Advertisement

Digital: ಡಿಜಿಟಲ್‌ ಕ್ಷೇತ್ರದಲ್ಲಿನ ಅಂತರ ಕಡಿಮೆಯಾಗಲಿ- ಸಿಎಂ ಸಿದ್ದರಾಮಯ್ಯ

11:59 PM Nov 29, 2023 | Team Udayavani |

ಬೆಂಗಳೂರು: ತಂತ್ರಜ್ಞಾನದ ಸೌಲಭ್ಯಗಳು ಪ್ರತೀ ನಾಗರಿಕರನ್ನೂ ತಲುಪಲು ಡಿಜಿಟಲ್‌ ಕ್ಷೇತ್ರದಲ್ಲಿನ ಅಂತರವನ್ನು ಕಡಿಮೆ ಮಾಡಬೇಕಿದೆ. ಇದಕ್ಕಾಗಿ ದತ್ತಾಂಶ (ಡಾಟಾ) ಮತ್ತು ವಿಶ್ಲೇಷಣೆ (ಅನಾಲಿಟಿಕ್ಸ್‌) ಬಳಸಿಕೊಂಡು ಆಡಳಿತದಲ್ಲಿ ಮಾಹಿತಿ ಯುಕ್ತ ಅಭಿಯಾನ ಕೈಗೊಳ್ಳಲಾ ಗುತ್ತದೆ. ಮುಂದಿನ ಹಂತದ ತಂತ್ರಜ್ಞಾನ ನಾವೀನ್ಯತೆಯ ಬೆಳವ‌ಣಿಗೆಗೆ ಅಗತ್ಯ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಹೂಡಿಕೆಗಳನ್ನು ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

Advertisement

ಬ್ರೇಕಿಂಗ್‌ ಬೌಂಡರೀಸ್‌ ಎನ್ನುವ ಘೋಷವಾಕ್ಯದೊಂದಿಗೆ ಬುಧವಾರ ದಿಂದ ಆರಂಭಗೊಂಡಿರುವ 26ನೇ ಆವೃತ್ತಿಯ ಬೆಂಗಳೂರು ತಂತ್ರಜ್ಞಾನ ಶೃಂಗ (ಬಿಟಿಎಸ್‌)ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಉದ್ಘಾಟನೆಯ ಭಾಗವಾಗಿ ಸರಕಾರದ ಎವಿಜಿಸಿ ಕರಡು ಮುನ್ನೋಟ ಮತ್ತು ಜೈವಿಕ ತಂತ್ರಜ್ಞಾನ ಕಾರ್ಯ ನೀತಿಯ ಪರಿಷ್ಕೃತ ಕರಡನ್ನು ಬಿಡುಗಡೆಗೊಳಿಸಲಾಯಿತು.
ಮಾಹಿತಿ ತಂತ್ರಜ್ಞಾನ ಮತ್ತು ಅದಕ್ಕೆ ಸಂಬಂಧಿಸಿದ ಒಟ್ಟು 5,500ಕ್ಕೂ ಹೆಚ್ಚಿನ ಕಂಪೆನಿಗಳಿಗೆ ಕರ್ನಾಟಕವು ನೆಲೆಯಾಗಿದೆ. ಅಲ್ಲದೆ ಅಂದಾಜು 750 ಬಹುರಾಷ್ಟ್ರೀಯ ಕಂಪೆನಿಗಳು ಇಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ದೇಶದ ರಫ್ತಿಗೆ ರಾಜ್ಯದ ಐಟಿ ವಲಯದ ಕೊಡುಗೆಯು 85 ಬಿಲಿಯನ್‌ ಡಾಲರ್‌ನಷ್ಟಿದೆ. ಡಿಜಿಟಲ್‌ ಕೌಶಲ ಹೊಂದಿರುವ ಪ್ರತಿಭಾವಂತರ ದಂಡು, ಹೊಸತನ ಹಾಗೂ ನವೋದ್ಯಮಗಳಿಗೆ ಪೂರಕವಾಗಿರುವ ವಾತಾವರಣ ಮತ್ತು ಸರಕಾರದ ಕಾರ್ಯನೀತಿಗಳು ಇದಕ್ಕೆ ಅನುಕೂಲಕರವಾಗಿವೆ ಎಂದು ವಿವರಿಸಿದರು.

