Advertisement

ಕಡಿಮೆಯಾಯ್ತು ಬೆಳೆವಿಮೆ ನೋಂದಣಿ

07:22 PM Aug 11, 2021 | Team Udayavani |

ಕೊಪ್ಪಳ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಕಳೆದ 2014ರಿಂದ ಜಾರಿಗೆ ಬಂದಿರುವ ಫಸಲ್‌ ಬಿಮಾ ಯೋಜನೆಯು ಜಿಲ್ಲೆಯಲ್ಲಿ ಆರಂಭಿಕ ವರ್ಷದಲ್ಲಿ ರೈತರು ಹೆಚ್ಚೆಚ್ಚು ನೋಂದಣಿ ಮಾಡಿಕೊಂಡಿದ್ದರೆ ಈ ವರ್ಷ ಕಡಿಮೆ ಪ್ರಮಾಣದಲ್ಲಿ ನೋಂದಾಯಿಸಿಕೊಂಡಿದ್ದಾರೆ.

Advertisement

ಇಲ್ಲಿ ಜಾಗೃತಿ ಕೊರತೆಯೋ ಅಥವಾ ವಿಮೆಯ ಮೇಲಿನ ವಿಶ್ವಾಸ ಕಡಿಮೆಯಾಗಿದೆಯೋ ತಿಳಿಯದಂತಾಗಿದೆ. ರೈತರ ಬೆಳೆಗೆ ಭದ್ರತೆ ಸಿಗಲಿ, ಅತಿಯಾದ ಮಳೆ, ಬರ, ಅತಿವೃಷ್ಟಿಯಿಂದ ಬೆಳೆ ಹಾನಿಗೀಡಾದಾಗ ರೈತ ಬೆಳೆನಷ್ಟ ಅನುಭವಿಸಿ ಕೃಷಿಯಿಂದ ವಿಮುಖವಾಗುವುದನ್ನು ತಪ್ಪಿಸಬೇಕು ಎನ್ನುವ ಉದ್ದೇಶದಿಂದ ಕನಿಷ್ಟ ಪಕ್ಷ ಆತನ ಬೆಳೆಯ ಅರ್ಧದಷ್ಟು ಹಣವಾದರೂ ಆತನ ನೆರವಿಗೆ ಬರಲಿ ಎನ್ನುವ ದೂರದೃಷ್ಟಿಯಿಂದಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಫಸಲ್‌ ಬಿಮಾ ಯೋಜನೆ ಜಾರಿಗೊಳಿಸಲಾಗಿದೆ.

ಆದರೆ ಯೋಜನೆಯಡಿ ಜಿಲ್ಲಾದ್ಯಂತ ಒಣ ಬೇಸಾಯದ ರೈತಾಪಿ ವರ್ಗವೇ ಹೆಚ್ಚು ಆಸಕ್ತಿ ವಹಿಸಿ ಬೆಳೆವಿಮೆ ನೋಂದಣಿಗೆ
ಮುಂದಾಗುತ್ತಿದ್ದರು. ಈ ಹಿಂದೆ ಜಿಲ್ಲಾಡಳಿತವೇ ತಾಲೂಕು, ಹೋಬಳಿ, ಗ್ರಾಮ ಹಂತದಲ್ಲಿ ಗ್ರಾಮ ಲೆಕ್ಕಾ ಧಿಕಾರಿಗಳನ್ನು ನಿಯುಕ್ತಿ ಮಾಡಿ
ರೈತರಲ್ಲಿ ವಿಮೆ ಬಗ್ಗೆ ಜಾಗೃತಿ ಮೂಡಿಸಿತ್ತು. ರೈತರು ಬೆಳೆವಿಮೆಗೆ ನೋಂದಾಯಿಸಿಕೊಂಡಿದ್ದರೆ ನಿಮ್ಮ ಬೆಳೆ ಹಾನಿಗೀಡಾದ ಸಂದರ್ಭದಲ್ಲಿ ವಿಮಾ ಕಂಪನಿಯು ಪರಿಹಾರ ಒದಗಿಸಲಿದೆ ಎನ್ನುವ ಕುರಿತಂತೆಯೂ ಜಾಗೃತಿ ಮೂಡಿಸಿತ್ತು. ಇದರಿಂದ ಜಾಗೃತರಾದ ರೈತರು ಸರದಿ ಸಾಲಿನಲ್ಲಿ ನಿಂತು ವಿಮೆಗೆ ನೋಂದಾವಣಿ ಮಾಡಿಸಿಕೊಂಡಿದ್ದರು.

