Advertisement

ಸರಕಾರಿ ಹುದ್ದೆಗಳ ಕಡಿತ, ಅನಗತ್ಯ ವೆಚ್ಚವೂ ತಗ್ಗಲಿ

01:06 AM Dec 01, 2020 | mahesh |

ರಾಜ್ಯ ಸರಕಾರ ಕೊರೊನಾ ವೈರಸ್‌ ದಾಳಿಗೆ ಸಿಲುಕಿಕೊಂಡು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಅದರಿಂದ ಹೊರ ಬರಲು ಆರ್ಥಿಕ ನಿರ್ವಹಣಾ ವೆಚ್ಚ ಕಡಿತ ಮಾಡಲು ಮುಂದಾಗಿದೆ. ಒಂದು ಜವಾಬ್ದಾರಿಯುತ ಸರಕಾರ ಆರ್ಥಿಕವಾಗಿ ಸಂಕಷ್ಟ ಎದುರಿಸುವ ಸಂದರ್ಭದಲ್ಲಿ ಇತಿಮಿತಿಯಲ್ಲಿ ನಡೆದುಕೊಳ್ಳುವುದು ಸರಕಾರ ನಡೆಸುವವರಿಗೆ ಅನಿವಾರ್ಯವಾಗಲಿದೆ. ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯ ಸರಕಾರ ಆರ್ಥಿಕ ಭಾರ ಕಡಿಮೆ ಮಾಡಿಕೊಳ್ಳಲು ಸರಕಾರಿ ಹುದ್ದೆಗಳ ಕಡಿತಕ್ಕೆ ಮುಂದಾಗಿ ರುವುದು ಚರ್ಚೆಗೆ ಗ್ರಾಸವಾಗಿದೆ.

Advertisement

ರಾಜ್ಯದಲ್ಲಿ ಸುಮಾರು 5.6 ಲಕ್ಷ ಮಂಜೂರಾದ ಸರಕಾರಿ ನೌಕರರ ಹುದ್ದೆಗಳಿದ್ದು, ಅವುಗಳಲ್ಲಿ 2.10 ಲಕ್ಷದಷ್ಟು ಹುದ್ದೆಗಳು ಖಾಲಿ ಇವೆ. ಶೇಕಡಾ 40ರಷ್ಟು ಹುದ್ದೆಗಳು ಖಾಲಿ ಇರುವುದರಿಂದ ಕೆಳ ಹಂತದಲ್ಲಿ ಕೆಲಸ ಮಾಡುವ ಸಿಬ್ಬಂದಿ ಇಲ್ಲದೆ ಸರಕಾರದ ಕೆಲಸಗಳು ತ್ವರಿತಗತಿಯಲ್ಲಿ ನಡೆಯುವುದು ಕಷ್ಟ ಸಾಧ್ಯವಾಗುವ
ಸಾಧ್ಯತೆ ಇದೆ.

ರಾಜ್ಯ ಸರಕಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ ಕಾನೂನು ಕೋಶದ 12 ಅಧೀನ ಕಾರ್ಯದರ್ಶಿಗಳು ಹುದ್ದೆಗಳನ್ನು ರದ್ದು ಮಾಡಿದೆ. ಆದರೆ, ಅದೇ ಕೋಶಕ್ಕೆ ನೇಮಕವಾಗಿರುವ ಕಾನೂನು ಕೋಶದ ಮುಖ್ಯಸ್ಥರ ಹುದ್ದೆಗಳ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಈಗಿರುವ ವ್ಯವಸ್ಥೆಯಲ್ಲಿ ಡಿ ದರ್ಜೆಯ ಹುದ್ದೆಗಳ ನೇಮಕ ಪ್ರಕ್ರಿಯೆ ನಡೆಸದೇ ಬಹುತೇಕ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಸರಕಾರ ಪರೋಕ್ಷವಾಗಿ ಮತ್ತೂಂದು ರೀತಿಯಲ್ಲಿ ಅನಗತ್ಯ ವೆಚ್ಚವನ್ನು ಮೈಮೇಲೆ ಹಾಕಿಕೊಳ್ಳುತ್ತಿರುವಂತಿದೆ.