ಉದ್ಯಮಕ್ಕೆ ಅನುಕೂಲಕರವಾದ ನಮ್ಮ ಕಾರ್ಯನೀತಿಗಳು ಇಲ್ಲಿನ ಕಾನೂನು ಪ್ರಕ್ರಿಯೆಗಳನ್ನು ಸರಳೀಕರಿಸುವ ವಿಚಾರದಲ್ಲಿ ನಾವು ಹೊಂದಿರುವ ಬದ್ಧತೆಯನ್ನು ತೋರಿಸುತ್ತಿವೆ. ಪ್ರಮಾಣಪತ್ರ ಆಧಾರಿತ ಅನುಮೋದನ ವ್ಯವಸ್ಥೆಯಿಂದ ಆರಂಭಿಸಿ ಜಮೀನು ಪಡೆಯುವ ಪ್ರಕ್ರಿಯೆಯಲ್ಲಿ ಸುಧಾರಣೆಯನ್ನು ತರುವಲ್ಲಿಯವರೆಗೆ ನಾವು ಕೈಗೊಂಡಿ ರುವ ಪ್ರತಿಯೊಂದು ಕ್ರಮ ಕೂಡ ಕೈಗಾರಿಕಾ ಸ್ನೇಹಿ ವಾತಾವರಣವನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಿದೆ ಎಂದು ಸಿಎಂ ಹೇಳಿದರು.

ಹೊಸತನ, ಬೆಳವಣಿಗೆಗೆ ಕರ್ನಾಟಕ ಹೆಸರುವಾಸಿ
ಜೈವಿಕ ತಂತ್ರಜ್ಞಾನ ಕುರಿತ ಕರಡು ನೀತಿ ಬಿಡುಗಡೆಗೊಳಿಸಿ ಮಾತನಾಡಿದ ಕೈಗಾರಿಕ ಸಚಿವ ಎಂ.ಬಿ. ಪಾಟೀಲ್‌, ಕರ್ನಾಟಕವು ಹೊಸತನ ಮತ್ತು ಬೆಳವಣಿಗೆಗೆ ಹೆಸರಾಗಿದೆ. ಸುಲಲಿತ ವಾಣಿಜ್ಯ-ವಹಿವಾಟು ಸೂಚ್ಯಂಕದಲ್ಲಿ ಕರ್ನಾಟಕವು ಮುಂಚೂಣಿ ಸ್ಥಾನ ದಲ್ಲಿದೆ. ಹಲವು ಸುಧಾರಣೆಗಳನ್ನು ಜಾರಿಗೆ ತಂದ ಪರಿಣಾಮವಾಗಿ ಇದು ಸಾಧ್ಯವಾಗಿದೆ. ದೇಶದ ಐಟಿ ರಫ್ತಿನಲ್ಲಿ ಕರ್ನಾಟಕದ ಪಾಲು ಶೇ. 40ರಷ್ಟು ಇದೆ ಎಂದರು.

