ಹಗರಿಬೊಮ್ಮನಹಳ್ಳಿ: ತಾಲೂಕಿನಲ್ಲಿ ಹತ್ತಿ ಬೆಳೆದ ರೈತರು ಬೆಲೆ ಕುಸಿತ, ಇಳುವರಿ ಕುಂಠಿತ, ಕೆಂಪು ರೋಗಕ್ಕೆ ತುತ್ತಾಗಿರುವ ಹತ್ತಿ ಬೆಳೆಗಾರರಿಗೆ ಹಾಕಿದ ಬಂಡವಾಳವೂ ಕೈಗೆ ಸಿಗದಂತಾಗಿದೆ.
ಆರಂಭದಲ್ಲಿ ಹತ್ತಿ ಬೆಳೆ ನಳನಳಿಸುತ್ತ ಈ ಬಾರಿ ಬಂಪರ್ ಬೆಳೆ ಬರುತ್ತದೆ ಎಂದು ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ, ಬಿಸಿಲಿನ ಪ್ರಮಾಣ ಕಡಿಮೆಯಾದಂತೆ ಹತ್ತಿ ಬೆಳೆಗಾರರ ಮುಖಗಳು ಬಾಡಿದಂತಾಗಿವೆ. ತಾಲೂಕಿನ ಬನ್ನಿಗೋಳ, ಕೃಷ್ಣಪುರ, ತಂಬ್ರಹಳ್ಳಿ, ಹಂಪಸಾಗರ, ಕೋಗಳಿ, ಬಸರಕೋಡು, ಚಿಲುಗೋಡು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರೈತರು ಅಧಿಕ ಹತ್ತಿಯನ್ನು ಬೆಳೆದಿದ್ದು ನಷ್ಟದ ಭೀತಿಯಲ್ಲಿದ್ದಾರೆ. ಕಳೆದ ಸಾಲಿನಲ್ಲಿ ಹತ್ತಿಗೆ 5 ಸಾವಿರಕ್ಕೂ ಹೆಚ್ಚು ಬೆಲೆ ನಿಗದಿಯಾಗಿದ್ದರಿಂದ ಬೆಳೆಗಾರರು ನಿಟ್ಟುಸಿರು ಬಿಟ್ಟಿದ್ದರು. ಈ ಬಾರಿ 4 ಸಾವಿರಕ್ಕೆ ಹತ್ತಿ ದರ ಇಳಿದಿದ್ದರಿಂದ ಹತ್ತಿ ಬೆಳೆಗಾರರು ಹತ್ತಿ ಬೆಳೆ ಸಹವಾಸ ಬೇಡ ಎಂಬಂತಾಗಿದ್ದಾರೆ. ಹತ್ತಿ ದರದ ಕುಸಿತದ ಜೊತೆಗೆ ಹತ್ತಿ ಬಿಡಿಸುವ ಕೂಲಿಕಾರರು ಕೂಲಿ ಮೊತ್ತವನ್ನು ದಿಢೀರ್ ಹೆಚ್ಚಿಸಿರುವುದರಿಂದ ಜಿಟಿಜಿಟಿ ಮಳೆಗೆ ಹತ್ತಿ ಗಿಡದಲ್ಲಿಯೇ ಕೊಳೆತು ಹೋಗಲಾರಂಭಿಸಿದೆ.
ಮಾರುಕಟ್ಟೆ ಕೊರತೆ: ಹತ್ತಿ ಬೆಳೆಯನ್ನು ತಾಲೂಕಿನಲ್ಲಿ ಹೆಚ್ಚು ಬೆಳೆಯುತ್ತಿದ್ದರೂ ಈವರೆಗೂ ಹತ್ತಿ ಮಾರುಕಟ್ಟೆ ಮಾಡುವ ಗೊಡವೆಗೆ ಜನಪ್ರತಿನಿಧಿಗಳು ಹೋಗಿಲ್ಲ. ಬಳ್ಳಾರಿ, ಕೊಟ್ಟೂರು ವರ್ತಕರು ಹತ್ತಿ ಖರೀದಿ ಮಾಡುತ್ತಿದ್ದು ಅಗ್ಗಕ್ಕೆ ಮುಗ್ಗಿನ ಜೋಳ ಎಂಬಂತೆ ಖರೀದಿ ಮಾಡುತ್ತಾರೆ. ರೈತರ ಹತ್ತಿ ಖಾಲಿಯಾದಂತೆಲ್ಲಾ ಹತ್ತಿ ದರ ಗಗನಕ್ಕೆ ಏರುತ್ತಿರುವುದು ರೈತರ ಕೆಂಗಣ್ಣಿಗೆ ಗುರಿಯಾಗಿದೆ. ಇಂಥ ಕೊರೊನಾದಂಥ ಸಂಕಷ್ಟದ ಪರಿಸ್ಥಿತಿಯಲ್ಲಿ ಬೆಳೆಗಾರರ ಸಂಕಷ್ಟವನ್ನು ಯಾರು ಕೇಳದಾಗಿದ್ದಾರೆ.
