ನವದೆಹಲಿ: ವಿಶೇಷ ಸುಧಾರಣಾ ಕ್ರಮ ಗಳನ್ನು ಜಾರಿ ಮಾಡುವ ಮೂಲಕ 23 ರಾಜ್ಯಗಳು 2020-21ರಲ್ಲಿ ಹೆಚ್ಚುವರಿಯಾಗಿ 1.06 ಲಕ್ಷ ಕೋಟಿ ರೂ.ಗಳನ್ನು ಸಂಗ್ರಹಿಸಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇದನ್ನೂ ಓದಿ:ರಾಯರ ಬೃಂದಾವನ ದರ್ಶನ ಪುನರಾರಂಭ : ಮಂತ್ರಾಲಯದಲ್ಲಿ 52 ದಿನಗಳ ಬಳಿಕ ಅವಕಾಶ
“ಬದ್ಧತೆ ಮತ್ತು ಉತ್ತೇಜನ ಆಧರಿತ ಸುಧಾರಣೆಗಳು’ ಎಂಬ ಶೀರ್ಷಿಕೆಯಲ್ಲಿ ಲಿಂಕ್ಡ್ಇನ್‌ನಲ್ಲಿ ಅಪ್‌ಲೋಡ್ ಮಾಡಲಾದ ಪೋಸ್ಟ್‌ನಲ್ಲಿ ಮೋದಿ ಅವರು ಈ ಕುರಿತು ಬರೆದುಕೊಂಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಭಾಗೀದಾರಿಕೆಯಿಂದಾಗಿ ಸಂಪನ್ಮೂಲಗಳ ಲಭ್ಯತೆಯಲ್ಲಿ ಗಣನೀಯ ಏರಿಕೆ ಕಂಡುಬಂತು. ಅದರ ಪರಿಣಾಮ ವೆಂಬಂತೆ, ಆರ್ಥಿಕ ಬಿಕ್ಕಟ್ಟಿನ ನಡುವೆಯೂ 23 ರಾಜ್ಯಗಳು ತಮಗೆ ಸಿಗಬೇಕಾದ 2.14 ಲಕ್ಷ ಕೋಟಿ ರೂ.ಗಳ ಜೊತೆಗೆ ಹೆಚ್ಚುವರಿಯಾಗಿ 1.06 ಲಕ್ಷ ಕೋಟಿ ರೂ. ಗಳನ್ನು ಸಂಗ್ರಹಿಸಿವೆ ಎಂದು ಅವರು ಹೇಳಿದ್ದಾರೆ.
ಕೊರೊನಾ ಸೋಂಕು ಜಗತ್ತಿನಾದ್ಯಂತ ಎಲ್ಲ ಸರ್ಕಾರಗಳಿಗೂ ಹೊಸ ಸವಾಲುಗಳನ್ನು ಒಡ್ಡಿತು. ಭಾರತ ಕೂಡ ಅದರಿಂದ ಹೊರತಾಗಿರಲಿಲ್ಲ. ಸಾರ್ವಜನಿಕರಕಲ್ಯಾಣಕ್ಕಾಗಿ ಸಾಕಷ್ಟು ಸಂಪನ್ಮೂಲಗಳನ್ನುಕ್ರೋಡೀಕರಿಸುವುದು ಅತಿದೊಡ್ಡ ಸವಾಲಾಗಿತ್ತು. ಆದರೆ, ನಮಗೆ ನಮ್ಮ ಒಕ್ಕೂಟ ವ್ಯವಸ್ಥೆಯ ಬಲಿಷ್ಠತೆಯ ಮೇಲೆ ನಂಬಿಕೆಯಿತ್ತು. ಹೀಗಾಗಿ, ಕೇಂದ್ರ-ರಾಜ್ಯ ಭಾಗೀದಾರಿಕೆಯ ಸ್ಫೂರ್ತಿಯೊಂದಿಗೆ ನಾವು ಹೆಜ್ಜೆಯಿಟ್ಟೆವು.
ಮೇ 2020ರಲ್ಲಿ ಕೇಂದ್ರ ಸರ್ಕಾರವು ಆತ್ಮನಿರ್ಭರ ಭಾರತ ಪ್ಯಾಕೇಜ್‌ನ ಭಾಗವಾಗಿ 2020-21ರ ಅವಧಿಗೆ ರಾಜ್ಯಗಳು ಇನ್ನಷ್ಟು ಮೊತ್ತ ಪಡೆಯಲು ಅವಕಾಶ ಕಲ್ಪಿಸಿತು. ಇಂಥ ಪ್ರಗತಿಪರ ನೀತಿಗಳನ್ನು ಅಳವಡಿಸಿಕೊಳ್ಳಲು ರಾಜ್ಯಗಳಿಗೆ ಉತ್ತೇಜನ ನೀಡುವ ಮೂಲಕ ಹೆಚ್ಚುವರಿ ಮೊತ್ತ ಸಂಗ್ರಹಿಸಲು ರಾಜ್ಯಗಳಿಗೆ ಕೇಂದ್ರ ನೆರವಾಯಿತು ಎಂದೂ ಮೋದಿ ಹೇಳಿದ್ದಾರೆ.
ಒಂದು ದೇಶ, ಒಂದು ಪಡಿತರ ಕಾರ್ಡ್ ನೀತಿಯನ್ನು 17 ರಾಜ್ಯಗಳು ಅಳವಡಿಸಿಕೊಂಡಿದ್ದು, ಅಂಥ ರಾಜ್ಯಗಳಿಗೆ ಹೆಚ್ಚುವರಿಯಾಗಿ 37,600 ಕೋಟಿ ರೂ. ಸಾಲವನ್ನು ಒದಗಿಸಲಾಯಿತು. ಉದ್ಯಮ ಸ್ನೇಹಿ ಯೋಜನೆಗಳು ಹಾಗೂ ನಗರಪ್ರದೇಶದ ಬಡವರು, ಮಧ್ಯಮ ವರ್ಗದವರಿಗೆ ನೀಡಿದ ಗುಣಮಟ್ಟದ ಸೇವೆ, ಮೂಲಸೌಕರ್ಯಗಳು ಕೂಡ ಸುಧಾರಣೆಗೆ ದಾರಿ ಮಾಡಿಕೊಟ್ಟವು ಎಂದೂ ಅವರು ಬರೆದುಕೊಂಡಿದ್ದಾರೆ.