ಎಎಂಡಿ ಸಂಸ್ಥೆಯ ಕಾರ್ಯ ನಿರ್ವಾಹಕ ಉಪಾಧ್ಯಕ್ಷ ಮಾರ್ಕ್‌ ಪೇಪರ್‌ ಮಾಸ್ಟರ್‌, ವಿಪ್ರೋ ಸಂಸ್ಥೆಯ ಅಧ್ಯಕ್ಷ ರಿಷದ್‌ ಪ್ರೇಮ್‌ಜಿ, ಕಿರಣ್‌ ಮಜುಂದಾರ್‌ ಶಾ, ಸ್ಟಾರ್ಟ್‌ ಅಪ್‌ ವಿಷನ್‌ ಗ್ರೂಪ್‌ ಅಧ್ಯಕ್ಷ ಪ್ರಶಾಂತ್‌ ಪ್ರಕಾಶ್‌ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಐಟಿ ಕಾರ್ಯದರ್ಶಿ ಏಕ್‌ ರೂಪ್‌ ಕೌರ್‌, ಐಟಿ ನಿರ್ದೇಶಕ ದರ್ಶನ್‌ ಮತ್ತಿತರರು ಇದ್ದರು.

Advertisement

ಸಿಎಸ್‌ಆರ್‌ ನಿಧಿಗೆ ಡಿಸಿಎಂ ಮನವಿ

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಾತನಾಡಿ, ಗ್ರಾಮೀಣ ಭಾಗದ ಶಾಲೆಗಳ ಗುಣಮಟ್ಟ ಹೆಚ್ಚಿದರೆ ಈ ಭಾಗದ ಮಕ್ಕಳು ಕೂಡ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ನೆರವಾಗುತ್ತದೆ. ಉದ್ಯಮಿಗಳು, ಬಂಡವಾಳ ಹೂಡಿಕೆದಾರರು ಆರ್ಥಿಕವಾಗಿ ಸದೃಢರಾದರೆ, ಸರಕಾರವೂ ಆರ್ಥಿಕವಾಗಿ ಬಲಿಷ್ಠವಾಗುತ್ತದೆ. ನಮ್ಮ ರಾಜ್ಯದಲ್ಲಿ ಹೊಸ ಶಿಕ್ಷಣ ನೀತಿ ತರಲು ಪ್ರಯತ್ನಿಸುತ್ತಿದ್ದೇವೆ. ಗ್ರಾಮೀಣ ಶಾಲೆಗಳ ಗುಣಮಟ್ಟ ಸುಧಾರಿಸಲು ಸಿಎಸ್‌ಆರ್‌ ನಿಧಿ ಮೀಸಲಿಡಬೇಕು. ಈಗಾಗಲೇ ಪ್ರೇಮ್‌ ಜಿ ಸೇರಿ ಹಲವು ಉದ್ಯಮಿಗಳೊಂದಿಗೆ ಚರ್ಚಿಸಿದ್ದು, 2 ಸಾವಿರ ಕೋಟಿ ರೂ.ಗಳನ್ನು ನೀಡಲು ಮುಂದಾಗಿದ್ದಾರೆ ಎಂದು ತಿಳಿಸಿದರು.

ತಂತ್ರಜ್ಞಾನ ಉದ್ಯಮಗಳ ಬೆಳವಣಿಗೆಗೆ ಪೂರಕವಾದ ಕಾರ್ಯಪರಿಸರ ಉಂಟುಮಾಡಲು ಸರಕಾರವು ಆದ್ಯತೆ ಮುಂದುವರಿಸಲಿದೆ. ನವೋದ್ಯಮಿಗಳು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ ಅಗತ್ಯ ನೆರವು ನೀಡಲಾಗುತ್ತದೆ. ಕೌಶಲ್ಯಾಭಿವೃದ್ಧಿ ಮೂಲಕ ಕಾರ್ಯಶಕ್ತಿಯನ್ನು ಹೆಚ್ಚಿಸಲಾಗುತ್ತದೆ. ಈಗಾಗಲೇ ಬಿಡುಗಡೆ ಮಾಡಿರುವ ಕರಡು ನೀತಿಗಳು ಎವಿಜಿಸಿ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರವನ್ನು ಮತ್ತಷ್ಟು ವಿಸ್ತಾರಗೊಳಿಸುವ ಭರವಸೆ ಇದೆ.
– ಪ್ರಿಯಾಂಕ್‌ ಖರ್ಗೆ, ಐಟಿ-ಬಿಟಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next