ಹುಬ್ಬಳ್ಳಿ: ಸಾರಿಗೆ ನಿಗಮಗಳಲ್ಲಿ ವೆಚ್ಚ ತಗ್ಗಿಸಲು, ಸಿಬ್ಬಂದಿ ಕೊರತೆ ನೀಗಿಸುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಚಾಲಕರ ನೇಮಕ ಯತ್ನ ನಡೆದಿದೆ. ಇದು ಸಾರಿಗೆ ವ್ಯವಸ್ಥೆಯ ಖಾಸಗೀಕರಣದ ಹುನ್ನಾರವಾಗಿದೆ ಎಂಬುದು ಸಾರಿಗೆ ನೌಕರರ ಸಂಘಟನೆಗಳ ಆರೋಪವಾಗಿದ್ದು, ಇದರ ವಿರುದ್ಧ ಧ್ವನಿ ಎತ್ತಲು ನಿರ್ಧರಿಸಿವೆ.
ಸಾರಿಗೆ ನಿಗಮಗಳಲ್ಲಿ ನಿವೃತ್ತಿ, ವರ್ಗಾವಣೆ, ಇನ್ನಿತರ ಕಾರಣಗಳಿಗಾಗಿ ಖಾಲಿಯಾಗಿರುವ ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಬೇಕಾಗಿದೆ. ಆದರೆ, ಸಾರಿಗೆ ಸಂಸ್ಥೆಗಳ ಬಲವರ್ಧನೆ ಹಾಗೂ ಆರ್ಥಿಕ ಸಂಕಷ್ಟದಿಂದ ಹೊರಬರುವ ನಿಟ್ಟಿನಲ್ಲಿ ಸರ್ಕಾರ ನೇಮಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಆರ್.ಶ್ರೀನಿವಾಸ ಮೂರ್ತಿ ನೇತೃತ್ವದ ಕಮಿಟಿ, ವೆಚ್ಚ ಕಡಿತಗೊಳಿಸಲು, ಹೊಸ ಸಿಬ್ಬಂದಿ ನೇಮಕ ಮಾಡಿಕೊಳ್ಳದಿರಲು, ನಿರ್ವಾಹಕರ ರಹಿತ ಬಸ್‌ಗಳ ಸಂಚಾರ ಸೇರಿದಂತೆ ವಿವಿಧ ಶಿಫಾರಸುಗಳ ವರದಿ ನೀಡಿದ ಹಿನ್ನೆಲೆಯಲ್ಲಿ ಸರ್ಕಾರ ಸಾರಿಗೆ ನಿಗಮಗಳಲ್ಲಿ ಚಾಲಕ-ನಿರ್ವಾಹಕರ ಹುದ್ದೆಗಳ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ ಎನ್ನಲಾಗಿದೆ.
ಸಾರಿಗೆ ನಿಗಮಗಳಲ್ಲಿ ಪ್ರಸ್ತುತ 1.25 ಲಕ್ಷ ಹುದ್ದೆಗಳು ಮಂಜೂರಾಗಿದ್ದರೆ, 1.07 ಲಕ್ಷ ಜನರು ಕಾರ್ಯನಿರ್ವಹಿಸುತ್ತಿದ್ದು, ಇನ್ನೂ 16 ಸಾವಿರ ಹುದ್ದೆಗಳು ಖಾಲಿಯಾಗಿಯೇ ಉಳಿದಿವೆ. ಕಲ್ಯಾಣ ಕರ್ನಾಟಕದಲ್ಲಿ ಸುಮಾರು 1,200 ಚಾಲಕರು ಕೊರತೆ ಇದ್ದರೆ, ಬಿಎಂಟಿಸಿಯಲ್ಲಿ 33 ಸಾವಿರ ಚಾಲಕರಲ್ಲಿ 29 ಸಾವಿರ ಚಾಲಕರು ಇದ್ದು, ಸುಮಾರು 4 ಸಾವಿರ ಚಾಲಕರ ಕೊರತೆ ಇದೆ.
