ಹುಬ್ಬಳ್ಳಿ: ಪೊಲೀಸ್ ಇಲಾಖೆಯ ನಾಲ್ಕು ಸಾವಿರ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಹು-ಧಾ ಪೊಲೀಸ್ ಆಯುಕ್ತರ ಕಚೇರಿಗೆ ಬುಧವಾರ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ವರ್ಷದ ಹಿಂದೆ 33 ಸಾವಿರ ಹುದ್ದೆ ಖಾಲಿ ಇತ್ತು. ಈಗ 16 ಸಾವಿರ ಹುದ್ದೆಗಳು ಮಾತ್ರ ಖಾಲಿ ಇವೆ. ಅದರಲ್ಲಿ ನಾಲ್ಕು ಸಾವಿರ ನೇಮಕಾತಿ ಆಗುತ್ತಿದೆ. ಆಗ 12 ಸಾವಿರ ಹುದ್ದೆಗಳು ಖಾಲಿ ಉಳಿಯುತ್ತದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಕಳೆದ ಮೂರು ವರ್ಷದಿಂದ ಪ್ರತಿವರ್ಷ ನೇಮಕಾತಿ ಆಗುತ್ತಿದೆ. 900 ಪಿಎಸ್‌ಐಗಳು ಬರುತ್ತಿದ್ದಾರೆ. ಠಾಣೆಗಳನ್ನು ಉನ್ನತೀಕರಿಸಲಾಗಿದೆ. ಇನ್‌ಸ್ಟೆಕ್ಟರ್ ದರ್ಜೆಗೆ ಏರಿಸಲಾಗಿದೆ. ಕಾನ್‌ಸ್ಟೆಬಲ್‌ಗಳಿಗೆ ಡಬಲ್ ಬೆಡ್‌ರೂಮ್ ಮನೆ ನೀಡಲಾಗುತ್ತಿದೆ ಎಂದರು.
ಸಿಬ್ಬಂದಿ ಉತ್ತಮವಾಗಿದ್ದರೆ ಒಂದು ವರ್ಷದೊಳಗೆ ವರ್ಗಾವಣೆ ಮಾಡಬೇಕೆಂದೆನ್ನಿಲ್ಲ. ಅವರು ದಕ್ಷವಾಗಿ ಕೆಲಸ ಮಾಡುತ್ತಿದ್ದರೆ 2-3 ವರ್ಷ ಅಲ್ಲಿಯೇ ಮುಂದುವರಿಸಬಹುದು.ಆದರೆ, ಕೆಟ್ಟ ಕೆಲಸ ಮಾಡುತ್ತಿದ್ದರೆ ಅಂತಹ ಅಧಿಕಾರಿ ಅಲ್ಲಿರುವುದು ಬೇಡ. ಅವರನ್ನು ಆದಷ್ಟು ಬೇಗ ಅಲ್ಲಿಂದ ತೆಗೆದು ಹಾಕಬೇಕು. ಇಲ್ಲವಾದರೆ 2-3 ವರ್ಷವೆಂದು ಇಟ್ಟುಕೊಂಡರೆ ಅವರು ಕೆಎಟಿಗೆ ಹೋಗಿ ತಡೆಯಾಜ್ಞೆ ತರಬಹುದು ಎಂದರು.
ಹು-ಧಾದಲ್ಲಿಎಷ್ಟು ಜನಸಂಖ್ಯೆಇದೆ. ಇನ್ನೆಷ್ಟುಪೊಲೀಸ್ ಠಾಣೆಗಳ ಅವಶ್ಯಕತೆ ಇದೆಯೆಂಬ ಬಗ್ಗೆ ಆಯುಕ್ತರು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ಯೋಚಿಸಲಾಗುವುದು. ಹು-ಧಾ ಪೊಲೀಸ್ ಕಮೀಷನರೇಟ್ ಘಟಕ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹೇಗಿದೆ. ನಮ್ಮಿಂದ ಯಾವುದಾದರೂ ಸಲಹೆ ಬೇಕೇ ಎಂಬುದರ ಬಗ್ಗೆ ಚರ್ಚಿಸಿದ್ದೇನೆ ಎಂದರು.
ಮಾಜಿ ಸಚಿವ ಶಿವರಾಜ ತಂಗಡಗಿ ಅವರು ಯಾರು ಡ್ರಗ್ಸ್ ತೆಗೆದುಕೊಳ್ಳುತ್ತಾರೆ. ಇಲ್ಲವೆಂದು ಲಘುವಾಗಿ ಮಾತನಾಡಿದರ ಬಗ್ಗೆ ಪ್ರತಿಕ್ರಿಯಿಸಲ್ಲ. ಆದರೆ ಅವರಿಗೆ ಹೇಗೆ ಬುದ್ಧಿ ಹೇಳಬೇಕೋ ಗೊತ್ತಾಗುತ್ತಿಲ್ಲ. ತಂಗಡಗಿ ರಾಜಕೀಯವಾಗಿ ಆರೋಪ ಮಾಡುವುದು ಸರಿಯಲ್ಲ ಎಂದರು. ಆಯುಕ್ತ ಲಾಭೂ ರಾಮ, ಡಿಸಿಪಿ ಕೆ. ರಾಮರಾಜನ್ ಸೇರಿದಂತೆ ಅಧಿಕಾರಿಗಳು ಇದ್ದರು.