ರೋಗಬಾಧೆ: ಮುಂಗಾರು ಆರಂಭದಲ್ಲಿ ಮಳೆಯಾದ್ದರಿಂದ ಜೊತೆಗೆ ಬಿಸಿಲು ಉತ್ತಮವಾಗಿ ಬಿದ್ದಿದ್ದರಿಂದ ಹತ್ತಿ ಬೆಳೆ ಸೊಂಪಾಗಿ ಬೆಳೆದಿದ್ದವು. ನಂತರ ಬಿಸಿಲು ವಾತಾವರಣ ಕಡಿಮೆಯಾಗಿ, ಜಿಟಿಜಿಟಿ ಮಳೆ ಸುರಿದಿದ್ದರಿಂದ ಹತ್ತಿ ಬೆಳೆಗಳು ಸಂಪೂರ್ಣ ಕೆಂಪು ರೋಗಕ್ಕೆ ತಿರುಗಿದವು. ಬೆಳೆಗಾರರು ಸಾಕಷ್ಟು ಔಷಧ ಸಿಂಪಡಣೆ ಮಾಡಿದರೂ ಸಾರ್ಥಕವಿಲ್ಲದಂತಾಗಿದೆ. ಮೂರು ನಾಲ್ಕು ಬಾರಿ ಬಿಡಿಕೆಗೆ ಬರುತ್ತಿದ್ದ ಹತ್ತಿ ಕೆಂಪು ರೋಗಕ್ಕೆ ತಿರುಗಿ ಕೇವಲ ಒಂದು ಬಾರಿ ಹತ್ತಿ ಬಿಡಿಸಿ ಅರಗುವಂತಾಗಿದೆ.
ತಾಲೂಕಿನಲ್ಲಿ 671ಹೆಕ್ಟೇರ್ ಹತ್ತಿ ಬೆಳೆಯಲಾಗಿದೆ. ತಂಬ್ರಹಳ್ಳಿ ಹಂಪಸಾಗರ ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚು ಬೆಳೆಯಲಾಗಿದೆ. ಕಾಯಿಕೊರಕ ಹುಳು, ರಸಹೀರುವ ಕೀಟ, ಕೆಂಪು ರೋಗ ಹೆಚ್ಚಾಗಿ ಬಿದ್ದಿದ್ದರಿಂದ ಹತ್ತಿ ಇಳುವರಿ ಪ್ರಮಾಣ ಕುಂಠಿತವಾಗಿದೆ.
– ಜೀವನ್‌ಸಾಬ್,ಕೃಷಿ ಸಹಾಯಕ ನಿರ್ದೇಶಕರು ಹಗರಿಬೊಮ್ಮನಹಳ್ಳಿ
ಹತ್ತಿ ಬೆಳೆ ಪ್ರತಿ ಎಕರೆಗೆ 20 ಸಾವಿರ ರೂ. ಖರ್ಚು ಬರುತ್ತದೆ. ಈ ಬಾರಿ ಹತ್ತಿಗೆ ಕಡಿಮೆ ಬೆಲೆ ಇರುವುದರಿಂದ ಲಾಭ ತೆಗೆಯೋದು ಬಹಳ ಕಷ್ಟ. ಹತ್ತಿ ಬಿಡಿಸುವ ಕೂಲಿ ಕಾರ್ಮಿಕರ ಸಮಸ್ಯೆ ಹೆಚ್ಚು ಇರುವುದರಿಂದ ಹತ್ತಿ ಗಿಡದಲ್ಲಿ ಕೊಳೆತು ಹೋಗುತ್ತಿದೆ. ಸರಕಾರ ಹತ್ತಿ ಬೆಳೆಗಾರರಿಗೆ ಬೆಳೆನಷ್ಟ ಪರಿಹಾರ ಕೊಟ್ಟರೆ ಕೋವಿಡ್ ಸಂಕಷ್ಟದಲ್ಲಿ ನೆನೆಸಿಕೊಳ್ಳುತ್ತೇವೆ.
-ಮೈಲಾರ ಚನ್ನಬಸವ, ಹತ್ತಿ ಬೆಳೆಗಾರ
-ಸುರೇಶ ಯಳಕಪ್ಪನವರ