ಬಳ್ಳಾರಿ: ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರು ಸಿಬಿಐ ಅಧಿಕಾರಿಗಳ ಮೇಲೆ ಕಿರುಕುಳ ಆರೋಪ ಮಾಡಿದ್ದು, “ಒಂದು ತಪ್ಪು ಕೇಸನ್ನು ನನ್ನ ಮೇಲೆ ಹಾಕಿದ್ದಾರೆ. ಅದರಲ್ಲಿ ಸೋಲುವ ಭಯಕ್ಕೆ ಕೇಸ್ ನಡೆಸಲು ಹಿಂದೇಟು ಹಾಕಿ ವಿಳಂಬ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.
ಕನಕ ದುರ್ಗಮ್ಮ ದೇವಸ್ಥಾನದ ಭೇಟಿ ಬಳಿಕ ಮಾತನಾಡಿದ ಅವರು, ಸುಪ್ರೀಂ ಕೊರ್ಟ್ ನಲ್ಲಿ ಪ್ರಕರಣಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಅನ್ನ ಸಂತರ್ಪಣೆ, ವಿಶೇಷ ಅಲಂಕಾರ ಮಾಡಿಸುವುದಾಗಿ ದುರ್ಗಮ್ಮ ತಾಯಿಗೆ ಬೇಡಿಕೊಂಡಿದ್ದೆ. ಹೀಗಾಗಿ ಇವತ್ತು ನಾನು ದೇವಸ್ಥಾನಕ್ಕೆ ಬಂದು ಇಡೀ ದೇಶಕ್ಕೆ ಒಳ್ಳೆದಾಗಲೆಂದು ದೇವಿಗೆ ಪೂಜೆ ಸಲ್ಲಿಸಿದ್ದೇನೆ ಎಂದರು.
ನನ್ನ ಮೇಲೆ ಕೇಸ್ ಹಾಕಿ ಹನ್ನೆರಡು ಹದಿಮೂರು ವರ್ಷವಾಯ್ತು. ಕಳೆದ ಹನ್ನೆರಡು ವರ್ಷಗಳಿಂದ ಕೇಸ್ ಸರಿಯಾಗಿ ನಡೆಯುತ್ತಿಲ್ಲ. ನಾನು ಬಳ್ಳಾರಿಯಲ್ಲಿ ಇರುವುದಕ್ಕೆ ಅಧಿಕಾರಿಗಳು (ಸಿಬಿಐ) ಪದೇ ಪದೇ ಕೋರ್ಟ್ ನಲ್ಲಿ ಪ್ರಸ್ತಾಪ ಮಾಡುತಿದ್ದಾರೆ. ಹೀಗಾಗಿ ನಾನು ಪ್ರತಿ ದಿನ ಟ್ರಯಲ್ ನಡೆಸುವಂತೆ ಕೊರ್ಟ್ ಗೆ ಕೇಳಿದ್ದೇನೆ. ಮೂರ್ನಾಲ್ಕು ತಿಂಗಳಲ್ಲೇ ಕೇಸ್ ಇತ್ಯರ್ಥ ಮಾಡಿ ಎಂದು ಕೇಳಿದ್ದೇನೆ. ನನ್ನ ಕೊನೆ ಉಸಿರು ಇರುವುವರೆಗೂ ನಾನು ಬಳ್ಳಾರಿಯಲ್ಲಿರಬೇಕು. ಕಳೆದ ಹದಿನಾಲ್ಕು ತಿಂಗಳಿಂದ ನಾನು ಕೇವಲ ಮನೆ ಹಾಗೂ ದೇವಸ್ಥಾನಗಳಿಗೆ ಓಡಾಡುತ್ತಿದ್ದೇನೆ. ನನಗೆ ಸುಪ್ರಿಂ ಕೊರ್ಟ್ ಸಂಪೂರ್ಣವಾಗಿ ಬಳ್ಳಾರಿಯಲ್ಲಿರಲು ಅನುಮತಿ ಕೊಟ್ಟಿದೆ. ಕಳೆದ ಹದಿನಾಲ್ಕು ತಿಂಗಳಿಂದ ನಾನು ಬಳ್ಳಾರಿಯಲ್ಲೇ ಇದ್ದೇನೆ. ಆದರೆ ಕೋರ್ಟ್ ನಲ್ಲಿ ವಾದ ಮಾಡುವ ಸಂದರ್ಭದಲ್ಲಿ ನಾನು ಇಲ್ಲಿರುವುದನ್ನು ಸಿಬಿಐ ಆಕ್ಷೇಪ ಮಾಡುತ್ತಿದೆ ಎಂದರು.
