ಬೆಂಗಳೂರು: ಸರಕಾರವನ್ನು ಅಸ್ಥಿರಗೊಳಿಸುವ ಮತ್ತು ನಮ್ಮ ತೇಜೋವಧೆ ಮಾಡಲು ಹೊರಟ ಬಿಜೆಪಿ ಷಡ್ಯಂತ್ರ ಸೋಲಿಸಲು ಪಕ್ಷದ ಕಾರ್ಯಕರ್ತರು ಎಲ್ಲ ರೀತಿಯಲ್ಲಿ ಸಜ್ಜಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಗರದ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಬುಧವಾರ ಗಾಂಧಿ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಗಾಂಧಿ ಭಾರತ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ ಗ್ರಾಮೀಣ ಭಾಗದಲ್ಲಿನ ಸಾವಿರಾರು ಕುಟುಂಬಗಳಿಗೆ ಸರಕಾರ ನೆರವಾಗಿದೆ. ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದು, ಇದರಿಂದ ಪ್ರತಿ ಕುಟುಂಬಗಳಿಗೆ ವಾರ್ಷಿಕ ತಲಾ 40-50 ಸಾವಿರ ರೂ. ದೊರೆಯುತ್ತಿದೆ.
ರಾಜ್ಯ ಆರ್ಥಿಕ ದಿವಾಳಿ ಆಗುತ್ತದೆ ಎಂದೆಲ್ಲ ಹೇಳಿದ್ದ ವಿಪಕ್ಷಗಳ ಲೆಕ್ಕಾಚಾರ ತಲೆಕೆಳಗಾಗಿದೆ. ಪರಿಣಾಮ ಹೊಟ್ಟೆ ಉರಿಯಿಂದ ನಮ್ಮ ಮೇಲೆ ಗೂಬೆ ಕೂರಿಸುವ ಮತ್ತು ತೇಜೋವಧೆ ಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಅದಕ್ಕೆ ಜೆಡಿಎಸ್ ಕೂಡ ಕೈಜೋಡಿಸುತ್ತಿದ್ದು, ಕೇಂದ್ರ ಕೂಡ ಶಾಮೀಲಾಗಿದೆ. ಆದರೆ, ಈ ಷಡ್ಯಂತ್ರ ಸೋಲಿಸಲು ಪಕ್ಷದ ಕಾರ್ಯಕರ್ತರು ಎಲ್ಲ ರೀತಿಯಲ್ಲಿ ಸಜ್ಜಾಗಬೇಕು ಎಂದು ಹೇಳಿದರು.
ಬಿಜೆಪಿ ಯಾವತ್ತೂ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯ ಹಾಗೂ ಸಂವಿಧಾನಕ್ಕೆ ವಿರುದ್ಧವಾಗಿದೆ. ಗಾಂಧಿ ಭಾರತವನ್ನು ಅವರು ಗೋಡ್ಸೆ ಭಾರತ ಮಾಡಲು ಹೊರಟಿದ್ದಾರೆ. ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವುದು ಅವರ ಉದ್ದೇಶವಾಗಿದೆ. ಯಾವತ್ತೂ ಅವರಿಗೆ ಗಾಂಧಿ ನಾಯಕ ಅಲ್ಲವೇ ಅಲ್ಲ. ಗೋಡ್ಸೆ ಅವರ ನಾಯಕ ಎಂದು ವಾಗ್ಧಾಳಿ ನಡೆಸಿದ ಸಿಎಂ, ಐಕ್ಯತೆ, ಅಹಿಂಸೆಗೆ ಒತ್ತುಕೊಟ್ಟ ಗಾಂಧಿ ಪ್ರಜ್ಞೆಯೇ ದೇಶದ ಪ್ರಜ್ಞೆಯಾಗಿದೆ. ಅವರ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಗೋಡ್ಸೆ ಭಾರತವಾಗಲು ಬಿಡಬಾರದು ಎಂದು ತಿಳಿಸಿದರು.
ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿ ಹೆಸರು ಅಜರಾಮರವಾಗಿದೆ. ಅದರಂತೆ ಕಾಂಗ್ರೆಸ್ ಕೂಡ ಯಾವಾಗಲೂ ಶಾಶ್ವತವಾಗಿರುತ್ತದೆ. ಕೆಲವರು ಇದನ್ನು ನಾಶ ಮಾಡುವುದಾಗಿ ಹೇಳುತ್ತಿದ್ದಾರೆ. ಆದರೆ, ಯಾರಿಂದಲೂ ಅದನ್ನು ತೊಡೆದುಹಾಕಲು ಸಾಧ್ಯವಿಲ್ಲ ಎಂದು ಹೇಳಿದರು. ಇದಕ್ಕೂ ಮುನ್ನ ಮಹಾತ್ಮ ಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್‌ಬಹಾದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್. ಶಂಕರ್ ಮತ್ತಿತರರು ಇದ್ದರು.