ವಾಯವ್ಯ ಸಾರಿಗೆ ಹಾಗೂ ಕೆಎಸ್ ಆರ್‌ಟಿಸಿಯಲ್ಲೂ ಚಾಲಕರ ಕೊರತೆ ಎದ್ದು ಕಾಣುತ್ತಿದೆ. ಸರ್ಕಾರ ಅಂತರ್ ನಿಗಮಗಳ ವರ್ಗಾವಣೆಗೆ ಅವಕಾಶ ನೀಡಿದ್ದರಿಂದ ಹಲವರು ತಮ್ಮ ಸ್ವಂತ ಜಿಲ್ಲೆಗಳಿಗೆ ವರ್ಗಗೊಂಡಿದ್ದು, ಕೆಎಸ್ ಆರ್‌ಟಿಸಿ ಹಾಗೂ ಬಿಎಂಟಿಸಿಯವರು ನಿವೃತ್ತ ನೌಕರರಿಗೆ ಗುತ್ತಿಗೆ ಆಧಾರದಲ್ಲಿ ಆಗಮಿಸುವಂತೆ ಕೋರಿದರೂ ನಿರೀಕ್ಷಿತ ಫಲ ದೊರೆತಿಲ್ಲ. ಕೆಎಸ್‌ಆರ್‌ಟಿಸಿ ನಿಗಮದಲ್ಲಿ ಸುಮಾರು 8,206 ಬಸ್ ಗಳಿದ್ದರೆ, ವಾಯವ್ಯ ಸಾರಿಗೆ ನಿಗಮದಲ್ಲಿ 4,560 ಬಸ್‌ಗಳು, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಲ್ಲಿ 4,503 ಬಸ್‌ಗಳು, ಬಿಎಂಟಿಸಿಯಲ್ಲಿ 6,769 ಬಸ್‌ಗಳು ಇದ್ದು, ಎಲ್ಲ ಕಡೆಯೂ ಚಾಲಕರ ಕೊರತೆ ಸಾಕಷ್ಟು ಇದೆ.
ಕಕ ಸಾರಿಗೆಯಿಂದ 400 ಚಾಲಕರ ನೇಮಕ?: ಚಾಲಕರ ಕೊರತೆ ನೀಗಿಸುವ ನಿಟ್ಟಿನಲ್ಲಿ ಈಗಾಗಲೇ ವ್ಯಾಯವ್ಯ ಸಾರಿಗೆ ಹಾಗೂ ಕೆಎಸ್‌ಆರ್‌ಟಿಸಿಯಲ್ಲಿ ಹೊರಗುತ್ತಿಗೆ ಚಾಲಕರ ನೇಮಕ ನಿಟ್ಟಿನಲ್ಲಿ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಇದನ್ನು ಆಧಾರವಾಗಿಟ್ಟುಕೊಂಡೇ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ತಾನು ಹೊರಗುತ್ತಿಗೆ ಚಾಲಕರ ನೇಮಕಕ್ಕೆ ಟೆಂಡರ್ ಕರೆಯುವ ನಿರ್ಣಯ ಕೈಗೊಂಡಿದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಚೇರಿ ಕಲಬುರಗಿಯಲ್ಲಿ ಸೆ.12-13ರಂದು ನಡೆದ ಸಭೆಯಲ್ಲಿ ಸುಮಾರು 400 ಜನ ಹೊರಗುತ್ತಿಗೆ ಚಾಲಕರನ್ನು ನೇಮಕಕ್ಕೆ ಟೆಂಡರ್ ಕರೆಯುವ ನಿರ್ಧಾರ ಕೈಗೊಳ್ಳಲಾಗಿದೆ. ವಾಯವ್ಯ-ಕೆಎಸ್ ಆರ್‌ಟಿಸಿ ನಿಗಮಗಳಲ್ಲಿ ಕೈಗೊಂಡ ಹೊರಗುತ್ತಿಗೆ ಚಾಲಕರ ನೇಮಕ ಟೆಂಡರ್ ಉಲ್ಲೇಖದಡಿ ಇದನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಲಾಗಿದೆ.
ಮಾಸಿಕ ವೇತನ ಎಷ್ಟು?
