Advertisement

ಮಳೆ ಕೊರತೆಯಲ್ಲಿ ದಾಖಲೆ

01:39 AM Jun 03, 2019 | Team Udayavani |

ನವದೆಹಲಿ: ಪ್ರಸಕ್ತ ವರ್ಷ ಮುಂಗಾರು ವಿಳಂಬವಾಗಿದ್ದು, ಇಡೀ ದೇಶವೇ ಮುಂಗಾರಿನ ಸಿಂಚನಕ್ಕಾಗಿ ಕಾದು ಕುಳಿತಿದೆ. ಇದೇ ವೇಳೆ, ಮುಂಗಾರು ಪೂರ್ವ ಮಳೆ ಕೊರತೆ ಕುರಿತ ಆಘಾತಕಾರಿ ವರದಿಯೊಂದು ಹೊರಬಿದ್ದಿದೆ. ಅದೇನೆಂದರೆ, ಕಳೆದ 65 ವರ್ಷಗಳಲ್ಲಿ 2ನೇ ಬಾರಿಗೆ ಭಾರತವು ಈ ವರ್ಷ ಮುಂಗಾರು ಪೂರ್ವ ಮಳೆಯ ಕೊರತೆ ಎದುರಿಸಿದೆ.

Advertisement

ಹೌದು, ಈ ವರ್ಷ ಬಿದ್ದ ಮುಂಗಾರು ಪೂರ್ವ ಮಳೆಯ ಪ್ರಮಾಣ ಕೇವಲ 99 ಮಿ.ಮೀ. ಮಾತ್ರ. ಅಂದರೆ, 65 ವರ್ಷಗಳ ಅವಧಿಯಲ್ಲಿ 2ನೇ ಬಾರಿಗೆ ದೇಶದಲ್ಲಿ ಮುಂಗಾರಿಗೆ ಮೊದಲು ಬೀಳುವ ಮಳೆಯಲ್ಲಿ ಗಣನೀಯ ಕುಸಿತ ಕಂಡುಬಂದಿದೆ. 1954ರಲ್ಲಿ 93.9 ಮಿ.ಮೀ. ಮಳೆಯಾಗುವ ಮೂಲಕ ಅತಿ ಹೆಚ್ಚಿನ ಮಳೆ ಕೊರತೆ ಉಂಟಾಗಿತ್ತು. ಇದಾದ ಬಳಿಕ ಇದೇ ಮೊದಲ ಬಾರಿಗೆ ಮಳೆ ಪ್ರಮಾಣ ಇಷ್ಟೊಂದು ಕುಸಿತಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಅಂಕಿ ಅಂಶಗಳು ತಿಳಿಸಿವೆ.

ಹೆಚ್ಚು ಕೊರತೆ ಎಲ್ಲಿ?: ಕೃಷಿಗೆ, ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಹಾಗೂ ಮಣ್ಣಿನ ಆದ್ರರ್ತೆ ಕಾಪಾಡಲು ಮುಂಗಾರು ಪೂರ್ವ ಮಳೆ ಅತ್ಯಗತ್ಯ. ಆದರೆ, ಈ ವರ್ಷ ಮಹಾರಾಷ್ಟ್ರದ ಮಧ್ಯ ಭಾಗ, ಮರಾಠವಾಡ ಮತ್ತು ವಿದರ್ಭ ಪ್ರಾಂತ್ಯ, ಕೊಂಕಣ-ಗೋವಾ, ಗುಜರಾತ್‌ನ ಸೌರಾಷ್ಟ್ರ ಮತ್ತು ಕಛ್, ಕರಾವಳಿ ಕರ್ನಾಟಕ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ಈ ವರ್ಷ ಮಳೆಯ ಕೊರತೆ ತೀವ್ರವಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳು, ಹಿಮಾಚಲಪ್ರದೇಶ, ಉತ್ತರಾಖಂಡ, ಪಶ್ಚಿಮ ಉತ್ತರಪ್ರದೇಶ, ಕರ್ನಾಟಕದ ಉತ್ತರ ಒಳನಾಡು, ತೆಲಂಗಾಣ, ರಾಯಲಸೀಮಾ(ಆಂಧ್ರ)ಗಳಲ್ಲೂ ಮುಂಗಾರು ಪೂರ್ವ ಮಳೆ ಕೊರತೆಯಾಗಿದೆ.

ಬಿಸಿಲಿನ ಝಳಕ್ಕೆ ರೈತ ಬಲಿ
ನವದೆಹಲಿ:
ಉತ್ತರ ಭಾರತದಾದ್ಯಂತ ಬಿಸಿಲಿನ ಝಳ ಮುಂದುವರಿದಿದ್ದು, ಇನ್ನೂ 2 ದಿನಗಳ ಕಾಲ ಪರಿಸ್ಥಿತಿ ಹೀಗೇ ಇರಲಿದ್ದು, ನಂತರ ಕ್ರಮೇಣ ತಾಪಮಾನ ಕಡಿಮೆಯಾಗುತ್ತಾ ಬರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜಸ್ಥಾನದಲ್ಲಿ ಭಾನುವಾರ 48.9 ಡಿ.ಸೆ. ತಾಪಮಾನ ದಾಖಲಾಗಿದ್ದು, ಸೂರ್ಯನ ಶಾಖ ತಾಳಲಾರದೇ ರೈತರೊಬ್ಬರು ಅಸುನೀಗಿದ್ದಾರೆ. ರಾಜಸ್ಥಾನದ ಚುರುವಿನಲ್ಲಿ ಗರಿಷ್ಠ ಅಂದರೆ 48.9 ಡಿ.ಸೆ. ತಾಪಮಾನ ದಾಖಲಾಗಿದ್ದರೆ, ಗಂಗಾನಗರ, ಬಿಕಾನೇರ್‌, ಜೈಸಲ್ಮೇರ್‌, ಕೋಟಾ ಮತ್ತು ಬಾರ್ಮರ್‌ಗಳಲ್ಲೂ ತಾಪಮಾನ ಹೆಚ್ಚಳವಾಗಿ ಜನರು ಮನೆಗಳಿಂದ ಹೊರಬರಲು ಹೆದರುವಂತ ಸ್ಥಿತಿ ನಿರ್ಮಾಣವಾಗಿದೆ. ಇದೇ ವೇಳೆ, ಒಡಿಶಾದಲ್ಲಿ ಸುಮಾರು 10 ಪ್ರದೇಶಗಳಲ್ಲಿ ಉಷ್ಣತೆ 40 ಡಿ.ಸೆ. ಗಿಂತಲೂ ಹೆಚ್ಚಿದೆ ಎಂದು ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next