Advertisement

ತಗ್ಗಿದ ಪ್ರವಾಹ: ಸ್ವಚ್ಛತಾ ಕಾರ್ಯಕ್ಕೆ ಉದ್ಘಾಟನೆ

10:33 PM Aug 14, 2019 | Team Udayavani |

ಕೊಳ್ಳೇಗಾಲ: ಕಾವೇರಿ ಪ್ರವಾಹ ಉಕ್ಕಿ ಹರಿದು ತಾಲೂಕಿನ ನದಿ ತೀರದ ಗ್ರಾಮಗಳ ಜಲಾವೃತಗೊಂಡು ಪ್ರವಾಹದ ನೀರು ತಗ್ಗಿದ ಬಳಿಕ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ಮತ್ತು ನೈರ್ಮಲ್ಯದ ತಂಡದ ವತಿಯಿಂದ ಗ್ರಾಮಗಳ ಸ್ವಚ್ಛತಾ ಕಾರ್ಯಕ್ಕೆ ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ಕೆ.ಸುರೇಶ್‌ ಬುಧವಾರ ತಾಲೂಕಿನ ಹಳೇ ಅಣಗಳ್ಳಿ ಗ್ರಾಮದಲ್ಲಿ ಚಾಲನೆ ನೀಡಿದರು.

Advertisement

ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿ, ತಾಲೂಕಿನ ಪ್ರವಾಹ ಪೀಡಿತ ಗ್ರಾಮಗಳಾದ ಹಳೇ ಅಣಗಳ್ಳಿ, ದಾಸನಪುರ, ಹರಳೆ, ಮುಳ್ಳೂರು, ಹಳೇ ಹಂಪಾಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಾವೇರಿ ನೀರು ತಗ್ಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ಸಾಂಕ್ರಾಮಿಕ ಕಾಯಿಲೆಗಳು ಬರದಂತೆ ತಡೆಯುವ ಸಲುವಾಗಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಎಲ್ಲಾ ಸ್ಥಳೀಯ ಸಂಸ್ಥೆಗಳಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ ಎಂದರು.

ಸ್ವಚ್ಛತಾ ಕಾರ್ಯಕ್ಕೆ ಚಾಲನೆ: ಜಿಲ್ಲೆಯ ಎಲ್ಲಾ ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆ ಮತ್ತು ಗ್ರಾಮ ಪಂಚಾಯಿತಿಗಳು ಸೇರಿದಂತೆ ಮತ್ತು ನೈರ್ಮಲ್ಯ ಸಿಬ್ಬಂದಿಯೊಂದಿಗೆ ಗ್ರಾಮದ ಚರಂಡಿಗಳ ಸ್ವಚ್ಛತೆ, ಗಿಡಗಂಟಿಗಳ ತೆರವು ಮತ್ತು ಕ್ರಿಮಿನಾಶಕಗಳ ಸಿಂಪಡಣೆ ಸೇರಿದಂತೆ ಹಲವಾರು ರೀತಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಗ್ರಾಮಸ್ಥರಿಗೆ ಚಿಕಿತ್ಸೆ: ಈಗಾಗಲೇ ಜಿಲ್ಲಾಡಳಿತ ಆಯೋಜಿಸಿರುವ ಪುನರ್‌ ವಸತಿ ಕೇಂದ್ರದಲ್ಲಿ ಇರುವ ಗ್ರಾಮಸ್ಥರು ಮರಳಿ ಗ್ರಾಮಕ್ಕೆ ಬರುವ ಮುನ್ನ ಸ್ವಚ್ಛತೆ ಮಾಡಿ ಅವರಿಗೆ ಬೇಕಾದ ಆರೋಗ್ಯ ತಪಾಸಣೆ ನಡೆಸಿ ನಂತರ ಸುರಕ್ಷಿತವಾಗಿ ಗ್ರಾಮಕ್ಕೆ ತಂದು ಬಿಡಲಾಗು ವುದು ಮತ್ತು ಗ್ರಾಮಸ್ಥರು ಗ್ರಾಮಕ್ಕೆ ಮರಳಿದ ಬಳಿಕ ಜಿಲ್ಲಾ ಆರೋಗ್ಯ ಇಲಾಖೆಯಿಂದ ಗ್ರಾಮಸ್ಥರಿಗೆ ಚಿಕಿತ್ಸೆಯನ್ನು ನೀಡಲಾಗುವುದು ಎಂದರು.

