆಚ್ಚು ಸಂಗ್ರಹವಾಗಿದೆ. ರಾಜ್ಯದಲ್ಲಿ ಒಟ್ಟಾರೆ 5,943 ಕೋಟಿ ರೂ. ರಾಜಸ್ವ ಸಂಗ್ರಹವಾದರೆ, ಶೇ.50ರಷ್ಟು (2,955.8 ಕೋಟಿ ರೂ.) ರಾಜಸ್ವ ಬೆಂಗಳೂರು ವಿಭಾಗದಿಂದಲೇ ಸಂಗ್ರಹವಾಗಿದೆ. ಹೀಗಾಗಿ ಸರ್ಕಾರ ವಾಹನ ನೋಂದಣಿ ಸ್ಥಗಿತಗೊಳಿಸಿ ಆದಾಯ ಮೂಲಕ್ಕೆ ಕತ್ತರಿ ಹಾಕಿಕೊಳ್ಳುವುದು ಅನುಮಾನ ಎಂದೂ ಹೇಳಲಾಗುತ್ತಿದೆ.

ನಗರದಲ್ಲಿ ವಾಹನ ನೋಂದಣಿ ಪ್ರಮಾಣ
ವರ್ಷ    ವಾಹನಗಳು (ಲಕ್ಷದಲ್ಲಿ)

2008-09      32.40
2009-10       34.90
2010-11         37.91
2011-12          41.56
2012-13          45.91
2013-14          50.50
2014-15          55.59
2015-16          61.12
2016-17           68.33
2017-18           74.06

Advertisement

Udayavani is now on Telegram. Click here to join our channel and stay updated with the latest news.

Next