ಸಾರಿಗೆ ನಿಗಮಗಳಲ್ಲಿ ಹೊರಗುತ್ತಿಗೆಯಾಗಿ ನೇಮಕ ಮಾಡಿಕೊಳ್ಳುತ್ತಿರುವ ಚಾಲಕರಿಗೆ ಮಾಸಿಕ 20 ಸಾವಿರ ರೂ.ಗಳ ವೇತನ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ. ಕಾಯಂ ಚಾಲಕರಿಗೆ ನೀಡುವ ವೇತನಕ್ಕಿಂತ ಕಡಿಮೆ ಜತೆಗೆ ವಿವಿಧ ಭತ್ಯೆಗಳು, ಸೌಲಭ್ಯಗಳ ನೀಡಿಕೆಯೂ ತಪ್ಪಲಿದೆ ಎಂಬುದು ಸರ್ಕಾರದ ಲೆಕ್ಕಾಚಾರ. ಆದರೆ, ಕಾಯಂ ಚಾಲಕರಿಗೆ ಇರುವ ಕೆಲಸದ ಬದ್ಧತೆ, ಶಿಸ್ತು, ಸುರಕ್ಷತೆ ವಿಷಯ ಹೊರಗುತ್ತಿಗೆ ಚಾಲಕರಿಂದ ನಿರೀಕ್ಷೆ ಸಾಧ್ಯವೇ
ಎಂಬುದು ಸಾರಿಗೆ ನೌಕರರ ಸಂಘಟನೆಗಳ ಪ್ರಶ್ನೆಯಾಗಿದೆ.
ಮುಂದಿನ ದಿನಗಳಲ್ಲಿ ಸಾರಿಗೆ ನಿಗಮಗಳಲ್ಲಿ ನಿವೃತ್ತರಾಗುವ, ಮೃತರಾಗುವ ನೌಕರರ ಹುದ್ದೆಗಳು ಖಾಲಿಯಾದಾಗ ಅವುಗಳಿಗೆ ಕಾಯಂ ನೌಕರರನ್ನು ನೇಮಕ ಮಾಡದೆ ಹೊರಗುತ್ತಿಗೆ ನೌಕರರನ್ನು ನೇಮಕ ಮಾಡುತ್ತ ಹೋಗಿ ಮುಂದಿನ ದಿನಗಳಲ್ಲಿ ಇಡೀ ಸಾರಿಗೆ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುವ ಹುನ್ನಾರ ಸ್ಪಷ್ಟ ರೂಪದಲ್ಲಿ ಗೋಚರಿಸುತ್ತಿದೆ. ಆರ್.ಶ್ರೀನಿವಾಸ ಮೂರ್ತಿ ನೇತೃತದ ಕಮಿಟಿ ಈಗಾಗಲೇ ಸಾರಿಗೆ ನಿಮಗಳಲ್ಲಿನ ವರ್ಕ್‌ಶಾಪ್‌ಗ್ಳನ್ನು ಮುಚ್ಚುವಂತೆಯೂ, ರಿಪೇರಿ, ಇತರೆ ಕಾರ್ಯಗಳನ್ನು ಹೊರಗುತ್ತಿಗೆ ಮೂಲಕ ಕೈಗೊಳ್ಳುವಂತೆ, ನಿರ್ವಾಹಕ ರಹಿತ ಬಸ್‌ಗಳ ಸಂಚಾರ ಸೇರಿದಂತೆ ವಿವಿಧ ಶಿಫಾರಸುಗಳ ಜಾರಿಗೆ ಸರ್ಕಾರ ಒಂದೊಂದೆ ಹೆಜ್ಜೆ ಇರಿಸುತ್ತಿದೆ. ಸಾಮಾಜಿಕ ಚಿಂತನೆ, ಸೇವಾ ದೃಷ್ಟಿಯಿಂದ ಸಾರಿಗೆ ವ್ಯವಸ್ಥೆಯನ್ನು ರಾಷ್ಟ್ರೀಕರಣ ಮಾಡಲಾಗಿತ್ತೋ ಇದೀಗ ಅದೆಲ್ಲವನ್ನು ಮರೆತು ಸರ್ಕಾರ ಮತ್ತೆ ಖಾಸಗೀಕರಣದತ್ತ ಹೆಜ್ಜೆ ಹಾಕುತ್ತಿದೆ ಎಂಬುದು ಸಾರಿಗೆ ನೌಕರರ ಸಂಘಟನೆಗಳ ಆರೋಪವಾಗಿದೆ.
ಅಮರೇಗೌಡ ಗೋನವಾರ