ಇದನ್ನೂ ಓದಿ:ಪೆಟ್ರೋಲಿಯಂ ಉತ್ಪನ್ನ ಕಳವು ಪ್ರಕರಣ : ಪ್ರಮುಖ ಆರೋಪಿ ಸೇರಿ ಮೂವರ ಬಂಧನ

ಆದರೆ ಕಳೆದ ಕೆಲವು ವರ್ಷಗಳಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ರೈತರಿಗೆ ಬರಬೇಕಾದ ವಿಮಾ ಪರಿಹಾರವೂ ಸಕಾಲಕ್ಕೆ ಬಾರದ ಹಿನ್ನೆಲೆಯಲ್ಲಿ ರೈತರೂ ತುಂಬಾ ಬೇಸರಗೊಂಡಿದ್ದರು. ವಿಮೆಗಾಗಿ ಇಲಾಖೆಗಳಿಗೆ ಸುತ್ತಾಡಿ ಬೇಸತ್ತು ಹೋಗಿದ್ದರು. ಇನ್ನು ಕೆಲವೆಡೆ ರೈತರು ನಿಯಮ ಬದ್ಧವಾಗಿ ಬೆಳೆವಿಮೆ ತುಂಬಿದ್ದು,ಬೆಳೆಯ ಸಮೀಕ್ಷೆಯ ವೇಳೆ ಪಿಆರ್‌ ಮಾಡುವ ಎಡವಟ್ಟಿನಿಂದಾಗಿ ತುಂಬಾ ತೊಂದರೆಯಾಗುತ್ತಿತ್ತು. ರೈತರ ಮೆಕ್ಕೆಜೋಳ ಬೆಳೆ ತುಂಬಿದ್ದರೆ, ಪಿಆರ್‌ ಸಜ್ಜೆ ಬೆಳೆ ಸಮೀಕ್ಷೆ ಮಾಡಿಕೊಂಡು ಅಪ್‌ಲೋಡ್‌ ಮಾಡಿ ರೈತರಿಗೆ ವಿಮೆಯೂ ಬಾರದಂತಾದ ಉದಾಹರಣೆಯೂ ಇವೆ.

Advertisement

2016-17ನೇ ಸಾಲಿನಲ್ಲಿಯೇ ಮಿಸ್‌ಮ್ಯಾಚ್‌ ಆದ ಬೆಳೆಯ ವಿಮೆಯ ವ್ಯಾಜ್ಯವು ಇನ್ನೂ ಬಗೆಹರಿದಿಲ್ಲ. ಹೀಗಾಗಿ ಹಲವು ರೈತರು ನಮಗೆ ವಿಮೆಯೇ ಬರುವುದಿಲ್ಲ. ಸುಮ್ಮನೆ ಪ್ರತಿ ವರ್ಷವೂ ತುಂಬಿ ನಮ್ಮ ಹಣವನ್ನು ವ್ಯರ್ಥ ಮಾಡಿಕೊಳ್ಳುವುದು ಬೇಡವೆಂಬ ನಿರ್ಧಾರಕ್ಕೂ ಬಂದಂತಹ ಉದಾಹರಣೆಯಿವೆ.ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಕೃಷಿ ಇಲಾಖೆ ಅಧೀನದಡಿ ಬರುವ ಬೆಳೆಗಳ ಪೈಕಿ 66,092 ರೈತರು ನೋಂದಾವಣಿ ಮಾಡಿಕೊಂಡಿದ್ದಾರೆ. ಇದಕ್ಕಾಗಿ 7.26 ಕೋಟಿ ರೂ. ಬೆಳೆವಿಮಾ ಮೊತ್ತವೂ ಪಾವತಿಯಾಗಿದೆ. ಜಿಲ್ಲೆಯಲ್ಲಿ 3 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ಹೋಲಿಕೆ
ಮಾಡಿದರೆ ಈ ವರ್ಷ ತುಂಬಾ ಕಡಿಮೆಯಿದೆ. ಇನ್ನೂ ತೋಟಗಾರಿಕೆಯು ಸೇರಿ ಒಟ್ಟಾರೆ ಈ ವರ್ಷದಲ್ಲಿ 74 ಸಾವಿರ ರೈತರು ನೋಂದಣಿ ಮಾಡಿಕೊಂಡಿದ್ದಾರೆ.

