Advertisement

ನೇಮಕಾತಿ ಪರೀಕ್ಷೆ ಸುಸೂತ್ರ ನಡೆಸಿ

01:41 PM Feb 03, 2018 | |

ಬೀದರ: ಕೆಪಿಎಸ್‌ಸಿಯಿಂದ ಪ್ರಥಮ ದರ್ಜೆ ಸಹಾಯಕರು ಮತ್ತು ದ್ವಿತೀಯ ದರ್ಜೆ ಸಹಾಯಕರ ನೇಮಕಾತಿ ಪರೀಕ್ಷೆಗಳನ್ನು ಫೆ.4, 10 ಮತ್ತು 11ರಂದು ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ. ನಿಯೋಜಿತ ಅಧಿಕಾರಿ ಮತ್ತು ಸಿಬ್ಬಂದಿ ಯಾವುದೇ ಲೋಪಗಳಿಗೆ ಆಸ್ಪದ ನೀಡದಂತೆ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಬೇಕೆಂದು ಅಪರ ಜಿಲ್ಲಾಧಿಕಾರಿ ಡಾ| ಡಿ.ಷಣ್ಮುಖ ಹೇಳಿದರು.

Advertisement

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪರೀಕ್ಷೆಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪರೀಕ್ಷೆ ದಿನಗಳಂದು ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್‌ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತದೆ. ಯಾವುದೇ ರೀತಿಯ ಅಹಿತರಕ ಘಟನೆಗಳು ಜರುಗದಂತೆ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಅಗತ್ಯ ಪೊಲೀಸ್‌ ಬಂದೋಬಸ್ತ್ ಒದಗಿಸಲಾಗುತ್ತದೆ. ಪರೀಕ್ಷೆ
ವೇಳೆಯಲ್ಲಿ ಪರೀಕ್ಷಾ ಕೇಂದ್ರದ ಸುತ್ತಲಿನಲ್ಲಿರುವ ಜೆರಾಕ್ಸ್‌ ಅಂಗಡಿಗಳನ್ನು ತೆರೆದಿಡದಂತೆ ಸೂಚನೆ ನೀಡಲಾಗುತ್ತದೆ.

ನಿಯೋಜಿತ ಅಧಿಕಾರಿಗಳು ಮುಂಚಿತವಾಗಿ ಕೇಂದ್ರಕ್ಕೆ ಭೇಟಿ ನೀಡಿ ಅಗತ್ಯ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು. ಅಭ್ಯರ್ಥಿಗಳು ಪರೀಕ್ಷಾ ಕೋಣೆಯಲ್ಲಿ ಮೊಬೈಲ್‌ ಫೋನ್‌, ಕ್ಯಾಲ್ಕುಲೇಟರ್‌, ಗಡಿಯಾರ, ಇನ್ನಿತರೆ ನಿಷೇಧಿತ ಉಪಕರಣಗಳನ್ನು ತರದಂತೆ ಎಚ್ಚರ ವಹಿಸಬೇಕು. ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಬೆಂಚುಗಳ ಜೋಡಣೆ, ಅಭ್ಯರ್ಥಿಗಳಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸುವಲ್ಲಿ ಲೋಪವಾಗದಂತೆ ನೋಡಿಕೊಳ್ಳಬೇಕು. ಪರೀಕ್ಷೆಯ ಆರಂಭದಿಂದ ಅಂತ್ಯದವರೆಗೆ ಎಲ್ಲಾ ಚಲನವಲನಗಳನ್ನು
ಚಿತ್ರೀಕರಣಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಡಿಡಿಪಿಐ ಇನಾಯತ್‌ ಅಲಿಸಿಂಧೆ ಮಾತನಾಡಿ, ಈ ಪರೀಕ್ಷೆಯಲ್ಲಿ ಕೆಲವು ಬದಲಾವಣೆಗಳನ್ನು ತರಲಾಗಿದೆ. ಪ್ರಶ್ನೆ ಪತ್ರಿಕೆ ಹಾಗೂ ಓಎಂಆರ್‌ ಹಾಳೆಯ ಮೇಲೆ ಅಭ್ಯರ್ಥಿಯ ಹೆಸರು ಮತ್ತು ಪ್ರಶ್ನೆ ಪತ್ರಿಕೆಯ ಸೀರಿಯಲ್‌ ಸಂಖ್ಯೆ ಮುದ್ರಿತ ರೂಪದಲ್ಲಿರುತ್ತದೆ. ಪ್ರಶ್ನೆ ಪತ್ರಿಕೆಗಳನ್ನು ವಿತರಿಸುವಾಗ ಮೇಲ್ವಿಚಾರಕರು ಎಚ್ಚರಿಕೆ ವಹಿಸಬೇಕು. ಅಂಧ ವಿದ್ಯಾರ್ಥಿಗಳ ಜೊತೆಗೆ ಒಬ್ಬರು ಸಹಾಯಕರನ್ನು
ಕರೆತರಲು ಅವಕಾಶವಿದೆ. ಅವರ ಗುರುತಿನ ಚೀಟಿ ಪಡೆದು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು ಎಂದು ತಿಳಿಸಿದರು. ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ಪರೀಕ್ಷಾ ವೀಕ್ಷಕರು, ರೂಟ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next