ಬಂಟ್ವಾಳ: ಕಳೆದ ಮೂರು ವಾರಗಳಿಂದ ತೀವ್ರತರ ಪಡೆದಿದ್ದ ಮಳೆಯ ಪರಿಣಾಮ ಹಾನಿ, ಪ್ರವಾಹದಿಂದ ಜನಜೀವನ ತತ್ತರಿಸಿತ್ತಾದರೂ ತಾಲೂಕಿನಲ್ಲಿ ಕಳೆದೆರಡು ದಿನಗಳಲ್ಲಿ ಮಳೆ ಕ್ಷೀಣಿಸಿದೆ. ಇದರ ಪರಿಣಾಮ ಹಾನಿಯ ಪ್ರಕರಣಗಳು ಕೂಡ ಕಡಿಮೆಯಾಗಿದೆ.
ಈ ಬಾರಿ ಮುಂಗಾರು ಕಳೆದ ಕೆಲವು ವರ್ಷಕ್ಕಿಂತ ಸ್ವಲ್ಪ ಜೋರಾಗಿಯೇ ಅಬ್ಬರಿಸಿದ್ದು ಹಲವಾರು ಮನೆಗಳಿಗೆ ಹಾನಿಯಾಗಿದೆ. ಮನೆ ಹಾನಿ ಪ್ರಕರಣಗಳಿಗೆ ಪ್ರಾಕೃತಿಕ ವಿಕೋಪದಡಿ ಪರಿಹಾರ ನೀಡಬೇಕಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಘಟನ ಸ್ಥಳಗಳಿಗೆ ಭೇಟಿ ನೀಡಿ ಪರಿಹಾರಕ್ಕಾಗಿ ವರದಿ ಸಲ್ಲಿಸಿದ್ದಾರೆ.
ನಿರಂತರ ಮಳೆಯ ಪರಿಣಾಮದಿಂದ ರಸ್ತೆ, ಸೇತುವೆಗಳಿಗೂ ಹಾನಿಯಾಗಿದ್ದು, ಸದ್ಯಕ್ಕೆ ಅವುಗಳಿಗೆ ತಾತ್ಕಾಲಿಕ ಪರಿಹಾರ ಕಲ್ಪಿಸಲಾಗಿದೆ. ಮುಂದೆ ಮಳೆ ಕಡಿಮೆಯಾದ ಬಳಿಕವೇ ಅದರ ದುರಸ್ತಿ ಕಾರ್ಯ ನಡೆಯಬೇಕಿದೆ. ಈ ಬಾರಿ ಗಾಳಿಯ ತೀವ್ರತೆಯಿಂದ ಸಾಕಷ್ಟು ಕೃಷಿ ಹಾನಿಯೂ ಉಂಟಾಗಿದ್ದು, ಅಡಿಕೆ, ರಬ್ಬರ್ ತೆಂಗಿನ ಮರಗಳು ಧರೆಗುರುಳಿರುವ ಪರಿಣಾಮ ಅವುಗಳಿಗೂ ಪರಿಹಾರ ಕೊಡುವ ನಿಟ್ಟಿನಲ್ಲಿ ತೋಟಗಾರಿಕಾ ಇಲಾಖೆ ಪರಿಶೀಲನೆ ನಡೆಸುತ್ತಿದೆ.
ಬರೆ ಕುಸಿತದಿಂದ ಕೆಲವೊಂದು ಮನೆಗಳಿಗೆ ಆತಂಕ ಎದುರಾಗಿದ್ದು, ಅಂತಹ ಮನೆಮಂದಿ ಈಗಾಗಲೇ ಸ್ಥಳಾಂತರಗೊಂಡಿದ್ದಾರೆ. ಆದರೆ ಅಂತಹ ಮನೆಗಳಿಗೆ ಪರಿಹಾರ ವಿತರಣೆ ಕಷ್ಟಸಾಧ್ಯವಾಗಿದ್ದು, ಹಾನಿಯಾದ ಬಳಿಕವೇ ಪರಿಹಾರ ವಿತರಿಸಬೇಕಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ. ಒಟ್ಟಿನಲ್ಲಿ ಈಗ ಸುರಿದ ತೀವ್ರ ಮಳೆಯು ಜನಜೀವನದ ಮೇಲೆ ಬಲುದೊಡ್ಡ ಪರಿಣಾಮ ಬೀರಿದೆ.
ಈ ಮಳೆಗಾಲದಲ್ಲಿ ಅಪಾಯದ ಮಟ್ಟ ಮೀರಿ ಹರಿದಿರುವ ನೇತ್ರಾವತಿ ನದಿಯ ನೀರಿನ ಮಟ್ಟ ರವಿವಾರ ಬೆಳಗ್ಗೆ 5.6 ಮೀ.ಗೆ ಇಳಿದಿತ್ತು.
ಪುತ್ತೂರು ತಾಲೂಕಿನಲ್ಲಿ ರವಿವಾರ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿತ್ತು. ಸಂಜೆಯವರೆಗೆ ಹಾನಿಯ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ. ಸುಳ್ಯ, ಕಡಬ ತಾಲೂಕಿನಲ್ಲಿ ಶುಕ್ರವಾರ ರಾತ್ರಿ, ಶನಿವಾರ ನಸುಕಿನ ವೇಳೆ ಬೀಸಿದ ಗಾಳಿಗೆ ಮುರಿದ ಮರ ವಿದ್ಯುತ್ ಲೈನ್‌ನ ಮೇಲೆ ಬಿದ್ದು ಆಗಿರುವ ಹಾನಿಯ ದುರಸ್ತಿ ಕಾರ್ಯ ಭರದಿಂದ ನಡೆಯುತ್ತಿದೆ.
ಕಲ್ಲುಗುಡ್ಡೆ ಪ್ರದೇಶದಲ್ಲಿ ರಸ್ತೆ, ಕೃಷಿ ಭೂಮಿಗೆ ನುಗ್ಗಿದ ಗುಂಡ್ಯ ಹೊಳೆಯು ರವಿವಾರ ತನ್ನ ಪಾತ್ರದೊಳಗೇ ಹರಿಯುತ್ತಿದೆ. ಬೆಳ್ತಂಗಡಿಯಲ್ಲೂ ಮಳೆ, ಹಾನಿಯ ಪ್ರಮಾಣ ಕಡಿಮೆಯಾಗಿದೆ.