Advertisement

ಮಳೆಯ ಆರ್ಭಟ: ಜು. 14ರ ವರೆಗೆ ಕರಾವಳಿಗೆ ರೆಡ್‌ ಅಲರ್ಟ್‌

11:01 PM Jul 10, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಕರಾವಳಿ ಜಿಲ್ಲೆಯಲ್ಲಿ ಜು.14ರ ವರೆಗೆ ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಿಸಿದೆ.

Advertisement

ಈಗಾಗಲೇ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ನಿರಂತರವಾಗಿ ದಿನಪೂರ್ತಿ ಭಾರೀ ಮಳೆ ಸುರಿಯುತ್ತಿದ್ದು, ಮುಂದಿನ ನಾಲ್ಕು ದಿನಗಳ ಕಾಲ ಮಳೆ ಇದೇ ರೀತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ, ಉತ್ತರ ಒಳನಾಡು ಜಿಲ್ಲೆಗಳಾದ ಬೆಳಗಾವಿ, ಬೀದರ್‌, ಧಾರವಾಡ, ಹಾವೇರಿ, ಕಲಬುರಗಿ ಜಿಲ್ಲೆಗಳಲ್ಲಿಯೂ ಮಳೆ ಪ್ರಕೋಪ ಮುಂದುವರಿದಿದ್ದು, ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಉಳಿದ ಜಿಲ್ಲೆಗಳಲ್ಲೂ ಸಾಧಾರಣ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.

ಪ್ರವಾಸಿಗನ ರಕ್ಷಣೆ
ಶ್ರೀರಂಗಪಟ್ಟಣ: ಇಲ್ಲಿನ ಕಾವೇರಿ ನದಿಗೆ ಸ್ನಾನಕ್ಕೆಂದು ಇಳಿದು ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಓರ್ವ ಪ್ರವಾಸಿಗನನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಬೆಳಗಾವಿಯಲ್ಲಿ ಮತ್ತೆ ನೆರೆ ಭೀತಿ
ಪಶ್ಚಿಮ ಘಟ್ಟ ಪ್ರದೇಶದ ಖಾನಾಪುರ, ಬೆಳಗಾವಿ ಹಾಗೂ ನೆರೆಯ ಮಹಾರಾಷ್ಟ್ರದ ಅರಣ್ಯ ಪ್ರದೇಶಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಹಿರಣ್ಯಕೇಶಿ, ದೂಧ್‌ಗಂಗಾ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ನದಿ ತೀರದ ಗ್ರಾಮಗಳ ಜನರು ಪ್ರವಾಹದ ಆತಂಕದಲ್ಲಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಆರು ಸೇತುವೆಗಳು ಜಲಾವೃತಗೊಂಡಿವೆ.

Advertisement

ದೂಧ್‌ಗಂಗಾ ನದಿ ನೀರಿನ ಮಟ್ಟ ಒಂದೇ ದಿನ ಎರಡು ಅಡಿಯಷ್ಟು ಏರಿಕೆಯಾಗಿದ್ದು, ಸುಮಾರು 18 ಸಾವಿರ ಕ್ಯೂಸೆಕ್‌ ನೀರು ಕೃಷ್ಣಾ ನದಿಗೆ ಸೇರುತ್ತಿದೆ. ಜತೆಗೆ ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್‌ ಮೂಲಕವೂ ಕೃಷ್ಣಾ ನದಿಗೆ 57 ಸಾವಿರ ಕ್ಯೂಸೆಕ್‌ ನೀರು ಬರುತ್ತಿದ್ದು, ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೃಷ್ಣಾ ನದಿಗೆ ಒಟ್ಟು 75 ಸಾವಿರ ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು, ಪ್ರವಾಹದ ಅತಂಕ ಮತ್ತಷ್ಟು ಹೆಚ್ಚಿದೆ.

ಇನ್ನೊಂದೆಡೆ ಮಹಾರಾಷ್ಟ್ರದ ಅಂಬೋಲಿ ಮತ್ತು ಸಾವಂತವಾಡಿ ಅರಣ್ಯ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಘಟಪ್ರಭಾ ನದಿಗೆ 28 ಸಾವಿರ ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಇದರಿಂದ ಜಿಲ್ಲೆಯ ಪ್ರಮುಖ ಜಲಾಶಯವಾಗಿರುವ ಹಿಡಕಲ್‌ ಜಲಾಶಯ ಮಟ್ಟದಲ್ಲಿ ಒಂದೇ ದಿನ ಐದು ಅಡಿಗಳಷ್ಟು ಏರಿಕೆ ಕಂಡುಬಂದಿದೆ. ಒಟ್ಟು 2,175 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 2,108 ಅಡಿಗಳಷ್ಟು ನೀರು ಸಂಗ್ರಹವಾಗಿದೆ.

ಖಾನಾಪುರ ತಾಲೂಕಿನ ಕಣಕುಂಬಿ ಅರಣ್ಯ ಪ್ರದೇಶ ಮತ್ತು ಜಾಂಬೋಟಿ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಮಲಪ್ರಭಾ ನದಿಯ ಒಳಹರಿವಿನ ಪ್ರಮಾಣ ಗಣನೀಯ ಹೆಚ್ಚಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಮಲಪ್ರಭಾ ಜಲಾಶಯಕ್ಕೆ 6,700 ಕ್ಯೂಸೆಕ್‌ ನೀರು ಬರುತ್ತಿದ್ದು, ಈಗ 2,056.40 ಅಡಿಗಳಷ್ಟು ನೀರು ಸಂಗ್ರಹವಾಗಿದೆ.

ಕೆಆರ್‌ಎಸ್‌ ಭರ್ತಿಗೆ ಕ್ಷಣಗಣನೆ
ಕಾವೇರಿ ಕೊಳ್ಳದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣರಾಜಸಾಗರ ಜಲಾಶಯ 15 ವರ್ಷ ಬಳಿಕ ಇದೇ ಮೊದಲ ಬಾರಿಗೆ ಜುಲೈ ಮೊದಲ ವಾರದಲ್ಲೇ ಭರ್ತಿಯಾಗುತ್ತಿದೆ. 2009ರ ಜುಲೈ 24ರಂದು ಹಾಗೂ 2018ರಲ್ಲಿ ಜು.20ರಂದು ಸಂಪೂರ್ಣ ಭರ್ತಿಯಾಗಿತ್ತು.

ಹದಿನಾರು ಕಾಲು
ಮಂಟಪ ಮುಳುಗಡೆ
ಕಪಿಲಾ ನದಿ ಈ ವರ್ಷ ಇದೇ ಮೊದಲ ಬಾರಿಗೆ ಮೈದುಂಬಿ ಹರಿಯುತ್ತಿದೆ. ನದಿಯ ಮೇಲ್ಭಾಗದಲ್ಲಿರುವ ಕಪಿಲಾ ಜಲಾಶಯದಿಂದ 40 ಕ್ಯೂಸೆಕ್‌ ನೀರು ಬಿಟ್ಟ ಕಾರಣ ನಂಜನಗೂಡು ನಗರದ ಶ್ರೀಕಂಠೇಶ್ವರ ಸ್ನಾನ ಘಟ್ಟದಲ್ಲಿರುವ ಐತಿಹಾಸಿಕ ಹಿನ್ನೆಲೆಯುಳ್ಳ ಹದಿನಾರು ಕಾಲು ಮಂಟಪ ಮುಳುಗಡೆಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next