ಹೊರ ಗುತ್ತಿಗೆ ನೌಕರರ ನೇಮಕ ಮಾಡುವುದರಿಂದ ಅಂತಹ ಸಿಬ್ಬಂದಿಯ ಕಾರ್ಯವೈಖರಿ ಅಥವಾ ಲೋಪಗಳಾದಾಗ ಯಾವುದೇ ಜವಾಬ್ದಾರಿಯನ್ನೂ ಹೊರಿಸಲು ಸಾಧ್ಯವಾಗದಿರುವುದರಿಂದ ಹೊರ ಗುತ್ತಿಗೆ ನೇಮಕ ಸಮಾಜ ಹಾಗೂ ಸರಕಾರಿ ಉದ್ಯೋಗಾಕಾಂಕ್ಷಿಗಳಿಗೆ ತೊಂದರೆ ಆಗಿದೆ ಎಂಬ ಮಾತುಗಳು ಕೇಳಿಬಂದಿವೆ.

ಹೊರ ಗುತ್ತಿಗೆ ನೇಮಕ ಹಾಗೂ ನಿವೃತ್ತ ಅಧಿಕಾರಿಗಳ ನೇಮಕ ಪ್ರಕ್ರಿಯೆಯಲ್ಲಿ ಸ್ವ ಹಿತಾಸಕ್ತಿ, ಪ್ರಭಾವ ಮತ್ತು ಹಣದ ದುರುಪಯೋಗದ ಆರೋಪಗಳು ಕೇಳಿ ಬರುತ್ತಿದ್ದು, ಆಡಳಿತ ಸುಧಾರಣೆಯ ಹೆಜ್ಜೆ ಇಟ್ಟಿರುವ ಸರಕಾರ ಈ ಕಡೆಗೂ ಗಮನ ಹರಿಸುವ ಅಗತ್ಯತೆ ಇದೆ.

Advertisement

ಖಾಲಿ ಹುದ್ದೆಗಳನ್ನು ಸರಕಾರ ನೇಮಕ ಮಾಡಿಕೊಳ್ಳದೇ ಕೇವಲ ಹೊರಗುತ್ತಿಗೆ ನೇಮಕಕ್ಕೆ ಆದ್ಯತೆ ನೀಡುವುದರಿಂದ ಗುತ್ತಿಗೆ ನೌಕರರಿಗೂ ಮಾನವ ಸಂಪನ್ಮೂಲ ಒದಗಿಸುವ ಸಂಸ್ಥೆಗಳು ಕಡಿಮೆ ಸಂಬಳ ನೀಡುವ ಕಾರಣ ಅವರಿಂದ ದಕ್ಷತೆಯ ಕಾರ್ಯ ನಿರೀಕ್ಷಿಸುವುದು ಕಷ್ಟವಾಗಲಿದೆ. ಮಾನವ ಸಂಪನ್ಮೂಲ ಒದಗಿಸುವ ಎಜೆನ್ಸಿಗಳು ಸರಕಾರಕ್ಕೆ ಗುತ್ತಿಗೆ ಮೇಲೆ ಒದಗಿಸುವ ನೌಕರರ ಸಂಖ್ಯೆಗೂ, ನೇಮಕದ ದಾಖಲೆಯಲ್ಲಿ ತೋರಿಸುವ ಸಂಖ್ಯೆಗೂ ವ್ಯತ್ಯಾಸವಿರುತ್ತದೆ ಎಂಬ ಆರೋಪವೂ ಇದೆ.

ವೆಚ್ಚ ಕಡಿತ ಮಾಡಲು ಮುಂದಾಗಿರುವ ಸರಕಾರ ಕೆಳ ಹಂತದ ಸರಕಾರಿ ನೌಕರರ ಹುದ್ದೆಗಳನ್ನೇ ರದ್ದು ಪಡಿಸುವುದಕ್ಕೆ ಆದ್ಯತೆ ನೀಡುವ ಬದಲು ಉನ್ನತ ಹುದ್ದೆಯ ಲ್ಲಿರುವ ಅಧಿಕಾರಿಗಳ ಅನಗತ್ಯ ವೆಚ್ಚದ ಮೇಲೆಯೂ ನಿಗಾ ಇಟ್ಟು ನಿಯಂತ್ರಣ ಮಾಡುವುದು. ಅನಗತ್ಯವಾಗಿ ಅವಶ್ಯಕತೆ ಇಲ್ಲದಿದ್ದರೂ ನಿಗಮ ಮಂಡಳಿಗಳ ರಚನೆ ಮಾಡಿ, ಹುದ್ದೆಗಳ ಸೃಷ್ಟಿಸುವುದನ್ನು ನಿಯಂತ್ರಿಸುವ ಕಡೆಗೆ ಆದ್ಯತೆ ನೀಡುವ ಅಗತ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next