Advertisement

Raichur; ಶೀಘ್ರ 1500 ವಿಎಗಳ ನೇಮಕಾತಿಗೆ ಚಾಲನೆ: ಸಚಿವ ಕೃಷ್ಣ ಬೈರೇಗೌಡ

02:30 PM Jan 16, 2024 | Team Udayavani |

ರಾಯಚೂರು: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 1500 ಗ್ರಾಮ ಲೆಕ್ಕಾಧಿಕಾರಿ ಹುದ್ದೆ ಭರ್ತಿ ಮಾಡಲಾಗುವುದು ಎಂದು ಕಂದಾಯ ಇಲಾಖೆ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

Advertisement

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ನೇಮಕ ಪ್ರಕ್ರಿಯೆಗೆ ಸಚಿವ ಸಂಪುಟದ ಒಪ್ಪಿಗೆ ಆಗುವುದೊಂದೇ ಬಾಕಿಯಿದೆ. ಫೆಬ್ರವರಿಯಲ್ಲಿ ಭರ್ತಿ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ಜತೆಗೆ ರಾಜ್ಯದಲ್ಲಿ 357 ಸರ್ವೆಯರ್ ಹುದ್ದೆ ತುಂಬಲಾಗುವುದು. ಇನ್ನೂ 590 ಹುದ್ದೆ ಭರ್ತಿಗೆ ಇನ್ನೂ ಒಂದು ತಿಂಗಳಲ್ಲಿ ಅನುಮೋದನೆ ನೀಡಲಾಗುವುದು. 750 ಜನ ಲೈಸೆನ್ಸಡ್ ಸರ್ವೆಯರ್ಸ್ ಗೆ ತರಬೇತಿ ಕೊಟ್ಟಿದ್ದು, ಅವರು ಕೂಡ ಕಾರ್ಯಾರಂಭಿಸುತ್ತಾರೆ ಎಂದರು.

ಒಂದು ವಾರದಲ್ಲಿ ಬರ ಪರಿಹಾರದ ಮೊದಲ ಕಂತಿನ ಹಣ ಪಾವತಿಯಾಗಲಿದೆ. ಹಿಂದೆ ಬರ ಪರಿಹಾರ, ಅತಿವೃಷ್ಟಿ ಪರಿಹಾರ ನೀಡುವಲ್ಲಿ ಸಾಕಷ್ಟು ನ್ಯೂನ್ಯತೆಗಳಿದ್ದವು. ಬೆಳೆ ಬೆಳೆಯದವರಿಗೂ ಪರಿಹಾರ ಸಿಗುತ್ತಿತ್ತು. ಬೆಳೆ ಹಾನಿಯಾದವರಿಗೆ ಪರಿಹಾರ ಸಿಗುತ್ತಿರಲಿಲ್ಲ. ಯಾರದೋ ಜಮೀನು ಮತ್ತೊಬ್ಬರಿಗೆ ಹಣ ಪಾವತಿಯಾಗಿದೆ. ಅಧಿಕಾರಿಗಳು ಮಾಹಿತಿ ಸೇರಿಸುವಾಗ ತಪ್ಪುಗಳಾಗುತ್ತಿದ್ದವು.  ಇದೆಲ್ಲ ಸರಿ ಮಾಡಿ ಬೆಳೆ ಸಮೀಕ್ಷೆ ಆಧಾರದಲ್ಲಿ ಹಣ ಪಾವತಿಯಾಗುತ್ತದೆ. 12 ಲಕ್ಷ ಜನಕ್ಕೆ ಆರ್‌ಬಿಐಗೆ ಪೇಮೆಂಟ್ ಆರ್ಡರ್ ಕಳುಹಿಸಿದ್ದೇವೆ. ಇನ್ನೂ 20 ಲಕ್ಷ ಜನರ ಪೇಮೆಂಟ್ ಆರ್ಡರ್ ಒಂದು ವಾರದಲ್ಲಿ ಕಳುಹಿಸುತ್ತೇವೆ. 25-30 ಲಕ್ಷ ಜನರಿಗೆ ಪರಿಹಾರ ಸಿಗುತ್ತದೆ ಎಂದರು.

ಕೇಂದ್ರ ಸರ್ಕಾರಕ್ಕೆ ಬರ ಪರಿಹಾರ ನೀಡಲು ಮನವಿ ಮಾಡಿದ್ದು, ನಮಗೆ ಹಣ ಬಂದಿಲ್ಲ. ಹೀಗಾಗಿ ರಾಜ್ಯ ಸರ್ಕಾರವೇ ರೈತರಿಗೆ 2 ಸಾವಿರ ರೂ. ಪರಿಹಾರ ನೀಡಲು ನಿರ್ಧರಿಸಿದ್ದೇವೆ. ಮೊದಲ ಕಂತಿನ ಹಣ 800-900 ಕೋಟಿ ಆಗುತ್ತದೆ. ಎಲ್ಲ ಸೇರಿ 18,172 ಕೋಟಿ ಪರಿಹಾರ ಕೇಂದ್ರಕ್ಕೆ ಕೇಳಿದ್ದೇವೆ. ಎನ್‌ಡಿಆರ್‌ಎಫ್, ಎಸ್‌ಡಿಆರ್ ಎಫ್ ನಿಯಮಗಳ ಪ್ರಕಾರ ನೀಡುವ ಪರಿಹಾರ ರೈತರ ಖರ್ಚಿಗೆ ತಾಳೆಯಾಗುವುದಿಲ್ಲ  ಪ್ರಧಾನಮಂತ್ರಿ, ಗೃಹಸಚಿವರಿಗೆ ನಿಯಮಗಳ ಪರಿಷ್ಕರಣೆಗೆ ಮನವಿ ಮಾಡಿದ್ದೇವೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next