ಬೀದರ: ಜಿಲ್ಲೆಯಲ್ಲಿ ಅ.13ರಿಂದ ಮುಂದಿನ 48 ಗಂಟೆಗಳ ಅವಧಿಯಲ್ಲಿ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಮಂಗಳವಾರ ನಗರದ ಡಿಸಿ ಕಚೇರಿ ಸಭಾಂಗಣದಲ್ಲಿವಿಪತ್ತು ನಿರ್ವಹಣಾ ಸಮಿತಿ ತುರ್ತು ಸಭೆ ನಡೆಸಿ ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಪರಿಸ್ಥಿತಿ ಸನ್ನಿವೇಶ ಅರಿತು ಕೆಲಸ ನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಬೀದರ ಸೇರಿ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದೆ. ಜಿಲ್ಲಾದ್ಯಂತ ಮುಂದಿನ ಐದು ದಿನಗಳಲ್ಲಿ ಭಾರೀ ಮಳೆ ಬೀಳುವ ಹಾಗೂ ಗರಿಷ್ಠ ಉಷ್ಣಾಂಶ 24-28 ಸೆಲ್ಸಿಯಸ್ ಕನಿಷ್ಟಉಷ್ಣಾಂಶ 18-19 ಸೆಲ್ಸಿಯಸ್ ಇರುವ ಮತ್ತುಪ್ರತಿ ಗಂಟೆಗೆ ಗಾಳಿಯ ವೇಗವು 3-7 ಕಿ.ಮೀ ಚಲಿಸುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಇದೆ. ಈ ವಿಷಯ ಯಾರೊಬ್ಬರೂ ಲಘುವಾಗಿ ತೆಗೆದುಕೊಳ್ಳಬಾರದೆಂದು ಅಧಿಕಾರಿಗಳಿಗೆ ಸೂಚಿಸಿದರು.
ಸತತ ಮಳೆಯಿಂದ ಜಿಲ್ಲೆಯಲ್ಲಿನ ಕೆರೆ-ಕಟ್ಟೆಗಳಿಂದ ತುಂಬುವ ಡ್ಯಾಂಗಳಲ್ಲಿನ ನೀರು ಗೇಟ್‌ಗಳಿಂದ ಹೊರಬಿಡುವ ಮುನ್ನ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಜಲಾಶಯ ಸುತ್ತಲಿನ ಜನರಿಗೆ ಕಡ್ಡಾಯ ಸೂಚನೆ ನೀಡಬೇಕು. ಮಳೆ ಹಿನ್ನೆಲೆಯಲ್ಲಿ ಸುಗಮ ಸಂಚಾರ- ಭದ್ರತೆ ದೃಷ್ಟಿಯಿಂದ ಜಿಲ್ಲಾದ್ಯಂತ ಪೊಲೀಸ್ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು ಎಂದರು.
ಬೀದರ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಹಿನ್ನೆಲೆಯಲ್ಲಿ 24 ಗಂಟೆಗಳ ಸಮಯ ಅಧಿಕಾರಿಗಳು ಅಲರ್ಟ್ ಆಗಿರಬೇಕು. ಯಾವುದೇ ನೆಪ ಹೇಳಬಾರದು. ಹಾನಿ ಸಂಭವಿಸಿದ ಕೂಡಲೇ ಮೇಲಧಿ ಕಾರಿಗಳಿಗೆ ತಿಳಿಸಿ ತುರ್ತಾಗಿ ವರದಿ ಮಾಡಬೇಕು. ಅತಿವೃಷ್ಟಿಯಿಂದಾದ ಬೆಳೆ -ಜೀವ ಹಾನಿ ಪ್ರಕರಣಗಳಿಗೆ ವಿಳಂಬವಿಲ್ಲದೇ ಪರಿಹಾರ ಕಲ್ಪಿಸಲು ಒತ್ತು ಕೊಡಬೇಕು ಎಂದು ಹೇಳಿದರು.
ಪೌರಾಯುಕ್ತರಿಗೆ ಸೂಚನೆ: ಬೀದರ ಸಿಟಿಯ ರಾಜ ಕಾಲುವೆಯಲ್ಲಿ ಕಸ ತೆಗೆಯದೇ ಇರುವುದರಿಂದ ರಸ್ತೆ ಮೇಲೆ ನೀರು ಹರಿದು ತೊಂದರೆಯಾಗುತ್ತಿದೆ.ಇನ್ನೂ ಹೆಚ್ಚು ಮಳೆಯಾಗುವ ಮೂನ್ಸೂಚನೆ ಇರುವುದರಿಂದ ನಗರಾದ್ಯಂತ ಎಲ್ಲ ಕಡೆಗಳಲ್ಲಿನ ಗಟಾರುಗಳಲ್ಲಿ ನೀರು ಸರಾಗವಾಗಿ ಹರಿಯುವಂತೆಕಸ ತೆಗೆಯುವ ಕಾರ್ಯಕ್ಕೆ ಆದ್ಯತೆ ನೀಡಬೇಕೆಂದು ಪೌರಾಯುಕ್ತರಿಗೆ ನಿರ್ದೇಶನ ನೀಡಿದರು.
ಈ ವೇಳೆ ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಎಸ್‌ಪಿ ನಾಗೇಶ ಡಿ.ಎಲ್., ಉಪ ಅರಣ್ಯ ಸಂರಕ್ಷಣಾಧಿ ಕಾರಿ ಶಿವಶಂಕರ ಎಸ್., ಸಹಾಯಕ ಆಯುಕ್ತರಾದ ಗರೀಮಾ ಪನವಾರ, ಭುವನೇಶ ಪಾಟೀಲ, ಅಪರ ಡಿಸಿ ರುದ್ರೇಶ ಗಾಳಿ, ಡಿಯುಡಿಸಿ ಪಿಡಿ ಶರಣಬಸಪ್ಪ ಕೋಟಪ್ಪಗೋಳ ಇತರರು ಇದ್ದರು.