ಬಳ್ಳಾರಿ: ಗಾಲಿ ಜನಾರ್ದನ ರೆಡ್ಡಿ ಅವರನ್ನು ದೂರ ಚುನಾವಣಾ ಪ್ರಚಾರದಿಂದ ದೂರ ಇರಿಸಿದ್ದರಿಂದಲೇ ಬಿಜೆಪಿಗೆ ಚುನಾವಣೆಯಲ್ಲಿ ಹಿನ್ನಡೆಯಾಗಿ ಬಹುಮತ ಪಡೆಯಲು ಸಾಧ್ಯವಾಗಿಲ್ಲ.ಇದು ನನ್ನ ಅಭಿಪ್ರಾಯವಲ್ಲ ಜನರ ಅಭಿಪ್ರಾಯ ಎಂದು ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.
ವೀರಶೈವ ಲಿಂಗಾಯತ ರೆಡ್ಡಿ ಸಮಾಜವು ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಆಯೋಜಿಸಿದ್ದ ರೆಡ್ಡಿ ಸಮುದಾಯದ ನೂತನ ಶಾಸಕರಿಗೆ ಅಭಿನಂದನಾ ಸಮಾರಂಭದಲ್ಲೂ ಇದೇ ಅಭಿಪ್ರಾಯ ವ್ಯಕ್ತವಾಯಿತು ಎಂದು ಸೋಮಶೇಖರ ರೆಡ್ಡಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ರೆಡ್ಡಿ ಅವರನ್ನು ಚುನಾವಣಾ ಕಣದಿಂದ ದೂರ ಇರಿಸಿದ್ದರಿಂದ ಹಲವು ಬೆಂಬಲಿಗರು ಮತ್ತು ಕಾರ್ಯಕರ್ತರಿಗೆ ತೀವ್ರ ನೋವಾಗಿತ್ತು. ಇದು ಬಳ್ಳಾರಿ ಮತ್ತು ಕೆಲ ಜಿಲ್ಲೆಗಳಲ್ಲಿ ಹಿನ್ನಡೆಗೆ ಕಾರಣವಾಯಿತು. ಜನರು ಇದನ್ನೇ ಹೇಳುತ್ತಿದ್ದಾರೆ, ಜನರ ಅಭಿಪ್ರಾಯವೇ ನನ್ನ ಅಭಿಪ್ರಾಯ ಎಂದು ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಸುದ್ದಿಗೋಷ್ಠಿಯಲ್ಲಿ ಬಿಜೆಪಿಗೂ ಜನಾರ್ದನ ರೆಡ್ಡಿ ಅವರಿಗೂ ಯಾವುದೇ ಸಂಬಂಧ ಇಲ್ಲ ಅಂದ ಬಳಿಕ ಮೊಳಕಾಲ್ಮೂರಿನಲ್ಲಿ ಶ್ರೀರಾಮುಲು ಪರ ಗಣಿ ಹಗರಣದ ಆರೋಪಿಯಾಗಿರುವ ಜನಾರ್ದನ ರೆಡ್ಡಿ ಅವರು ಬಹಿರಂಗ ಪ್ರಚಾರಕ್ಕಿಳಿದ ವಿಚಾರ ರಾಷ್ಟ್ರೀಯ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಗುರಿಯಾಗಿತ್ತು. ಈ ವಿಚಾರ ಬಿಜೆಪಿಗೆ ತೀವ್ರ ಮುಜುಗರ ಉಂಟು ಮಾಡಿ ಅವರನ್ನು ಪ್ರಚಾರದಿಂದ ದೂರ ಉಳಿಯುವಂತೆ ಸೂಚನೆ ನೀಡಿದ್ದರು.
ಬಿಜೆಪಿ ಉಸ್ತುವಾರಿಯಾಗಿದ್ದ ಮುರಳೀಧರ ರಾವ್ ಅವರು ಸುದ್ದಿಗೋಷ್ಠಿಯಲ್ಲಿ ಎಲ್ಲಿಯಾದರೂ ಜನಾರ್ದನ ರೆಡ್ಡಿ ಅವರು ಬಿಜೆಪಿ ಪ್ರಚಾರ ಸಭೆಯಲ್ಲಿ ಕಾಣಿಸಿಕೊಂಡರೆ ನನಗೆ ವಾಟ್ಸಾಪ್ ಮಾಡಿ ಎಂದಿದ್ದರು.