ಇದನ್ನೂ ಓದಿ:ಅತಿಯಾದ ಗ್ರಾಫಿಕ್ಸ್: ʼಬ್ರಹ್ಮಾಸ್ತ್ರʼದ ಬಳಿಕ ʼಆದಿಪುರುಷ್ʼಗೂ ತಟ್ಟಿತು ಟ್ರೋಲ್ ಬಿಸಿ
ಆದರೆ ನಮ್ಮ ಲಾಯರ್ ಗಳು ವಾದ ಮಾಡಿ ರೆಡ್ಡಿ ಮಗಳಿಗೆ ಹೆರಿಗೆ ಆಗಿದೆ, ಈ ಸಂದರ್ಭದಲ್ಲಿ ಆಕ್ಷೇಪ ಮಾಡುವುದು ತಪ್ಪು ಎಂದು ತಿಳಿಸಿದ್ದಾರೆ. ಕೇಸ್ ಪ್ರತಿ ದಿನ ನಡೆಯಬೇಕಾದರೆ ರೆಡ್ಡಿ ಬಳ್ಳಾರಿಯಲ್ಲಿ ಇರಬಾರದೆಂದು ಸಿಬಿಐ ಆಕ್ಷೇಪ ಮಾಡುತ್ತಿದ್ದಾರೆ. ನ್ಯಾಯ ವ್ಯವಸ್ಥೆ ಮೇಲೆ ಸಂಪೂರ್ಣವಾದ ನಂಬಿಕೆ ಇದೆ. ಇದೇ ಕಾರಣದಿಂದ ನಾನು ನಿಮ್ಮ ಮುಂದೆ ನಿಂತು ಮಾತಾಡುತ್ತಿದ್ದೇನೆ ಎಂದರು.
ರಾಜಕೀಯಕ್ಕೆ ಕಂಬ್ಯಾಕ್ ವಿಚಾರವಾಗಿ ಮಾತನಾಡಿದ ಅವರು, ಮಗಳ ಮದುವೆಯಾಯ್ತು, ಇಬ್ಬರು ಮೊಮ್ಮಕ್ಕಳಾದರು, ಮಗ ಡಿಗ್ರಿ ಮುಗಿಸಿಕೊಂಡಿದ್ದಾನೆ. ಅವನಿಗೆ ಚಿತ್ರರಂಗದಲ್ಲಿ ಇಂಟ್ರೆಸ್ಟ್ ಇದೆ, ಅದರಲ್ಲಿ ಬದುಕು ಕಂಡುಕೊಂಡಿದ್ದಾನೆ. ನನ್ನ ವಿಚಾರದಲ್ಲಿ ತಾಯಿ ದುರ್ಗಾ ಮಾತೆ ಒಳ್ಳೆ ದಾರಿ ತೋರಿಸುತ್ತಾಳೆ. ದೇವಸ್ಥಾನದಲ್ಲಿ ನನಗೆ ರಾಜಕೀಯ ಮಾತಾಡಲು ಇಷ್ಟ ಇಲ್ಲ. ಆ ತಾಯಿ ಯಾವ ದಾರಿ ತೋರಿಸುತ್ತಾಳೆ ಹಾಗೆ ಮಾಡುವೆ. ಸಮಯ ಬಂದಾಗ ನಾನು ಹೊರಗಡೆ ಬರುವೆ ಎಂದರು.