ಹೊಸದಿಲ್ಲಿ: ದೇಶದ ನಗರ ಪ್ರದೇಶದಲ್ಲಿನ ನಿರುದ್ಯೋಗ ಪ್ರಮಾಣ 2022-23ನೇ ಸಾಲಿನಲ್ಲಿ ಶೇ.6.8ಕ್ಕೆ ಇಳಿಕೆಯಾಗಿದೆ. ಇದು ಮಾ.31ಕ್ಕೆ ಮುಕ್ತಾಯವಾದ ಮಾಹಿತಿಯಾಗಿದ್ದು, ಐದು ವರ್ಷಗಳಲ್ಲಿಯೇ ಅತ್ಯಂತ ಕನಿಷ್ಠ ಪ್ರಮಾಣದ್ದು ಎಂದು ರಾಷ್ಟ್ರೀಯ ಸಾಂಖೀಕ ಸಂಸ್ಥೆ (ಎನ್‌ಎಸ್‌ಒ) ಸೋಮವಾರ ಬಿಡುಗಡೆ ಮಾಡಿದ ಮಾಹಿತಿಯಲ್ಲಿ ಉಲ್ಲೇಖೀಸಲಾಗಿದೆ. ಇದೊಂದು ಧನಾತ್ಮಕ ಬದಲಾವಣೆ ಯಾಗಿದೆ ಎಂದು ಎನ್‌ಎಸ್‌ಒ ಹೇಳಿಕೊಂಡಿದ್ದು, ಕೆಲಸದಲ್ಲಿ ಇರುವವರ ಭಾಗವಹಿಸುವಿಕೆಯ ಪ್ರಮಾಣ (ಲೇಬರ್ ಫೋರ್ಸ್ ಪಾರ್ಟಿಸಿಪೇಶನ್ ರೇಟ್) 2022-23ನೇ ಸಾಲಿನಲ್ಲಿ ಅತ್ಯಧಿಕವಾಗಿದೆ. 2018-19ನೇ ಸಾಲಿಗೆ ಸಂಬಂಧಿಸಿದಂತೆ ಇದು ಹೆಚ್ಚು ಎಂದು ಅದು ತನ್ನ ವರದಿಯಲ್ಲಿ ಹೇಳಿದೆ. ವರದಿಯ ಪ್ರಕಾರ ಪ್ರಸಕ್ತ ವರ್ಷದಲ್ಲಿ ಕೆಲಸದಲ್ಲಿ ಇರುವವರ ಭಾಗವಹಿಸುವಿಕೆಯ ಪ್ರಮಾಣ ಶೇ.38.1 ಆಗಿದೆ. ಈ ವರ್ಷದ ಫೆ.24ರಂದು ಬಿಡುಗಡೆಯಾಗಿದ್ದ ವರದಿಯ ಪ್ರಕಾರ 2021-22ನೇ ಸಾಲಿಗೆ ಸಂಬಂಧಿಸಿದ ವರದಿಯಲ್ಲಿ ನಿರುದ್ಯೋಗ ಪ್ರಮಾಣ ಶೇ.4.1ಕ್ಕೆ ಕುಸಿದಿತ್ತು.