ಗ್ರಾಮಸ್ಥರು ಅಧಿಕಾರಿಗಳೊಂದಿಗೆ ಸಹಕರಿಸಿ: ಈಗಾಗಲೇ ಅಧಿಕಾರಿಗಳು ಎಲ್ಲಾ ತರಹದ ಸ್ವಚ್ಛತೆಗೆ ಮುಂದಾಗಿದ್ದು, ಗ್ರಾಮಸ್ಥರು ಅಧಿಕಾರಿಗಳೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದ ಅವರು ಯಾವುದೇ ಗ್ರಾಮದಲ್ಲಿ ಅಸ್ವಚ್ಛತೆ ಇದ್ದ ಪಕ್ಷದಲ್ಲಿ ಮಾಹಿತಿ ನೀಡಿದ ಕೂಡಲೇ ಸ್ವಚ್ಛತೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

Advertisement

ಸೂಕ್ತ ಪರಿಹಾರ: ಕಾವೇರಿ ನದಿಯ ನೀರು ಅಪಾಯಮಟ್ಟ ಮೀರಿ ಹರಿದ ಪರಿಣಾಮ ಜಲಾವೃತಗೊಂಡಿದ್ದ ಗ್ರಾಮಸ್ಥರಿಗೆ ವಿವಿದೆಡೆಗಳಲ್ಲಿ ಪುನರ್‌ ವಸತಿ ಕೇಂದ್ರದಲ್ಲಿ ಎಲ್ಲಾ ರೀತಿಯ ಸೌಕರ್ಯಗಳನ್ನು ನಿರ್ಮಾಣ ಮಾಡಿ ಅವರ ಸುರಕ್ಷತೆಯ ಬಗ್ಗೆ ಹೆಚ್ಚು ಕ್ರಮ ವಹಿಸಲಾಗಿದೆ ಎಂದರು.

10 ದಿನದ ಒಳಗಾಗಿ ಪರಿಹಾರ: ನೀರು ಇಳಿಮುಖವಾಗಿ ಗ್ರಾಮ ಸ್ವಚ್ಛತೆಯ ಕಾರ್ಯ ನಡೆಯುತ್ತಿದೆ. ಜಿಲ್ಲಾಧಿಕಾರಿಗಳು ಆದೇಶ ನೀಡಿದ ಬಳಿಕ ಗ್ರಾಮಸ್ಥರನ್ನು ಸಂಬಂಧಿಸಿದ ಗ್ರಾಮಗಳಿಗೆ ಕಳುಹಿಸಿಕೊಡಲಾಗುವುದು ಮತ್ತು ಗ್ರಾಮದಲ್ಲಿ ಉಂಟಾಗಿರುವ ಹಾನಿಯ ಬಗ್ಗೆ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದ್ದು, 10 ದಿನಗಳ ಒಳಗಾಗಿ ಪರಿಹಾರ ವಿತರಿಸಲಾಗುವುದೆಂದು ಉಪ ವಿಭಾಗಾಧಿಕಾರಿ ನಿಖಿತಾ ಎಂ.ಚಿನ್ನಸ್ವಾಮಿ ಹೇಳಿದರು.

ಎಲ್ಲರಿಗೂ ಪರಿಹಾರ ನೀಡುವ ಭರವಸೆ: ಈಗಾಗಲೇ ಕ್ಷೇತ್ರೆದ ಶಾಸಕ ಎನ್‌.ಮಹೇಶ್‌ ಸಭೆ ನಡೆಸಿ ಸೂಕ್ತ ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದ್ದು, ಮನೆ ಮತ್ತು ಬೆಳೆ ಕಳೆದು ಕೊಂಡವರಿಗೆ ಅಂದಾಜು ವೆಚ್ಚ ತಯಾರಿಸಿ ಯಾರನ್ನು ಕಡೆಗಣಿಸದೆ ಎಲ್ಲರಿಗೂ ಸೂಕ್ತ ಪರಿಹಾರ ನೀಡಲಾಗುವುದೆಂದು ಹೇಳಿದರು. ಚಾಮರಾಜನಗರ ನಗರಸಭೆಯ ಆರೋಗ್ಯಾಧಿಕಾರಿ ಶಿವಪ್ರಸಾದ್‌, ಹಳೇ ಅಣಗಳ್ಳಿ ಗ್ರಾಪಂ ಸದಸ್ಯ ರಂಗರಾಜು, ಮುಖಂಡರಾದ ಪುಟ್ಟಸಿದ್ದಯ್ಯ, ಪುಟ್ಟನಂಜ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next