ಕಳೆದ ವರ್ಷ ಬರೊಬ್ಬರಿ 94,641 ರೈತರು ನೋಂದಣಿ ಮಾಡಿಸಿದ್ದರು. ಇತ್ತೀಚೆಗಿನ ದಿನದಲ್ಲಿ ಬೆಳೆ ಸಮೀಕ್ಷೆ, ಬೆಳೆ ಕಟಾವು ಸಮೀಕ್ಷೆ, ವಿಮೆ ತುಂಬುವಲ್ಲಿನ ತಾಂತ್ರಿಕ ತೊಂದರೆಯಿಂದಾಗಿಯೇ ಬಹುಪಾಲು ರೈತರು ವಿಮೆ ನೋಂದಣಿ ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತಿದ್ದಾರೆ. ಕಳೆದ ಸಾಲಿನಲ್ಲೂ ಕೇವಲ 10 ಸಾವಿರ ರೈತರಿಗೆ ಮಾತ್ರ ವಿಮೆಯ ಪರಿಹಾರ ಮೊತ್ತ ಬಂದಿದೆ. ಈ ಕುರಿತು ಜಿಪಂ, ದಿಶಾ ಸಭೆಗಳಲ್ಲೂ ಚರ್ಚೆಯಾಗಿ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆಯೂ ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಒಟ್ಟಿನಲ್ಲಿ ಬೆಳೆ ವಿಮೆ ನೋಂದಣಿಯಲ್ಲಿ ರೈತರ ಆಸಕ್ತಿ ಕಡಿಮೆಯಾದಂತೆ ಕಾಣುತ್ತಿದೆ. ಕೃಷಿ ಇಲಾಖೆ ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿ ರೈತರಿಗೆ ಆಗುತ್ತಿರುವ ತಾಂತ್ರಿಕ ತೊಂದರೆ ಬೆಳೆ ಸಮೀಕ್ಷೆ, ಕಟಾವು ಸೇರಿ ಇತರೆ ವಿಷಯಗಳ ಕುರಿತು ಜಾಗೃತಿ ಮೂಡಿಸಿದಾಗ ಮಾತ್ರ ವಿಮೆಯ ನೋಂದಣಿ ಪ್ರಮಾಣ ಹೆಚ್ಚಳವಾಗಲಿದೆ.

ಜಿಲ್ಲೆಯಲ್ಲಿ ಈ ವರ್ಷ 75 ಸಾವಿರ ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದಾರೆ. ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಕೊಪ್ಪಳವು ಸ್ವಲ್ಪ ಉತ್ತಮವಾಗಿದೆ. ಅಲ್ಲದೇ, ಕಳೆದ ವರ್ಷ ಸರ್ಕಾರವು ಬೆಳೆ ಸಾಲ ಪಡೆದ ರೈತರು ವಿಮೆ ನೋಂದಾವಣಿ ಮಾಡಿಸುವುದು ಕಡ್ಡಾಯವಲ್ಲ ಎಂದು ಆದೇಶ ಮಾಡಿದ್ದರಿಂದಲೂ ಕೆಲವರು ವಿಮೆ ನೋಂದಣಿಯಿಂದ ಹಿಂದೆಯೂ ಸರಿದಿರಬಹುದು. ಅಲ್ಲದೇ, ಈ ವರ್ಷ ಮಳೆಯೂ ಹೆಚ್ಚಾಗಿದೆ ಅದೂ ಕಾರಣ ಇರಬಹುದು. ಶಿವಾನಂದ, ಜಂಟಿ ಕೃಷಿ ನಿರ್ದೇಶಕ, ಕೊಪ್ಪಳ

-ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next